

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪ
ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾಕೂಟಗಳು ಸ್ಫೂರ್ತಿ ತುಂಬುತ್ತದೆ ಎಂದು ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸ್ಥಾಪಕಾಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಹೇಳಿದರು.
ಬೇಗೂರು ಕೇವ್ ರಿಟ್ಝ್ ರೆಸಾರ್ಟ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರಿಮಿಯರ್ ಲೀಗ್- ೩ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಐಪಿಎಲ್ ಮಾದರಿ ಪಂದ್ಯಾವಳಿ ನಡೆಯುತ್ತಿದೆ ಎನ್ನುವುದಕ್ಕೆ ವಿಶಿಷ್ಟ ರೀತಿ ಟ್ರೋಫಿ ಅನಾವರಣ ಮಾಡಿರುವುದೇ ಸಾಕ್ಷಿ ಎಂದು ಬಣ್ಣಿಸಿದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಪಾಲಿಬೆಟ್ಟ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜನರಲ್ ಸರ್ಜನ್ ಡಾ. ಪಿ.ಎಸ್. ಲೋಹಿತ್ ಮಾತನಾಡಿ, ಕೌಟುಂಬಿಕ ಚೌಕಟ್ಟಿನೊಳಗೆ ಬದುಕುವುದರೊಂದಿಗೆ ಸಮಾಜಕ್ಕೆ ತುಡಿಯುವ ಪತ್ರಕರ್ತರ ಸೇವೆ ಅಭಿನಂದ ನಾರ್ಹ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೊಡಗು ಪ್ರೆಸ್ ಕ್ಲಬ್ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಎಂದು ಹೇಳಿದರು.
ಕೇವ್ ರಿಟ್ಝ್ ರೆಸಾರ್ಟ್ ಮಾಲೀಕ ಕೋಳೆರ ಗೌರವ್ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮುಳಿಯ ಜ್ಯುವೆಲ್ಸ್ ಮಡಿಕೇರಿ ಶಾಖಾ ವ್ಯವಸ್ಥಾಪಕ ತೀತಮಾಡ ಸೋಮಣ್ಣ ಟ್ರೋಫಿ ಅನಾವರಣ ಮಾಡಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಗೋಣಿಕೊಪ್ಪದ ಖ್ಯಾತ ವಕೀಲ ಪ್ರದೀಪ್ ಕುಮಾರ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಿ.ವಿ. ಅರುಣ್ ಕುಮಾರ್ ಪಾಲ್ಗೊಂಡಿದ್ದರು. ಕೆ.ಕೆ. ರೆಜಿತ್‌ಕುಮಾರ್ ನಿರೂಪಿಸಿ ದರು. ಚನ್ನನಾಯಕ್ ಪ್ರಾರ್ಥಿಸಿದರು. ಸುನಿಲ್ ಪೊನ್ನೇಟಿ ಸ್ವಾಗತಿಸಿದರು. ಎಂ.ಎನ್. ಚಂದ್ರಮೋಹನ್ ವಂದಿಸಿದರು.