

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಉತ್ಕರ್ಷ ೨೦೨೩ರ ಶಿರ್ಷಿಕೆಯಡಿ ಕಾಲೇಜು ವಾರ್ಷಿಕೊತ್ಸವ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಕಾಲೇಜು ವಾರ್ಷಿಕೊತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರದಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮಾತನಾಡಿ, ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸಿ ಇಂತಹ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿವೇಲ್ಲರೂ ಧನ್ಯರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೇಯಲ್ಲಿನ ಕ್ಲಿನಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಲು ಸೂಚಿಸಿದ ಅವರು, ಭಾರತದಲ್ಲಿ ಸ್ನಾತಕೊತ್ತರ ಸೀಟುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಸಂಸ್ಥೆಯಿಂದ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು. ಸಂಸ್ಥೆಗೆ ಬೇಕಾಗಿರುವ ಎಲ್ಲಾ ಸೌಲಭ್ಯವನ್ನು ಸರ್ಕಾರದ ಮುಖಾಂತರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ನವೀನ್ ರಾಜ್ ಸಿಂಗ್‌ರವರು ಬೋಧಕ ಆಸ್ಪತ್ರೆ ಹಾಗೂ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪರಿವೀಕ್ಷಣೆ ನಡೆಸಿ ಸಂಸ್ಥೆಯ ವೈದ್ಯರುಗಳೊಂದಿಗೆ ಸಭೆ ನಡೆಸಿ ನಡೆಸಿದರು.
ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಕೆ.ಬಿ.ಕಾರ್ಯಪ್ಪ ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ೪೫೦ ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆ, ಕ್ರಿಟಿಕಲ್ ಕೇರ್ ಆಸ್ಪತ್ರೆ, ನೂತನ ಸಿಟಿ ಸ್ಕ್ಯಾನ್ ಉಪಕರಣ ಸೇರಿದಂತೆ ಸಂಸ್ಥೆಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸುವಲ್ಲಿ ಪ್ರದಾನ ಕಾರ್ಯದರ್ಶಿಗಳು ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಮತ್ತು ಪ್ರದಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎ.ಎಲ್.ಸ್ವಾಮಿ, ಜಿಲ್ಲಾ ಆರೋಗ್ಯಧಿಕಾರಿ ಡಾ.ಸತೀಶ್, ವೈದ್ಯಕೀಯ ಅಧೀಕ್ಷಕ ರೂಪೇಶ್ ಗೋಪಾಲ್, ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ಆರ್ಥಿಕ ಸಲಹೆಗಾರದ ಕೆ.ಆನಂದ, ಸ್ಥಾನೀಯ ವೈದ್ಯಾಧಿಕಾರಿ ಡಾ.ವಿ.ಎಸ್.ಸತೀಶ್ ಹಾಗೂ ಇತರರಿದ್ದರು. ಸಭಾ ಕಾರ್ಯಕ್ರಮದ ನಂತರ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ನೃತ್ಯ, ನಾಟಕ ಸೇರಿದಂತೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮ ನೀಡಿದರು.