

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಪೊಲೀಸ್ ಕಚೇರಿ ನಗದು ವಿಭಾಗದಲ್ಲಿ ಹಣ ದುರುಪಯೋಗ ಪಡಿಸಿರುವುದು ಪ್ರಾಥಮಿಕ ವಿಚಾರಣೆಯಿಂದ ದೃಢ ಪಟ್ಟಿದೆ. ಕರ್ತವ್ಯ, ಜವಾಬ್ದಾರಿ ಹಾಗೂ ಮೇಲ್ವಿಚಾರಣೆ ಸಮರ್ಪಕವಾಗಿ ಮತ್ತು ನಿಯಮಾನುಸಾರ ನಿರ್ವಹಿಸದೇ ಇರುವುದು ಪ್ರಾಥಮಿಕ ವಿಚಾರಣೆಯಿಂದ ಕಂಡು ಬಂದಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ತಮ್ಮ ವರದಿಯಲ್ಲಿ ಉಲ್ಲೇಖಿಸಿ ದ್ದಾರೆ.
ಎಸ್ಪಿ ಕಚೇರಿ ನಗದು ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗವಾಗಿರುವ ಬಗ್ಗೆ ವಿಜಯವಾಣಿ ಗಮನ ಸೆಳೆಯುವ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯ ಆಧಾರದಲ್ಲಿ ಮೂವರು ಸಿಬ್ಬಂದಿ ಬಂಧನವಾಗಿತ್ತು. ಲಕ್ಷಾಂತರ ರೂಪಾಯಿ ಹಣ ಕೂಡ ನಗದು ವಿಭಾಗದವರು ಜಮಾ ಮಾಡಿದ್ದರು.
ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪಿ.ಎ. ನಂಜಪ್ಪ, ದ್ವಿತೀಯ ದರ್ಜೆ ಸಹಾಯಕರಾದ ಟಿ.ಎ. ರಂಜಿತ್‌ಕುಮಾರ್, ಲೋಹಿತ್‌ಕುಮಾರ್, ಎಚ್.ಎನ್. ನಟೇಶ್, ಎಂ.ಜೆ. ಕೆಂಪೇಗೌಡ, ದಲಾಯತ್ ಎಲ್. ವಿನೋದ್‌ಕುಮಾರ್ ಅವರನ್ನು ಆರೋಪಿ ಗಳನ್ನಾಗಿ ಮಾಡಿ ವರದಿ ಸಿದ್ಧ ಪಡಿಸಲಾಗಿದೆ.
ಹಣ ದುರುಪಯೋಗ ಪಡಿಸಿಕೊಂಡಿರುವ ಸ್ಪಷ್ಟ ಲಿಖಿತ ವಿವರಣೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಆರೋಪಿಗಳಿಗೆ ಲಿಖಿತ ನೋಟೀಸ್ ಜಾರಿ ಮಾಡಲಾಗಿದೆ. ಬಂಧನಕ್ಕೆ ಒಳಗಾಗಿದ್ದ ಸಿಬ್ಬಂದಿ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ಆದರೆ, ಪ್ರಥಮ ಆರೋಪಿ ಯಾಗಿರುವ ಸಹಾಯಕ ಆಡಳಿತಾಧಿಕಾರಿ ಪಿ.ಎ. ನಂಜಪ್ಪ ಅದೇ ಕಚೇರಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕರಿಂದ, ಸರ್ಕಾರದಿಂದ ಮತ್ತು ವಿವಿಧ ಅಧೀನ ಘಟಕಗಳಿಂದ ಸ್ವೀಕರಿಸಿದ ಹಣವನ್ನು ನಗದು ಪುಸ್ತಕದಲ್ಲಿ ನಮೂದಿಸಿ ದೃಢೀಕರಿಸದೆ ಹಾಗೂ ಸ್ವೀಕರಿಸಿದ ಬಗ್ಗೆ ಸಂಬಂಧಪಟ್ಟವರಿಗೆ ಸರ್ಕಾರದ ಅಧಿಕೃತ ರಶೀದಿ ನೀಡಿರುವುದಿಲ್ಲ. ಹಣ ದುರುಪಯೋಗ ವಾಗಿದ್ದರೂ ಮೇಲಾಧಿಕಾರಿಗಳಿಗೆ ಲಿಖಿತವಾಗಿ ಮಾಹಿತಿ ನೀಡಲಿಲ್ಲ. ಪಿ.ಎ. ನಂಜಪ್ಪ ಗಂಭೀರ ಸ್ವರೂಪದ ಕರ್ತವ್ಯ ಲೋಪ ಮಾಡಿದ್ದು, ಸರ್ಕಾರಿ ಹಣ ದುರುಪಯೋಗವಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಿ.ಎ. ರಂಜಿತ್‌ಕುಮಾರ್ ನಗದು ಪುಸ್ತಕ ಬರೆಯದೆ, ಕ್ಯಾಶ್ ಚೆಸ್ಟ್‌ನಲ್ಲಿ ಇಟ್ಟಂತಹ ದಂಡದ ಹಣವನ್ನು ಬ್ಯಾಂಕಿಗೆ ಜಮಾ ಮಾಡಲು ಅಗತ್ಯ ಕ್ರಮಕೈಗೊಳ್ಳದೆ ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ನಿರ್ಲಕ್ಷೃ ಪ್ರದರ್ಶಿಸಿದ್ದಾರೆ. ಕೆಂಪೇಗೌಡ ಟಪಾಲು ಶಾಖೆಯಲ್ಲಿ ಠಾಣೆ/ಕಚೇರಿಗಳಿಂದ ತಂದ ಹಣವನ್ನು ಕೆಲವೊಂದು ಬಾರಿ ಸ್ವೀಕರಿಸಿಕೊಂಡು ಕರ್ತವ್ಯದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಲೋಹಿತ್‌ಕುಮಾರ್, ವಿನೋದ್‌ಕುಮಾರ್ ಅವರಿಬ್ಬರು ಟಿ.ಎ. ರಂಜಿತ್ ಅವರೊಂದಿಗೆ ಸೇರಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ವರದಿ ಮಾಡಲಾಗಿದೆ.
ಲೆಕ್ಕ ಶಾಖೆಯ ಶಾಖಾಧೀಕ್ಷಕಿ ವಿದ್ಯಾ ಜೋಗಪ್ಪನವರ್ ತಮ್ಮ ಕರ್ತವ್ಯದಲ್ಲಿ ನಿರ್ವಲಕ್ಷೃತನ ಮತ್ತು ಬೇಜವಾಬ್ದಾರಿತನ ತೋರಿಸಿರುವುದು ಕಂಡು ಬಂದಿದೆ. ಇಲಾಖೆಯ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಬಾರದೆಂದು ತಿಳಿದಿದ್ದರೂ ಆರೋಪತರು ಹಣ ದುರಪಯೋಗ ಪಡಿಸಿ ಕೊಂಡಿದ್ದಾರೆ. ಮೇಲಾಧಿಕಾರಿ ಗಮನಕ್ಕೆ ಬಾರದಂತೆ ಕರ್ತವ್ಯದಲ್ಲಿ ತೀವ್ರ ಸ್ವರೂಪದ ಲೋಪ ಮತ್ತು ಇಲಾಖೆಗೆ ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಡಿಜಿ ಪ್ರವೀಣ್ ಸೂದ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಗಮನಕ್ಕೆ ತಂದ ಮುರಗೇಶ ಗಡ್ಡಿ
ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಲೆಕ್ಕ ಶಾಖೆಯ ಶಾಖಾಧೀಕ್ಷಕರಾದ ಮುರಗೇಶ ಗಡ್ಡಿ ನಗದು ವಿಭಾಗದಲ್ಲಿ ಹಣ ದುರುಪಯೋಗ ಆಗಿರುವುದನ್ನು ಶಾಖಾ ಕಾರ್ಯನಿರ್ವಾಹಕರ ಹಾಗೂ ಸಹಾಯಕ ಆಡಳಿತಾಧಿಕಾರಿ ಗಮನಕ್ಕೆ ೫-೩-೨೦೨೧ ರಂದು ಲಿಖಿತವಾಗಿ ತಂದಿದ್ದರು. ೧೯-೩-೨೦೨೧ ರಂದು ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು. ೧೦-೭-೨೦೨೧ ರಂದು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
**
ಕಾನೂನು ಮತ್ತು ಇಲಾಖಾ ನಿಯಮಗಳ ಅರಿವು ಇದ್ದರೂ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸದೆ ಬೇಜವಾಬ್ದಾರಿತನದಿಂದ ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ನಗದು ಶಾಖೆಯಲ್ಲಿ ಹಣ ದುರುಪಯೋಗವಾಗಲು ಕಾರಣವಾಗಿದೆ. ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು.
**
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪ ಎದುರಿಸುತ್ತಿರುವ ಸಹಾಯಕ ಆಡಳಿತಾಧಿಕಾರಿ ಪಿ.ಎ. ನಂಜಪ್ಪ ಅದೇ ಕಚೇರಿಯಲ್ಲಿ ಇನ್ನೂ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ. ಆ ಮೂಲಕ ತಪ್ಪಿತಸ್ತರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ನಾಮ್‌ಕಾವಸ್ತೆಗೆ ತನಿಖೆ ನಡೆಯುತ್ತಿದ್ದು, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮುಕ್ಕಾಟೀರ ಚೋಟು ಅಪ್ಪಯ್ಯ, ಮಾಜಿ ಜಿಲ್ಲಾಧ್ಯಕ್ಷರು, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ, ಕೊಡಗು.