

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ನೂತನ ಕಚೇರಿಯನ್ನು ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ ಪೂವಯ್ಯ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ವಿಶೇಷ ಪೂಜೆ ನೆರವೇರಿಸಲಾಯಿತು.
ಡಾ.ಯು.ಎಂ. ಪೂವಯ್ಯ ಅಧ್ಯಕ್ಷತೆಯಲ್ಲಿ ಪತ್ರಿಕಾ ಭವನದಲ್ಲಿ ಆಯೋಜಿತ ಆಚರಣಾ ಸಮಿತಿ ಸಭೆಯಲ್ಲಿ ಬೆಳ್ಳಿ ಮಹೋತ್ಸವ ಉಪಸಮಿತಿ ಗಳನ್ನು ರಚಿಸಲಾಯಿತು. ಸ್ಮರಣ ಸಂಚಿಕೆ ಸಂಚಾಲಕರಾಗಿ ಎಂ.ಎನ್. ಚಂದ್ರಮೋಹನ್, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಐಮಂಡ ಗೋಪಾಲ್ ಸೋಮಯ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ ಸಂತೋಷ್ ರೈ, ಆಹಾರ ಸಮಿತಿ ಸಂಚಾಲಕರಾಗಿ ಕುಡಿಯರ ದಿವಾಕರ ಭೋಜಪ್ಪ, ಲಕ್ಕಿಡಿಪ್ ಸಂಚಾಲಕರಾಗಿ ನವೀನ್ ಡಿಸೋಜ, ಸ್ವಾಗತ ಸಮಿತಿ ಸಂಚಾಲಕರಾಗಿ ಎ.ಆರ್. ಕುಟ್ಟಪ್ಪ, ಪ್ರಚಾರ ಸಮಿತಿ ಸಂಚಾಲಕ ರಾಗಿ ಸುನಿಲ್ ಪೊನ್ನೆಟ್ಟಿ, ವೇದಿಕೆ ಸಮಿತಿ ಸಂಚಾಲಕರಾಗಿ ಚೀಯಂಡಿ ತೇಜಸ್ ಪಾಪಯ್ಯ, ರಕ್ಷಣಾ ಸಮಿತಿ ಸಂಚಾರಕರಾಗಿ ನವೀನ್ ಸುವರ್ಣ, ಆರೋಗ್ಯ ಸಮಿತಿ ಸಂಚಾಲಕರಾಗಿ ಎ.ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.
ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಮಾತನಾಡಿ, ನೂತನ ಸಮಿತಿಗಳ ಪದಾಧಿಕಾರಿಗಳು ದೊರೆತ ಅವಕಾಶ ಬಳಸಿಕೊಂಡು ಉತ್ತಮ ಕಾರ್ಯಕ್ರಮ ಆಯೋಜಿಸಬೇಕು. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆರ್ಥಿಕ ಕ್ರೋಢೀಕರಣ ಕೂಡ ಮುಖ್ಯವಾಗಿದೆ. ಒಗ್ಗಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಕಾರ್ಯೋನ್ಮುಖರಾಗುವಂತೆ ಸಲಹೆ ಮಾಡಿದರು.
ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ ಪೂವಯ್ಯ ಮಾತನಾಡಿ, ಎಲ್ಲಾ ಸದಸ್ಯರು ಒಂದಾಗಿ ಮನೆ ಹಬ್ಬದಂತೆ ಬೆಳ್ಳಿ ಮಹೋತ್ಸವ ಆಚರಿಸುವಂತಾಗಬೇಕು. ಅರ್ಥಪೂರ್ಣ ಹಾಗೂ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳೊಂದಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯ ಕ್ರಮ ಆಯೋಜಿಸಿದಲ್ಲಿ ಸಾರ್ಥಕತೆ ದೊರೆಯಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.
ಜನವರಿ ೭ ರಂದು ಚಿತ್ರಕಲಾ ಸ್ಪರ್ಧೆ
ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಚಾಲನೆಯನ್ನು ಜನವರಿ ೭ ರಂದು ಬೆಳ್ಳಿ ಮಹೋತ್ಸವ ಲಾಂಛನ ಬಿಡುಗಡೆ ಹಾಗೂ ಪತ್ರಕರ್ತರು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಚಾಲನೆ ನೀಡಲು ತೀರ್ಮಾನಿಸಲಾಯಿತು.
ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಎ.ಆರ್. ಕುಟ್ಟಪ್ಪ, ಗೌರಾವಾಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್ ಕುಮಾರ್ ಗುಹ್ಯ, ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಖಜಾಂಚಿ ಬೊಳ್ಳಜೀರ ಬಿ. ಅಯ್ಯಪ್ಪ ಮತ್ತಿತರರು ಇದ್ದರು.
ವಿನು ಕುಶಾಲಪ್ಪ ಪ್ರಾರ್ಥಿಸಿದರು. ಕೆ.ಕೆ. ರೆಜಿತ್‌ಕುಮಾರ್ ಸ್ವಾಗತಿಸಿ, ವಂದಿಸಿದರು.