

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಭಾಗಮಂಡಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಕಳೆದ ೧೦ ವರ್ಷಗಳಿಂದ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ತನಿಖೆ ಶೀಘ್ರ ಆರಂಭಿಸಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಆಗ್ರಹಿಸಿದ್ದಾರೆ.
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಹೆಸರಿನಲ್ಲಿ ಟನ್‌ಗಟ್ಟಲೆ ಕಳಪೆ ಮತ್ತು ಕಲಬೆರಕೆ ಜೇನಿನ ಅವ್ಯಾಹತ ಮಾರಾಟ ನಡೆದಿದೆ. ತೀರ್ಥಹಳ್ಳಿಯಿಂದ ಮಾತ್ರ ೪,೧೯,೮೭೨ ಕೆಜಿ ಜೇನು ಖರೀದಿಸಿದ್ದು, ೩.೦೨ ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ ೨ ತಿಂಗಳು ಕಳೆದರೂ ತನಿಖೆ ಆರಂಭವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.
ಕೇರಳ, ಪಂಜಾಬ್, ಛತ್ತೀಸ್‌ಘಡ್, ಕರ್ನಾಟಕದ ವಿವಿಧ ಭಾಗಗಳಿಂದ ಕೊಂಡುಕೊಳ್ಳಲಾದ ಒಟ್ಟು ವ್ಯವಹಾರಗಳ ಬಗ್ಗೆ ತನಿಖೆಯಾಗ ಬೇಕಾಗಿದ್ದು, ಕೂಡಲೇ ಲೋಕಾಯುಕ್ತ ತನಿಖೆ ಆರಂಭಿಸಬೇಕೆಂದು ಆಗ್ರಹಿಸಿದರು.
೧೦ ವರ್ಷಗಳಿಂದ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಮತ್ತು ನೌಕರರ ಕುಟುಂಬದವರ ಆದಾಯ ಮತ್ತು ಆಸ್ತಿ ಗಳಿಕೆ ಬಗ್ಗೆ ಇಡಿ ಮತ್ತು ಐಟಿ ತನಿಖೆ ನಡೆಯಬೇಕು. ಹಾಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯನ್ನು ತಕ್ಷಣವೇ ಅಮಾನತ್ತಿನಲ್ಲಿಡಬೇಕು. ಸಹಕಾರ ಸಂಘದಲ್ಲಿರುವ ಕಚ್ಚಾ ಮತ್ತು ಸಂಸ್ಕರಿಸಿದ ಜೇನನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಬೇಕಲ್ ರಮಾನಾಥ್ ಮಾತನಾಡಿ, ಹಗರಣದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುವ ಮತ್ತು ಪ್ರಕರಣ ಮುಚ್ಚಿ ಹಾಕಲೆತ್ನಿಸುತ್ತಿರುವ ಬಗ್ಗೆ ಸಂಶಯವಿದೆ. ಬಿಜೆಪಿ ಹಗರಣಗಳ ಸರ್ಕಾರವಾಗಿದ್ದು, ಅದಕ್ಕೆ ಕೊಡಗಿನಿಂದ ಪ್ರಗತಿಪರ ಜೇನು ಕೃಷಿಕರ ಸಹಕಾರಿ ಸಂಘ ಕೊಡುಗೆ ನೀಡಿದೆ. ತೀರ್ಥಹಳ್ಳಿಯಿಂದ ೬೦ ರೂ.ಗೆ ಪಡೆದ ಜೇನನ್ನು ಕೊಡಗಿನ ಜೇನೆಂದು ಮಾರಾಟ ಮಾಡಿ ವಂಚನೆ ಮಾಡುವುದರೊಂದಿಗೆ ಕೋಟ್ಯಂತರ ರೂಪಾಯಿ ಹಗಲು ದರೋಡೆ ಮಾಡಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ, ಪ್ರಮುಖರಾದ ಹರ್ಷ, ಪ್ರಕಾಶ್, ಮೋಹನ್‌ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.