ಕೊಡಗಿಗೆ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

MDK01
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ವಿಜಯವಾಣಿ

ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಕಳೆದ ಐದು ವರ್ಷದಿಂದ ಕೊಡಗಿನಲ್ಲಿ ದೊಡ್ಡ ಧ್ವನಿಯಾಗಿ ಮೊಳಗುತ್ತಿದೆ. ಹೀಗಿದ್ದರೂ, ಸರ್ಕಾರ ಮಾತ್ರ ಘೋಷಣೆ ಮಾಡುತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಆಸ್ಪತ್ರೆ ಕೂಗು ಎದ್ದಿತ್ತು. ದೊಡ್ಡ ಮಟ್ಟದ ಅಭಿಮಾನ ಕೂಡ ನಡೆದಿತ್ತು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭ ಕುಮಾರಸ್ವಾಮಿ ಅವಧಿಯಲ್ಲಿ ಧ್ವನಿ ಎತ್ತಿದ್ದವರು ಮೌನಕ್ಕೆ ಶರಣಾದರು. ಆದರೆ, ಇತರರು ಈ ಅಭಿಮಾನ ಮುಂದುವರಿಸಿದರು. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಹೊಸಬರು ಈ ಅಭಿಮಾನ ಮುಂದುವರಿಸಿದ್ದಾರೆ.

ಏತನ್ಮಧ್ಯೆ, ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿಧಾನ ಪರಿಷತ್ತಿನಲ್ಲಿ ಹೇಳಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸ ಒದಗಿಸಿದೆ. ಕೊಡಗಿನ ಬಹುತೇಕ ಜನ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಪರವಾಗಿದ್ದಾರೆ. ಆದರೆ, ಕೆಲವರು ಈ ಬೇಡಿಕೆ ಈಡೇರಿಸುವುದು ಕಷ್ಟ ಎಂದು ತಾಂತ್ರಿಕ ಕಾರಣ ಮುಂದಿಡುತ್ತಾರೆ.

ಕೊಡಗಿನವರು ಸೇರಿದ್ದಂತೆ ಪ್ರವಾಸಿಗರು ತುರ್ತು ಚಿಕಿತ್ಸೆ ಸಂದರ್ಭ ಮೈಸೂರು, ಮಂಗಳೂರಿನ ಆಸ್ಪತ್ರೆ ಅವಲಂಬಿಸಿದ್ದಾರೆ. ೧೩೦ ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದವರ ಸಂಖ್ಯೆ ಹೆಚ್ಚು. ಹೃದಯಾಘಾತ, ಅಪಘಾತ ವೇಳೆ ಗಂಭೀರ ಸ್ವರೂಪದಲ್ಲಿ ಗಾಯಗೊಂಡವರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಕೊಡಗಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸವಲತ್ತು ಲಭ್ಯವಿಲ್ಲದಿರುವುದು.

ಕೊಡಗಿಗೆ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಮತ್ತೊಮ್ಮೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸ ಲಾಗಿದೆ.

**
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ, ಗ್ರಾಮೀಣ ಭಾಗದಲ್ಲಿ ಕೃಷಿಕರೇ ವಾಸವಾಗಿದ್ದಾರೆ. ಹೃದಯಾಘಾತವಾದ ಶೇ.೯೦ ಜನ ಪ್ರಾಣ ಕಳೆದು ಕೊಂಡಿದ್ದಾರೆ. ನಗರದ ಆಸ್ಪತ್ರೆಗಳಿಗೆ ಸಾಗಿಸಲು ಕಡಿಮೆ ಎಂದರು ೧೦ ಗಂಟೆ ಬೇಕಾಗಬಹುದು. ಕೊಡಗಿನವರ ಜೀವಕ್ಕೆ ಬೆಲೆಯಿಲ್ಲದಂತಾ ಗಿದೆ. ಜಿಲ್ಲೆಯಿಂದ ಸಹಸ್ರಾರಾರು ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಜನಪ್ರತಿನಿಧಿಗಳು ಹೋರಾಟ ಮಾಡುತ್ತಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸ್ಸಿನ ಮಾತು. ಎಚ್.ಆರ್. ಸುರೇಶ್, ಅಧ್ಯಕ್ಷರು, ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ.

**
ಕೊಡಗು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರತಿಯೊಂದು ಸೌಲಭ್ಯ ಇಲ್ಲಿರಬೇಕು. ಅದರಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ಬೇಕು. ಜಿಲ್ಲೆಯ ನಿವಾಸಿಗಳು, ಕಾರ್ಮಿಕರು ಹಾಗೂ ಪ್ರವಾಸಿಗರಳ ಜೀವ ರಕ್ಷಣೆ ಸರ್ಕಾರದ ಕರ್ತವ್ಯ. ತಕ್ಷಣ ಸರ್ಕಾರ ಆಸ್ಪತ್ರೆಗೆ ಅನುದಾನ ಕಲ್ಪಿಸಬೇಕು. ಜನಪ್ರತಿನಿಧಿಗಳು ಸರ್ಕಾರವನ್ನು ಪ್ರಶ್ನಿಸದಿದ್ದರೆ ಚಿಪ್ಪು ಕೊಡ್ತಾರೆ ನೋಡ್ತಾ ಇರಿ. ಎಚ್.ಎಂ. ಸೋಮಪ್ಪ, ಕಾರ್ಮಿಕ ಮುಖಂಡ. ಕುಂಬೂರು.

**
ಕೊಡಗಿನಲ್ಲಿ ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಅಗತ್ಯ ಚಿಕಿತ್ಸೆ ಸಿಗದರಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆ ಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದ್ದರೆ ಸಾಕಷ್ಟು ಜನರ ಪ್ರಾಣ ಉಳಿಸಬಹುದಾಗಿದೆ. ಪ್ರವಾಸಿಗರು ಕೂಡ ಅಪಾಯದಿಂದ ಪಾರಾಗ ಬಹುದು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದರಿಂದ ದುರಂತ. ಸರ್ಕಾರ ಈ ನಿಟ್ಟಿನಲ್ಲಿ ಸಕಾರತ್ಮಕವಾಗಿ ಸ್ಪಂದಿಸಬೇಕು. ಕವಿತಾ, ದೈಹಿಕ ಶಿಕ್ಷಕಿ, ನ್ಯಾಯದಳ್ಳ.

**
ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಇದೆ. ಈ ಬಗ್ಗೆ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಜನರ ಬೇಡಿಕೆ ಈಡೇರುತ್ತಿಲ್ಲ. ತುರ್ತು ಸಂದರ್ಭ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು, ಮೈಸೂರಿಗೆ ಕಳುಹಿಸುತ್ತಾರೆ. ಅಲ್ಲಿಗೆ ತಲುಪುವ ಮುನ್ನವೇ ಪ್ರಾಣ ಕಳೆದುಕೊಂಡವರೇ ಹೆಚ್ಚು. ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವ ಪ್ರಸ್ತಾಪ ಇಲ್ಲ ಎಂದು ಆರೋಗ್ಯ ಸಚಿವರು ಹೇಳುವು ದರ ಮೂಲಕ ಕೊಡಗಿನ ಜನರ ಕನಸ್ಸು ಭಗ್ನಗೊಂಡಿದೆ. ನಟೇಶ್, ವರ್ತಕರು, ಶನಿವಾರಸಂತೆ.

**
ಕೊಡಗು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಗತ್ಯವಾಗಿ ಬೇಕಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಖುದ್ದು ಭೇಟಿ ಮಾಡಿ ಕೊಡಗಿಗೆ ಅಗತ್ಯವಾದ ಆಸ್ಪತ್ರೆ ಬೇಡಿಕೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಕೊಡಗಿನಲ್ಲಿ ಪ್ರಸ್ತುತ ಪ್ರಥಮ ಚಿಕಿತ್ಸೆ ಮಾತ್ರ ದೊರೆಯುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಂಗಳೂರು ಆಸ್ಪತ್ರೆ ಅವಲಂಬಿಸಬೇಕಾಗಿದೆ. ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾಧ್ಯಕ್ಷರು, ಬಿಜೆಪಿ.

**
ವೈದ್ಯಕೀಯ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಆದರೆ, ರಾಜ್ಯ ಸರ್ಕಾರ ಕೊಡಗಿನ ಬೇಡಿಕೆಗೆ ಸಕಾರತ್ಮಕವಾಗಿ ಸ್ಪಂದಿಸುತ್ತಿಲ್ಲ. ೫ ವರ್ಷದಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಪ್ರಬಲವಾಗಿ ವ್ಯಕ್ತವಾಗುತ್ತಿದೆ. ಸರ್ಕಾರದ ಎದುರು ಪ್ರಸ್ತಾವನೆ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿರುವುದು ಸರಿಯಲ್ಲ. ಇದು ಬಿಜೆಪಿಗೆ ಕೊಡಗಿನ ಬಗ್ಗೆ ಇರುವ ಬದ್ಧತೆ ತೋರಿಸುತ್ತದೆ. ತೀತೀರ ಧರ್ಮಜ ಉತ್ತಪ್ಪ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್.

**
ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಸಚಿವರು ಹೇಳಿರುವುದು ಕೊಡಗಿಗೆ ಮಾಡಿರುವ ಅನ್ಯಾಯ. ಕೊಡಗಿಗೆ ಸಂಬಂಧಿಸಿದ್ದಂತೆ ಪ್ರತಿಯೊಂದು ವಿಚಾರದಲ್ಲಿಯೂ ಕಡೆಗಣಿಸಲಾಗುತ್ತಿದೆ. ಕೊಡಗಿನ ಮತದಾರರು ಬಿಜೆಪಿಗೆ ನೀಡುತ್ತಾ ಬಂದಿರುವ ಬೆಂಬಲಕ್ಕೆ ಸಿಕ್ಕಿರುವ ಪ್ರತಿಫಲ. ಕೆ.ಎಂ. ಗಣೇಶ್, ಜಿಲ್ಲಾಧ್ಯಕ್ಷರು, ಜೆಡಿಎಸ್.

**
ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಮಡಿಕೇರಿಯಲ್ಲಿ ಖುದ್ದು ಭರವಸೆ ನೀಡಿದ್ದರು. ಆದರೆ, ಡಾ.ಸುಧಾಕರ್ ಸರ್ಕಾರದ ಮುಂದೆ ಪ್ರಸ್ತಾಪ ಇಲ್ಲ ಎಂದು ಹೇಳಿರುವುದು ಸರಿಯಲ್ಲ. ತುರ್ತು ಸಂದರ್ಭಗಳಲ್ಲಿ ಮಂಗಳೂರು- ಮೈಸೂರಿಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯದಲ್ಲಿ ಸಾವಿಗೀಡಾದ ಹಲವಾರು ಘಟನೆಗಳಿವೆ. ಜಿಲ್ಲೆಯಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾರ ಹಿಂದೇಟು ಹಾಕಲು ಕಾರಣವೇನು. ಕೆ.ಬಿ. ಅಪ್ಸರ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ.

**
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸುತ್ತೇವೆ. ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸರ್ಕಾರ ನೀಡಬೇಕಿದ್ದ ಭಿಕ್ಷೆಯಲ್ಲ. ಅದು ಕೊಡಗಿನ ನಾಗರಿಕರ ಸಂವಿಧಾನಿಕ ಹಕ್ಕು. ಕೊಡಗಿನ ಇತಿಹಾಸದಲ್ಲಿ ಅತಿ ದೊಡ್ಡ ಹೋರಾಟವಾಗಿ ಮಹಾ ಅಭಿಮಾನ ನಡೆಸಲಾಗುವುದು. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ನಮಗಂತೂ ಸಿಗಲಿಲ್ಲ. ನಮ್ಮ ಮುಂದಿನ ಪೀಳಿಗೆ ಗಾದರೂ ಉತ್ತಮ ಚಿಕಿತ್ಸೆ ದೊರೆಯಲಿ. ಅಚ್ಚಾಂಡೀರ ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net