ಪತ್ರಕರ್ತರು ತಾಂತ್ರಿಕವಾಗಿ ಅಪ್‌ಡೇಟ್ ಆಗಬೇಕು

23mdkj4 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಪತ್ರಕರ್ತರೂ ತಾಂತ್ರಿಕವಾಗಿ ಅಪ್‌ಡೇಟ್ ಆಗುವ ಅಗತ್ಯವಿದೆ ಎಂದು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು. ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ೩ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.’

ಮೊದಲೆಲ್ಲಾ ಪತ್ರಕರ್ತರು ಡೈರಿ, ಪೆನ್ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ, ಈಗ ಮೊಬೈಲ್ ಒಂದು ಇದ್ದರೆ ಸಾಕು, ಎಲ್ಲಾ ಕೆಲಸವನ್ನೂ ಸುಲಭವಾಗಿ ಮಾಡಬಹುದಾಗಿದೆ ಎಂದರು. ಪತ್ರಕರ್ತರ ಒತ್ತಡದ ಬದುಕಿನಲ್ಲಿ ಉಲ್ಲಾಸ ತುಂಬಲು ಕ್ರೀಡಾ ಚಟುವಟಿಕೆ ಗಳು ಹೆಚ್ಚು ಅನುಕೂಲವಾಗಿದೆ. ಕ್ರಿಕೆಟ್ ಬಾಂಧವ್ಯ ಬೆಸೆಯುತ್ತದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಯಶಸ್ವಿ ಯಾಗಿದೆ. ಇದೇ ರೀತಿಯಲ್ಲಿ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯಲಿರುವ ಸಾಂಸ್ಕೃತಿ ಸೇರಿದಂತೆ ಎಲ್ಲಾ ಬಗೆಯ ಕಾರ್ಯಕ್ರಮ ಗಳಲ್ಲೂ ಎಲ್ಲರೂ ಪಾಲ್ಗೊಳ್ಳುವಂತಾಗಬೇಕೆಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಜಿಲ್ಲೆಯಾದ್ಯಂತ ಕರ್ತವ್ಯನಿರ್ವಹಿಸುವ ವೃತ್ತಿ ಬಾಂಧವರನ್ನು ಪರಸ್ಪರ ಪರಿಚಯಿಸಲು, ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಕ್ರಿಕೆಟ್ ಸಹಕಾರಿ ಆಗಿದೆ ಎಂದರು. ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡಿದ್ದ ಪಂದ್ಯಾವಳಿ ಇದಾಗಿತ್ತು. ಈ ಆವೃತ್ತಿಯೂ ಯಶಸ್ವಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಮುಖ್ಯಅತಿಥಿಯಾಗಿ ಕೊಡಗು ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜೀರ ಅಯ್ಯಪ್ಪ, ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ ೩ ಸಂಚಾಲಕ ನವೀನ್ ಡಿಸೋಜಾ ಪಾಲ್ಗೊಂಡಿದ್ದರು. ಕೆ.ಜಿ. ರೆಜಿತ್‌ಕುಮಾರ್ ನಿರೂಪಿಸಿದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರು. ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net