ವಿನಾಯಿತಿ ಪತ್ರದಾರರಿಗೂ ಪೊಲೀಸ್ ನೋಟಿಸ್

24mdkn1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ


ಎರಡಕ್ಕಿಂತ ಹೆಚ್ಚು ಬಂದೂಕು ಇದ್ದಲ್ಲಿ ಠೇವಣಿ ಇಡುವಂತೆ ಕೇಂದ್ರ ಗೃಹ ಸಚಿವಾಲಯ ಪರವಾನಗಿ ಬಂದೂಕುದಾರರಿಗೆ ಹೊರಡಿಸಿರುವ ಆದೇಶವನ್ನು ವಿನಾಯಿತಿ ಪತ್ರ ಹೊಂದಿರುವವರಿಗೂ ಜಿಲ್ಲಾಡಳಿತ ಹಾಗೂ ಪೊಲೀಸರು ಅನ್ವಯ ಆಗುವಂತೆ ಮಾಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಕೊಡಗಿನ ಜಮ್ಮಾ ಹಿಡುವಳಿದಾರರು ಹಾಗೂ ಕೂರ್ಗ್ ಬೈ ರೇಸ್‌ನಡಿ ಕೊಡವರು ಬಂದೂಕು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಭಾರತೀಯ ಆಯುಧ ಕಾಯ್ದೆ ೧೯೫೯ ರನ್ವಯ ಕೇಂದ್ರ ಗೃಹ ಸಚಿವಾಲಯ ವಿಶೇಷ ವಿನಾಯಿತಿ ಪತ್ರ ನೀಡುತ್ತಾ ಬಂದಿದೆ. ಈ ವಿನಾಯಿತಿ ಪ್ರಶ್ನಿಸಿ ಕ್ಯಾಪ್ಟನ್ ಯಾಲದಾಳು ಚೇತನ್ ಕೇಶವಾನಂದ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಏತನ್ಮಧ್ಯೆ, ಪೊಲೀಸರು ವಿನಾಯಿತಿ ಪತ್ರದಡಿ ಬಂದೂಕು ಹೊಂದಿರುವವರಿಗೂ ೨ಕ್ಕಿಂತ ಹೆಚ್ಚು ಬಂದೂಕು ಹೊಂದಿರುವುದನ್ನು ಠೇವಣಿ ನೀಡುವಂತೆ ಲಿಖಿತವಾಗಿ ಸೂಚನೆ ನೀಡಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ೨೦-೧೧-೨೦೨೨ ರಂದು ವಿನಾಯಿತಿ ಪತ್ರದಾರರಿಗೂ ನೋಟಿಸ್ ಜಾರಿ ಮಾಡಿ ದ್ದಾರೆ. ಕೊಳ್ತೋಡು- ಬೈಗೋಡು, ಕಾಕೋಟುಪರಂಬು ವ್ಯಾಪ್ತಿಯ ಬಂದೂಕುದಾರರಿಗೆ ಬಂದಿರುವ ಪೊಲೀಸ್ ನೋಟಿಸ್ ಕುರಿತು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಎಸ್ಪಿ ಜ್ಞಾಪನ ಪತ್ರ
ಪರವಾನಗಿದಾರರು ೨ಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದಲ್ಲಿ ಹೆಚ್ಚುವರಿ ಬಂದೂಕನ್ನು ಠೇವಣಿ ಇಡಲು ಹಾಗೂ ಬಂದೂಕಿನ ಅಂಕಿ- ಅಂಶ ಸಲ್ಲಿಸುವಂತೆ ಸೂಚಿಸಿರುವುದರಿಂದ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ೪-೧೨- ೨೦೨೧ ರಂದು ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಡಿವೈಎಸ್ಪಿಗಳಿಗೆ ಜ್ಞಾಪನ ಪತ್ರ ಹೊರಡಿಸಿದ್ದರು.

ಎಡಿಸಿ ಸೂಚನೆ
ಆಯುಧ ತಿದ್ದುಪಡಿ ಕಾಯ್ದೆ ೨೦೧೯ ರಲ್ಲಿ ಪರವಾನಗಿದಾರರು ೨ಕ್ಕಿಂತ ಹೆಚ್ಚು ಬಂದೂಕನ್ನು ಹೊಂದುವಂತಿಲ್ಲ. ೨ಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದಲ್ಲಿ ಹೆಚ್ಚುವರಿ ಬಂದೂಕನ್ನು ಪರವಾನಗಿದಾರರು ಠೇವಣಿ ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಬಂದೂಕು ಅಂಕಿ- ಅಂಶ ಸಲ್ಲಿಸುವಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಲಿಖಿತವಾಗಿ ಸೂಚಿಸಿದ್ದಾರೆ.
ಬಂದೂಕು ಪರವಾನಗಿ/ ವಿನಾಯಿತಿ ಪತ್ರದಲ್ಲಿ ೨ ಬಂದೂಕುಗಳಿಗಿಂತ ಹೆಚ್ಚುವರಿ ಬಂದೂಕು ಹೊಂದಿರುವವರ ಮಾಹಿತಿ ಹಾಗೂ ಹೆಚ್ಚುವರಿ ಬಂದೂಕನ್ನು ಠಾಣೆಯಲ್ಲಿ ಜಮೆ ಮಾಡಿರುವ ಬಗ್ಗೆ ಮಾಹಿತಿ ತಕ್ಷಣ ನೀಡುವಂತೆ ೩೦-೧೧-೨೦೨೧ ರಂದು ಪೊಲೀಸ್ ವರಿಷ್ಠಾಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಲಿಖಿತವಾಗಿ ಸೂಚಿಸಿದ್ದರು.

ಕೇಂದ್ರ ಗೃಹ ಸಚಿವಾಲಯ ಸೂಚನೆ
೩೧-೧೨-೨೦೧೯ಕ್ಕೆ ಅನ್ವಯ ಆಗುವಂತೆ ಪರವಾನಗಿದಾರರು ಹೊಂದಿರುವ ಬಂದೂಕಿನ ಮಾಹಿತಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ೨೪-೯- ೨೦೨೧ ರಲ್ಲಿ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚನೆ ನೀಡಿತ್ತು. ಇದರೊಂದಿಗೆ ೨೦೧೯-೨೦೨೦ ಹಾಗೂ ೨೦೨೦-೨೧ನೇ ಸಾಲಿನಲ್ಲಿ ಹೊಂದಿರುವ ಬಂದೂಕಿನ ಮಾಹಿತಿ ಕೇಳಿತ್ತು. ಆಯುಧ ತಿದ್ದುಪಡಿ ಕಾಯ್ದೆ ೨೦೧೯ ಅನುಷ್ಠಾನಕ್ಕೆ ತರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

೨೦೧೯ರ ತಿದ್ದುಪಡಿ ಕಾಯ್ದೆ
ಆಯುಧ ಕಾಯ್ದೆ ೧೯೫೯ ರ ಸೆಕ್ಷನ್ ೩(೨)ಗೆ ೨೦೧೯ ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ ಅನ್ವಯ ಪರವಾನಗಿದಾರರು ಯಾವುದಾದರೂ ೨ ಬಂದೂಕು ಇಟ್ಟುಕೊಳ್ಳಲು ಅವಕಾಶ ನೀಡಿತ್ತು. ೨ಕ್ಕಿಂತ ಹೆಚ್ಚುವರಿ ಬಂದೂಕು ಹೊಂದಿದ್ದಲ್ಲಿ ಅದನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಸೂಚಿಸಲಾಗಿತ್ತು.

**
ಬಂದೂಕಿಗೆ ಸಂಬಂಧಿಸಿದ್ದಂತೆ ಪೊಲೀಸ್ ಇಲಾಖೆಯಿಂದ ಆದೇಶ ಹೊರಡಿಸುವುದಿಲ್ಲ. ಜಿಲ್ಲಾಡಳಿತದ ಆದೇಶ ಪಾಲನೆ ಮಾಡುತ್ತೇವೆ. ೪-೧೨-೨೦೨೧ ರಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾನು ಇರಲಿಲ್ಲ. ಬಂದೂಕಿಗೆ ಸಂಬಂಧಿಸಿದ್ದಂತೆ ಹೊರಡಿಸಿರುವ ಆದೇಶ ತೆಗೆದು ಕೊಂಡು ಬನ್ನಿ, ಪರಿಶೀಲಿಸುವ. ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಕೊಡಗು ಪೊಲೀಸ್ ವರಿಷ್ಠಾಧಿಕಾರಿ.

**
ಕೇಂದ್ರ ಗೃಹ ಸಚಿವಾಲಯ ಪರವಾನಗಿದಾರರಿಗೆ ಸಂಬಂಧಿಸಿದ್ದಂತೆ ಆದೇಶ ಹೊರಡಿಸಿದೆ. ಕೊಡಗಿನ ಅಧಿಕಾರಿಗಳ ತಪ್ಪು ಗ್ರಹಿಕೆಯಿಂದ ವಿನಾಯಿತಿದಾರರಿಗೂ ಪೊಲೀಸ್ ನೋಟಿಸ್ ಹೋಗುತ್ತಿದೆ. ಚುನಾವಣೆ ಸಂದರ್ಭದಲ್ಲಿಯೂ ವಿನಾಯಿತಿ ಪತ್ರ ಹೊಂದಿರುವವರು ಪೊಲೀಸ್ ಠಾಣೆಯಲ್ಲಿ ಬಂದೂಕು ಇಡಬೇಕಾಗಿಲ್ಲ. ವಿನಾಯಿತಿ ಪತ್ರ ಹೊಂದಿರುವವರಿಗೆ ೩ ಬಂದೂಕು ಇಟ್ಟುಕೊಳ್ಳಲು ಅವಕಾಶವಿದೆ. ನಂದಿನೆರವಂಡ ನಾಚಪ್ಪ ಕೊಡವ, ಅಧ್ಯಕ್ಷರು, ಕೊಡವ ನ್ಯಾಷನಲ್ ಕೌನ್ಸಿಲ್.

**
ಪರವಾನಗಿದಾರರಿಗೆ ಸಂಬಂಧಿಸಿದ್ದಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಕೊಡಗಿನ ಪೊಲೀಸರು, ಪರವಾನಗಿ ವಿನಾಯಿತಿ ಪತ್ರ ಹೊಂದಿರುವವರಿಗೂ ೨ಕ್ಕಿಂತ ಹೆಚ್ಚು ಬಂದೂಕು ಇದ್ದಲ್ಲಿ ಠೇವಣಿ ಇಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದು ಸರಿ ಯಾದ ಕ್ರಮವಲ್ಲ. ಮಂಡೇಟಿರ ಅನಿಲ್, ವಿನಾಯಿತಿ ಪತ್ರದಾರ, ಕಾಕೋಟುಪರಂಬು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net