

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೈಗಾರಿಕೆಯಲ್ಲಿ ತೊಡಗಲು ಆಸಕ್ತಿ ಇರುವವರಿಗೆ ಹಾಗೂ ಈಗಾಗಲೇ ಕೈಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದಿಂದ ಅಗತ್ಯ ಸಹಕಾರ ನೀಡಲಾಗುವುದೆಂದು ಸಂಘದ ಅಧ್ಯಕ್ಷ ಸಿ.ವಿ. ನಾಗೇಶ್ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ನಿಯಮಿತದ ೨೮ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಜನರು ಸ್ವ-ಉದ್ಯೋಗ ಕೈಗೊಳ್ಳುವತ್ತ ಗಮನ ಹರಿಸಬೇಕು. ಸ್ವಉದ್ಯೋಗದಲ್ಲಿ ನಿಷ್ಠೆ, ಶ್ರದ್ಧೆ ಇದ್ದಲ್ಲಿ ಯಶಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಯುವ ಜನರು ದೂರದೃಷ್ಟಿ ಹೊಂದಿರಬೇಕೆಂದರು. ಜಿಲ್ಲೆಯ ವಿಸ್ತೀರ್ಣ ಹಾಗೂ ಜನಸಂಖ್ಯೆ ಕಡಿಮೆ ಇರುವುದರಿಂದ ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ ಕಷ್ಟ್ಟವಾಗಿದೆ. ಆದರೂ, ಇರುವ ಸಂಪನ್ಮೂಲ ಸರಿಯಾಗಿ ಬಳಸಿಕೊಂಡು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರ ಬೆಳವಣಿಗೆಗೆ ಶ್ರಮಿಸಬೇಕೆಂದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಆ್ಯನಿ ಫಾತಿಮಾ, ನಿರ್ದೇಶಕರಾದ ಸಿ.ಎಂ.ಯಶವಂತ್, ಎ. ಜೇಕಬ್, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಮತ್ತಿತರರು ಇದ್ದರು. ದೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಜಿ. ಸ್ವಾತಿ ನಿರೂಪಿಸಿದರು.