

ಮಡಿಕೇರಿ: ಕೊಡಗಿನಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಹಿಂದು ಜಾಗರಣ ವೇದಿಕೆಯಿಂದ ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶಿತ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಜಿಲ್ಲೆಯ ೫ ತಾಲೂಕಿನಿಂದ ಕಾರ್ಯಕರ್ತರು ವಾಹನ ಜಾಥಾ ಮೂಲಕ ಮಡಿಕೇರಿಗೆ ಆಗಮಿಸಿದರು. ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ ದಿಂದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತ, ಇಂದಿರಾಗಾಂಧಿ ವೃತ್ತ ಮೂಲಕ ಎಸ್ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹಿಂದು ಸಾಮಾಜಿಕ ಕಾರ್ಯಕರ್ತರ ಮೇಲೆ ಈ ಹಿಂದಿನ ಸರ್ಕಾರ ದುರುದ್ದೇಶ ಪೂರ್ವಕವಾಗಿ ದಾಖಲಿಸಿರುವ ಸುಳ್ಳು ಕಮ್ಯುನಲ್ ಗೂಂಡಾ- ರೌಡಿಶೀಟರ್ ಪಟ್ಟಿ ರದ್ದು ಪಡಿಸಬೇಕು. ಸುಳ್ಳು ಪ್ರಕರಣ ದಾಖಲಿಸುತ್ತಿರುವ ಮತ್ತು ಕಾರ್ಯಕರ್ತರ ಮನೆಗೆ ಅಕ್ರಮ ಪ್ರವೇಶ ಮಾಡಿ, ಕಿರುಕುಳ ನೀಡಲು ಸೂಚಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ- ಗೋಮಾಂಸ ಮಾರಾಟ, ಅಕ್ರಮ ಗೋಸಾಗಾಟ ತಡೆಯಬೇಕು. ಜಿಲ್ಲೆಯಲ್ಲಿರುವ ಬಾಂಗ್ಲಾ ಮೂಲದ ಅಸ್ಸಾಂ ಹೆಸರಿನ ವಲಸಿಗ ಕಾರ್ಮಿಕರನ್ನು ಗಡಿಪಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತಾಂತರ ಮತ್ತು ಲವ್- ಜಿಹಾದ್ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಲೋಹಿತ್ ಅರಸ್, ಮಂಗಳೂರು ವಿಭಾಗೀಯ ಸಂಯೋಜಕ ಬಿ.ಬಿ. ಮಹೇಶ್, ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಹ್ಮಣಿ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಬಿ.ಬಿ. ಭಾರತೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಎಸ್ಪಿ ವಿರುದ್ಧ ಆಕ್ಷೇಪ
ವಿವಿಧ ವಿಚಾರಗಳ ಕುರಿತು ಚರ್ಚಿಸಲು ತಮ್ಮನ್ನು ಭೇಟಿ ಮಾಡಲು ಆಗಮಿಸಿದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ವೇದಿಕೆ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಮಂಗಳೂರು ವಿಭಾಗೀಯ ಸಂಯೋಜಕ ಬಿ.ಬಿ. ಮಹೇಶ್ ಎಸ್ಪಿ ಎಂ.ಎ. ಅಯ್ಯಪ್ಪ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ತಮ್ಮನ್ನು ಭೇಟಿ ಮಾಡಲು ಮೊದಲ ಬಾರಿಗೆ ಆಗಮಿಸಿದ್ದ ವೇಳೆ ೧ ಗಂಟೆ ಕಾಯ್ದರು ಒಳಗೆ ಕರೆಯಲಿಲ್ಲ. ಪೊಲೀಸ್ ಅಧಿಕಾರಿಗಳ ಆಹ್ವಾನ ದ ಮೇಲೆ ಆಗಮಿಸಿದ್ದ ಸಂದರ್ಭದಲ್ಲಿಯೂ ೪.೩೦ ಗಂಟೆಯಿಂದ ರಾತ್ರಿ ೭ ಗಂಟೆವರೆಗೆ ಕಾಯಿಸಿ ಭೇಟಿಗೆ ಅವಕಾಶ ನೀಡಲಾಯಿತು. ರೌಡಿ ಪಟ್ಟಿಯಲ್ಲಿರುವ ಹಿಂದು ಕಾರ್ಯಕರ್ತರ ಬಗ್ಗೆ ಚರ್ಚಿಸಲು ಮಧ್ಯಾಹ್ನ ೧.೨೦ ಕ್ಕೆ ಕಚೇರಿಗೆ ಆಗಮಿಸಿ, ಒಂದುವರೆ ಗಂಟೆ ಕಾಯ್ದರು ಒಳಗೆ ಕರೆಯಲಿಲ್ಲ ಎಂದು ಕುಕ್ಕೇರ ಅಜಿತ್ ಅಸಮಾಧಾನ ವ್ಯಕ್ತ ಪಡಿಸಿದರು.
ತಮ್ಮ ಮೊಬೈಲ್‌ಗೆ ಕರೆ ಮಾಡಿದ್ದಾಗ ಸ್ವೀಕರಿಸಲಿಲ್ಲ. ವಾಟ್ಸಾಪ್ ಮೂಲಕ ಗೋಸಾಗಾಟದ ಮಾಹಿತಿ ನೀಡಿದ್ದರೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಬಿ.ಬಿ. ಮಹೇಶ್ ಟೀಕಿಸಿದರು. ನಮ್ಮನ್ನು ಕಡೆಗಣಿಸುತ್ತಿದ್ದೀರಾ. ಹಿಂದು ಜಾಗರಣಾ ವೇದಿಕೆಯ ಶಕ್ತಿ ಪ್ರದರ್ಶಿಸಬೇಕಾಗುತ್ತದೆ ಎಂದು ಕುಕ್ಕೇರ ಅಜಿತ್ ಎಚ್ಚರಿಸಿದರು.
ನಿಮ್ಮನ್ನು ಭೇಟಿ ಆಗದಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಎಸ್ಪಿ ಕಚೇರಿ ನನ್ನ ಸ್ವಂತ ಕಚೇರಿಯಲ್ಲ. ಸಾರ್ವಜನಿಕರ ಕಚೇರಿ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನು ಭೇಟಿ ಮಾಡುತ್ತೇನೆ. ವೃದ್ಧರು, ಮಹಿಳೆಯರು, ಮಕ್ಕಳು, ದೂರದಿಂದ ಬಂದವರನ್ನು ಮೊದಲು ಭೇಟಿ ಮಾಡು ತ್ತೇನೆ. ತಮ್ಮನ್ನು ಭೇಟಿ ಆಗದಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಬೇಸರ ಮಾಡಿಕೊಳ್ಳಬೇಡಿ ಎಂದು ಎಸ್ಪಿ ಮನವಿ ಮಾಡಿದರು.
ನನಗೆ ಹೆಚ್ಚು ವಾಟ್ಸಾಪ್‌ನಲ್ಲಿ ಸಂದೇಶ ಬರುತ್ತದೆ. ದೂರವಾಣಿ ಕರೆಯೂ ಬರುತ್ತದೆ. ಸಾಧ್ಯವಾದಷ್ಟು ಕರೆ ಸ್ವೀಕರಿಸುತ್ತೇನೆ ಮತ್ತು ವಾಟ್ಸಾಪ್‌ನಲ್ಲಿ ಪ್ರತಿಕ್ರಿಯಿಸುತ್ತೇನೆಂದರು.
ಕಮ್ಯೂನಲ್ ಗೂಂಡಾ ಪರಿಶೀಲನೆ
ಕಮ್ಯೂನಲ್ ಗೂಂಡಾ ಪಟ್ಟಿಯಲ್ಲಿರುವರನ್ನು ಮರುಪರಿಶೀಲಿಸಿ, ಪಟ್ಟಿಯಿಂದ ಕೈಬಿಡಲು ಸಾಧ್ಯವಿರುವವರ ಮಾಹಿತಿ ನೀಡುವಂತೆ ಡಿವೈಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಎಂ.ಎ. ಅಯ್ಯಪ್ಪ ಮಾಹಿತಿ ನೀಡಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ದೇವರು ವರ್ಗಾವಣೆಗೆ ಸಂಬಂಧಿಸಿದ್ದಂತೆ ಮೇಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗು ವುದು. ಕಾನೂನು ಬಾಹಿರವಾಗಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಪರಿಶೀಲನೆ ನಡೆಸಿರುವ ಸಿಬ್ಬಂದಿ ಮೇಲೆ ಕಾನೂನಿನ್ವಯ ಕ್ರಮ ಕೈಗೊಳ್ಳ ಲಾಗುವುದಾಗಿ ಎಸ್ಪಿ ಭರವಸೆ ನೀಡಿದರು.
ಸಿಐ ಮಹೇಶ್ ದೇವರು ವಿರುದ್ಧ ಆಕ್ರೋಶ
ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ದೇವರು ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಹಿಂದು ಜಾಗರಣಾ ವೇದಿಕೆ ಮಂಗಳೂರು ವಿಭಾಗೀಯ ಸಂಚಾಲಕ ಬಿ.ಬಿ. ಮಹೇಶ್ ಆಕ್ರೋಶ ವ್ಯಕ್ತ ಪಡಿಸಿದರು. ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು, ಸರ್ಚ್ ವಾರಂಟ್ ಇಲ್ಲದೆ ರಾತ್ರಿ ಹೊತ್ತಿನಲ್ಲಿ ಹಿಂದು ಕಾರ್ಯಕರ್ತರ ಮನೆಗೆ ಸಿಬ್ಬಂದಿ ಕಳುಹಿಸಿ ಪರಿಶೀಲನೆ ಮಾಡುವುದರ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.
ಹಿಂದು ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಕಾರ್ಯ ನಡೆಯುತ್ತಿದೆ. ತಲೆಹಿಡುಕ ಪೊಲೀಸ್ ಅಧಿಕಾರಿಗಳ ಕುರಿತು ಏಕವಚನದಲ್ಲಿ ಮಾತನಾಡುತ್ತೇವೆ. ಒಂದೆರಡು ಕೆಟ್ಟ ಹುಳಗಳಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರಕ್ಕೆ ಕುರುಡು ಕವಿದಿದೆ. ಸಿಐ ಮಹೇಶ್ ವರ್ಗಾವಣೆ ಆಗುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದರು.
ಹಿಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸುವಾಗ ನೋಟೀಸ್ ಜಾರಿ ಮಾಡುವುದು, ಹೊಸ ಪೊಲೀಸ್ ಅಧಿಕಾರಿ ಬಂದಾಗ ಅತ್ಯಾಚಾರಿಗಳು, ಕಳ್ಳತನ ಮಾಡಿರುವವರು, ಸಮಾಜಘಾತುಕರೊಂದಿಗೆ ಹಿಂದು ಕಾರ್ಯಕರ್ತರನ್ನು ರೌಡಿ ಪೆರೇಡ್ ಮಾಡಿಸುವುದು ಸರಿ ಯಲ್ಲ ಎಂದು ಕಿಡಿಕಾರಿದರು.
ನಮ್ಮನ್ನು ಸಾಯಿಸಿ ಬಿಡಿ…
ಶತಶತಮಾನಗಳ ಇತಿಹಾಸ ಹೊಂದಿರುವ ರಾಮಮಂದಿರಕ್ಕಾಗಿ ಹೋರಾಟ ನಡೆಸಿದವರು ಹಿಂದು ಕಾರ್ಯಕರ್ತರು. ದೇಶದ ಪರ ಹೋರಾಟ ಮಾಡುವವರನ್ನು ಕಮ್ಯೂನಲ್ ಗೂಂಡಾ ಎಂದು ಮಾಡುವುದು ಸರಿಯಲ್ಲ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಲೋಹಿತ್ ಅರಸ್ ಆಕ್ಷೇಪ ವ್ಯಕ್ತ ಪಡಿಸಿದರು.
ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು, ದೌರ್ಜನ್ಯ ಮಾಡುವುದಕ್ಕಿಂತ ಗುಂಡಿಕ್ಕಿ ಸಾಯಿಸಿ ಬಿಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಸರ್ಕಾರ, ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಸರ್ಪಗಾವಲು
ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಎಸ್ಪಿ ಎಂ.ಎ. ಅಯ್ಯಪ್ಪ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ೭ ಸರ್ಕಲ್ ಇನ್ಸ್‌ಪೆಕ್ಟರ್, ೧೫ ಸಬ್ ಇನ್ಸ್‌ಪೆಕ್ಟರ್, ೨೧೦ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು. ೨ ಕೆಎಸ್‌ಆರ್‌ಪಿ, ೫ ಡಿಎಆರ್ ತುಕಡಿ ನಿಯೋಜಿಸಲಾಗಿತ್ತು.
ಜಿಲ್ಲೆಯ ವಿವಿಧ ಠಾಣೆಯಲ್ಲಿ ಗುಪ್ತಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮಡಿಕೇರಿಗೆ ಕರೆಸಲಾಗಿತ್ತು. ಹೆಚ್ಚಿನ ಸಂಖ್ಯೆ ಯಲ್ಲಿ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಎಸ್ಪಿ ಕಚೇರಿ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆಹಿಡಿಯಲಾಯಿತು.
ಜಗದೀಶ್ ಕಾರಂತ್ ದೂರವಾಣಿ ಮಾತು
ಪೊಲೀಸ್ ದೌರ್ಜನ್ಯ ವಿರುದ್ಧ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆ ನೇತೃತ್ವ ವಹಿಸಬೇಕಾಗಿದ್ದ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಗೈರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪರಿಸ್ಥಿತಿಯಿಂದಾಗಿ ಮಡಿಕೇರಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ದೂರವಾಣಿ ಮೂಲಕ ಮಾಡಿದ ಭಾಷಣದಲ್ಲಿ ಹೇಳಿದರು.
ಹಿಂದು ಸಾಮಾಜಿಕ ಹೋರಾಟಗಾರರನ್ನು ರೌಡಿಪಟ್ಟಿಗೆ ಸೇರಿಸುವುದನ್ನು ಸಹಿಸಲಾಗದು. ಕುಶಾಲನಗರ ಸಿಐ ಹಿಂದೆ ಇರುವ ದುಷ್ಟಶಕ್ತಿಯ ಹೆಸರು ಬಹಿರಂಗ ಪಡಿಸಬೇಕು. ಹಣದ ಆಸೆಗೆ ಮಡಿಕೇರಿ ಮಹಿಳಾ ಠಾಣೆಗೆ ಮಹೇಶ್ ದೇವರನ್ನು ನೇಮಕ ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗೆ ಮಾಡಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೌಡಿ ಪಟ್ಟಿಯಿಂದ ಹಿಂದು ಕಾರ್ಯಕರ್ತರನ್ನು ಕೈಬಿಡಬೇಕು. ನಮ್ಮ ತಾಳ್ಮೆ ಕೆಣಕಬೇಡಿ. ಹಿಂದು ಸಮಾಜ ಎದ್ದು ನಿಂತಿದೆ. ನಾವು ಯಾರ ತಂಟೆಗೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ. ಒಂದು ತಿಂಗಳೊಳಗೆ ವೇದಿಕೆಯ ಬೇಡಿಕೆ ಈಡೇರಿಸದಿದಲ್ಲಿ ಮುಂದೆ ಆಗುವ ಪರಿಣಾಮಕ್ಕೆ ಎಸ್ಪಿ ಅಯ್ಯಪ್ಪ ಹೊಣೆ ಎಂದು ಎಚ್ಚರಿಕೆ ನೀಡಿದರು.