

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಔಷಧಿ ಗಿಡಮೂಲಿಕೆ ಉದ್ಯಾನ ಸ್ಥಾಪಿಸಬೇಕೆಂಬ ಇಂಗಿತವನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ವ್ಯಕ್ತ ಪಡಿಸಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಮಡಿಕೇರಿ ಅರಣ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕ್ರಿಸ್ಟಲ್ ಕೋರ್ಟ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತ ಪಾಲುದಾರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವ ವೈವಿಧ್ಯ ಮಹತ್ವ ಅರಿತುಕೊಳ್ಳುವ ಉದ್ದೇಶದಿಂದ ಪಾಲುದಾರರ ಸಮಾವೇಶ ಆಯೋಜಿಸಲಾಗಿದೆ. ಗಿಡಮೂಲಿಕೆ ದಾಖಲೀಕರಣ ಮಾಡುವುದರ ಮೂಲಕ ಭವಿಷ್ಯದಲ್ಲಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಾಲುದಾರರ ಸಮಾವೇಶದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಕೊಡಗಿನಲ್ಲಿ ಗಿಡಮೂಲಿಕೆ ಉದ್ಯಾನ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಕ್ಕೆ ಅಧಿಕಾರಿ ಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಕಡಿದು ಮಾರಾಟ ಮಾಡಲು ಅವಕಾಶ ಇದೆ ಎಂಬ ಕಾರಣಕ್ಕಾಗಿ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಲ್ವರ್ ಗಿಡ ನೆಡಲಾಗುತ್ತಿದೆ ಎಂದು ರವಿ ಕಾಳಪ್ಪ ವಿಷಾದ ವ್ಯಕ್ತ ಪಡಿಸಿದರು.
ಜೀವ ವೈವಿಧ್ಯ ಕ್ಷೀಣಿಸಿದ್ದಲ್ಲಿ ಮನುಷ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿಯಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಸ್. ಅರೇಕಲ್ ಎಚ್ಚರಿಸಿದ್ದಾರೆ.
ಮನುಷ್ಯರ ಮುಂದಿನ ಉತ್ತಮ ದಿನಗಳಿಗೆ ಜೀವ ಸಂಕುಲದ ರಕ್ಷಣೆ ಅತ್ಯಗತ್ಯ. ನಾಟಿ ವೈದ್ಯರ ಬಳಿಕ ಗಿಡಮೂಲಿಕೆ ಬಗ್ಗೆ ಅಪಾರ ಮಾಹಿತಿ ಇದ್ದು, ಇದನ್ನು ಮಂಡಳಿಯಿಂದ ಸಂಗ್ರಹಿಸಲಾಗುತ್ತಿದೆ. ಗಿಡಮೂಲಿಕೆ ಬಳಸಿಕೊಂಡು ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ಹಲಸಿನ ಹಣ್ಣಿಗೆ ವಿದೇಶದಲ್ಲಿ ಉತ್ತಮ ಮಾರುಕಟ್ಟೆ ಇದೆ. ಕೊಡಗಿನಲ್ಲಿ ಇದರ ಮಹತ್ವದ ಅರಿವು ಇಲ್ಲ ಎಂದು ಅನಿತಾ ವಿಷಾದ ವ್ಯಕ್ತ ಪಡಿಸಿದರು.
ಕಾಡು ಉಳಿದರೆ ನಾಡು ಉಳಿಯುತ್ತದೆ. ಗಿಡಮೂಲಿಕೆಯಲ್ಲಿ ಪ್ರತಿಯೊಂದು ಕಾಯಿಲೆಗೆ ಔಷಧಿ ಇದೆ. ನಮ್ಮ ಅಜ್ಞಾನದಿಂದ ಔಷಧಿ ಗಿಡ ಗಳು ನಾಶವಾಗುತ್ತಿದೆ. ಕಣ್ಮರೆಯಾಗುತ್ತಿರುವ ಹಣ್ಣುಗಳು, ಔಷಧಿ ಗಿಡ ಉಳಿಸಲು ಗಮನ ಹರಿಸಬೇಕೆಂದು ಸಮಾವೇಶ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಅರಣ್ಯ ಇಲಾಖೆಯವರು ಜನರಿಗೆ ತೊಂದರೆ ನೀಡಲು ಇರುವವರೆಂಬ ಭಾವನೆ ಇದೆ. ಅಕ್ರಮ ಚಟುವಟಿಕೆ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ. ಆದರೆ, ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ಸಹಿಸಲಾಗದೆಂದು ಎಚ್ಚರಿಕೆ ನೀಡಿದರು.
ಹಿತ್ತಲ ಗಿಡ ಮದ್ದಲ್ಲ. ಅದೇ ರೀತಿ ಈಗಿನವರಿಗೆ ಮನೆ ಮದ್ದು ಬೇಕಾಗಿಲ್ಲ. ಮನೆ ಸುತ್ತಮುತ್ತ ಸಿಗುವ ಔಷಧಿ ಗಿಡಮೂಲಿಕೆ ಬಳಸಿ ಹಿರಿಯ ರು ಆರೋಗ್ಯವಾಗಿ ಇರುತ್ತಿದ್ದರೆಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು.
ಸಭೆಯನ್ನುದ್ದೇಶಿಸಿ ನಿವೃತ್ತ ಅಧಿಕಾರಿ ಮುಕ್ಕಾಟೀರ ಎಂ. ಜಯ, ಕೊಡಗು ಬೆಳೆಗಾರರ ಸಂಸ್ಥೆ ಮಾಜಿ ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ ದರು. ವೇದಿಕೆಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಕೆ.ಎನ್. ಮೂರ್ತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ, ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಇದ್ದರು.
ಡಾ.ಕಸ್ತೂರಿ ರಂಗನ್ ವರದಿ ಆತಂಕ
ಕರ್ನಾಟಕ ರಾಜ್ಯದ ೨೦ ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಗೆ ಅನ್ವಯ ಆಗುವಂತೆ ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕವನ್ನು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾದಿಕಾರದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ. ಸುದರ್ಶನ್ ವ್ಯಕ್ತ ಪಡಿಸಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಂದಲ್ಲಿ ರಾಜ್ಯದ ಶೇ.೨೦ ರಷ್ಟು ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕಾಗಿದೆ. ಮರಳು ತೆಗೆಯಲು ನಿಬರ್ಂಧ ವಿಧಿಸುವುದರಿಂದ ಕಟ್ಟಡ ನಿರ್ಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಣ್ಣ ಪಟ್ಟಣಗಳ ಅಭಿವೃದ್ಧಿಗೆ ತಡೆಯಾಗಲಿದೆ. ದೊಡ್ಡ ಆಸ್ಪತ್ರೆ ಮುಚ್ಚಬೇಕಾಗುತ್ತದೆ ಎಂದು ಹೇಳಿದರು.