ಪೊನ್ನತ್‌ಮೊಟ್ಟೆ ಕಾಳಜಿ ಕೇಂದ್ರ ಮುಚ್ಚಿದ್ದಕ್ಕೆ ಸಂತ್ರಸ್ತರ ಆಕ್ರೋಶ

19mdkj5 - Copy
Published on


ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ಪೊನ್ನತ್‌ಮೊಟ್ಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರವನ್ನು ಭಾನುವಾರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ. ನಮ್ಮ ಮನೆ ವಾಸಕ್ಕೆ ಯೋಗ್ಯ ವಾಗಿಲ್ಲ. ಹೀಗಾಗಿ ನಾವು ಕಾಳಜಿ ಕೇಂದ್ರದಿಂದ ಹೋಗುವುದಿಲ್ಲ ಎಂದು ಸಂತ್ರಸ್ತರು ಪಟ್ಟುಹಿಡಿದ್ದಾರೆ.

ಜು.೧೧ ರಂದು ಪೊನ್ನತ್‌ಮೊಟ್ಟೆಯ ೭ ಕುಟುಂಬ (೧೭ ಹೆಣ್ಣು, ೧೨ ಗಂಡು) ದ ೨೮ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಕಾಳಜಿ ಕೇಂದ್ರಕ್ಕೆ ತೆರಳು ಹಿಂಜರಿಯುತ್ತಿದ್ದವರ ಮನವೊಲಿಸಿ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈಗ ಮನೆಗೆ ಹೋಗಲು ಹಿಂಜರಿಯುತ್ತಿರುವ ಸಂತ್ರಸ್ತರನ್ನು ಬಲವಂತವಾಗಿ ಮನೆಗೆ ಹೋಗಲು ಒತ್ತಡ ಹೇರುತ್ತಿದ್ದಾರೆ.


ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗೆ ತೆರಳುತ್ತೇವೆ. ಅನಾಹುತ ಸಂಭವಿಸಿದ್ದಲ್ಲಿ ಅದರ ಜವಾಬ್ದಾರಿ ಅಧಿಕಾರಿಗಳು ಹೊತ್ತುಕೊಳ್ಳಬೇಕು. ಈ ಬಗ್ಗೆ ಲಿಖಿತವಾಗಿ ನೀಡಬೇಕೆಂದು ಸಂತ್ತಸ್ತರು ಪಟ್ಟುಹಿಡಿಯುತ್ತಿದ್ದಾರೆ. ಆದರೆ, ಹೀಗೆ ಬರೆದುಕೊಡಲು ಹಿಂದೇಟು ಹಾಕಿರುವ ಅಧಿಕಾರಿ ಗಳು, ಸಂಬಂಧಿಕರ ಮನೆಗೆ ತೆರಳುವಂತೆ ಮೌಖಿಕವಾಗಿ ಸೂಚಿಸುತ್ತಿದ್ದಾರೆ.


ಮಳೆ ಪ್ರಮಾಣ ಕಡಿಮೆಯದ ಕಾರಣ ತರಗತಿ ಪ್ರಾರಂಭವಾಗಿದೆ. ಶಾಲಾ ಮಕ್ಕಳಿಗೆ ಅನಾನುಕೂಲ ಆಗುವುದರಿಂದ ಶಾಲೆಯ ಕೊಠಡಿ ಗಳನ್ನು ತರಗತಿಗೆ ನೀಡಬೇಕಾಗಿದೆ. ಹೀಗಾಗಿ ೧೭ ರಂದು ಮಧ್ಯರಾತ್ರಿಯಿಂದ ಕಾಳಜಿ ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದು ಗೋಡೆಯಲ್ಲಿ ನೋಟೀಸ್ ಅಂಟಿಸಲಾಗಿದೆ.
ಅಪಾಯ ಎದುರಾಗಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಪೊನ್ನತ್‌ಮೊಟ್ಟೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಮಳೆ ಕಡಿಮೆ ಆಗಿರು ವುದರಿಂದ ಕಾಳಜಿ ಕೇಂದ್ರ ಸ್ಥಗಿತಗೊಳಿಸಿ, ಕೊಠಡಿಗಳನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿರುವವ ರನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಕುಶಾಲನಗರ ತಹಸೀಲ್ದಾರ್ ಪ್ರಕಾಶ್ ಹೇಳುತ್ತಾರೆ.


ಕಾಳಜಿ ಕೇಂದ್ರ ಮುಚ್ಚಿದ ಬಳಿಕವೂ ಸಂತ್ರಸ್ತರು ಕೇಂದ್ರದಲ್ಲಿಯೇ ಮುಂದುವರಿದ್ದಾರೆ. ಸಂತ್ರಸ್ತರಿಗೆ ಸೋಮವಾರ ಅಗತ್ಯವಾದ ಊಟೋಪಚಾರ ವ್ಯವಸ್ಥೆ ಚೆಟ್ಟಳ್ಳಿ ಗ್ರಾಪಂಯಿಂದ ಮಾಡಲಾಗಿದೆ. ಮಂಗಳವಾರ ಸ್ಥಳೀಯ ದಾನಿಗಳ ಸಹಾಯದಿಂದ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

**
ಅಪಾಯಕಾರಿ ಸ್ಥಳದಲ್ಲಿ ಇದ್ದಿದ್ದರಿಂದ ಕಾಳಜಿ ಕೇಂದ್ರಕ್ಕೆ ಪೊನ್ನತ್‌ಮೊಟ್ಟೆಯ ೭ ಕುಟುಂಬವನ್ನು ಸ್ಥಳಾಂತರಿಸಲಾಗಿತ್ತು. ಅಲ್ಲಿ ಯಾವ ಮನೆ ಯೂ ಬಿದ್ದಿಲ್ಲ. ಮನೆಗಳು ವಾಸಕ್ಕೆ ಯೋಗ್ಯವಾಗಿವೆ. ಮಡಿಕೇರಿ ಕಾಳಜಿ ಕೇಂದ್ರಕ್ಕೆ ತೆರಳು ಹಿಂಜರಿಯುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರಕಾಶ್, ತಹಸೀಲ್ದಾರ್, ಕುಶಾಲನಗರ.

**
ಕಾಳಜಿ ಕೇಂದ್ರ ಏಕೆ ಮುಚ್ಚಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮನೆ ಕುಸಿದು ಅನಾಹುತ ಸಂಭವಿಸಿದ್ದಲ್ಲಿ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ. ಕಾಳಜಿ ಕೇಂದ್ರ ಮುಚ್ಚಿರುವ ಕುಶಾಲನಗರ ತಹಸೀಲ್ದಾರ್ ಸಂತ್ರಸ್ತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲಿ. ಸಂತ್ತಸ್ತರಿಗೆ ಊಟದ ವ್ಯವಸ್ಥೆ ಬೇಡ. ಕನಿಷ್ಠ ರಾತ್ರಿ ವೇಳೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕು. ರಸೀನಾ, ಚೆಟ್ಟಳ್ಳಿ ಗ್ರಾಪಂ ಸದಸ್ಯೆ.

**
ತೀವ್ರತರನಾಗಿ ಹಾನಿಗೀಡಾಗಿರುವ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಕನಿಷ್ಠ ೧೦ ದಿನ ಕಾಳಜಿ ಕೇಂದ್ರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು. ಶಾಲೆಯಲ್ಲಿ ಬಳಸದ ೪ ಕೊಠಡಿ ಪೈಕಿ ೨ ಕೊಠಡಿ ಸಂತ್ರಸ್ತರಿಗೆ ಬಿಟ್ಟುಕೊಡಬೇಕು. ಸಂತ್ರಸ್ತರಿಂದ ಮಕ್ಕಳ ಶಿಕ್ಷಣಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮೊಹಮ್ಮದ್ ರಾಫಿ, ಮಾಜಿ ಸದಸ್ಯರು, ಚೆಟ್ಟಳ್ಳಿ ಗ್ರಾಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net