ಮಳೆ ಸಂಕಷ್ಟ ಎದುರಿಸಲು ರಾಜ್ಯ ಸರ್ಕಾರ ವಿಫಲ

18mdka4 - Copy
Published on

ಮಡಿಕೇರಿ: ರಾಜ್ಯದ ೧೮ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಸಂಕಷ್ಟ ಎದುರಾಗಿದೆ. ಆದರೆ, ರಾಜ್ಯ ಸರ್ಕಾರದ ಬಳಿ ಕಷ್ಟನಷ್ಟದ ಸ್ಪಷ್ಟ ಮಾಹಿತಿಯೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕೊಡಗಿಗೆ ಭೇಟಿ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಬಳಿ ಬುಧವಾರ ಮಾಹಿತಿ ಕೇಳಿದ್ದ ಸಂದರ್ಭ ಇನ್ನೆರಡು ದಿನದಲ್ಲಿ ವರದಿ ಸಿದ್ಧವಾಗಲಿದೆ ಎಂದಿದ್ದಾರೆ. ರಸ್ತೆ, ಸೇತುವೆ, ಕಟ್ಟಡಗಳಿಗೆ ಆಗಿರುವ ಹಾನಿ, ಬೆಳೆ ಹಾನಿ, ಜಾನುವಾರು ಜೀವ ಹಾನಿ ಸೇರಿದ್ದಂತೆ ಮಳೆ ಯಿಂದ ಆಗಿರುವ ನಷ್ಟದ ಸ್ಪಷ್ಟ ಮಾಹಿತಿ ಸರ್ಕಾರದ ಬಳಿಯೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ತಮ್ಮ ಬಳಿ ಇರುವ ಮಾಹಿತಿಯನ್ವಯ ರಾಜ್ಯದಲ್ಲಿ ೫.೨೩ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.೩೫ ಸಾವಿರಕ್ಕೂ ಹೆಚ್ಚು ಮನೆ ಹಾನಿ ಗೀಡಾಗಿವೆ. ೧೦ ಸಾವಿರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಹೀಗಿದ್ದರೂ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಮಳೆಯಿಂದ ಸಂಕಷ್ಟ ಕ್ಕೆ ಸಿಲುಕಿರುವ ಎಲ್ಲಾ ೧೮ ಜಿಲ್ಲೆಗೆ ಸಿಎಂ ಭೇಟಿ ನೀಡಿಲ್ಲ ಎಂದು ದೂಷಿಸಿದರು.

ಬಿ.ಎಸ್. ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸಲು ಕೇಂದ್ರ ಸಂಸದೀಯ ಮಂಡಳಿ ಸದಸ್ಯತ್ವ ನೀಡಲಾಗಿದೆ. ಇದರಿಂದ ಹೆಚ್ಚೆಂದರೆ ಮಗ ವಿಜೇಂದ್ರನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಬಹುದು. ೭೫ ವರ್ಷ ದಾಟಿದೆ ಎಂದು ಸಿಎಂ ಸ್ಥಾನದಿಂದ ಬದಲಾಯಿ ಸಿದ್ದು, ಮುಂದೆ ಅವರು ಸಿಎಂ ಆಗುವ ಅವಕಾಶವಿಲ್ಲ ಎಂದರು.

ಸ್ವಾತಂತ್ರೊೃೀತ್ಸವ ದಿನ ಶಿವಮೊಗ್ಗದಲ್ಲಿ ನಡೆದ ದುರ್ಘಟನೆಗೆ ಕ್ಷೇತ್ರದ ಶಾಸಕರಾಗಿ ಕೆ.ಎಸ್. ಈಶ್ವರಪ್ಪ ನೇರ ಹೊಣೆಗಾರರಾಗಿದ್ದಾರೆ. ರಾಯಚೂರು ತೇಲಂಗಾಣಕ್ಕೆ ಸೇರಬೇಕೆಂದು ಅಲ್ಲಿನ ಶಾಸಕರು ಹೇಳಿರುವುದು ಮೂರ್ಖತನದಿಂದ ಕೂಡಿದೆ. ಅವರ ಮಾನಸಿಕವಾಗಿ ಅಸ್ವಸ್ತರಾಗಿದ್ದಾರೆಂದು ಟೀಕಿಸಿದರು.

ಬಾದಾಮಿ ಶಾಸಕನಾಗಿರುವ ನಾನು ಮುಂದಿನ ಚುನಾವಣೆಯಲ್ಲಿ ನಿಶ್ಚಿತವಾಗಿ ಸ್ಪರ್ಧಿಸುತ್ತೇನೆ. ಬಾದಾಮಿ ಬದಲಿಸುತ್ತೇನೆಂದು ಎಲ್ಲಿಯೂ ಹೇಳಿಲ್ಲ. ವಿವಿಧ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ಬರುತ್ತಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ನಡೆಯಲಿದೆ. ತದನಂತರ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನೇ ಸಿಎಂ ಎಂದು ಹೇಳಿಕೊಂಡು ತಿರುಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಧರ್ಮಾಧರಿತ ರಾಜಕೀಯ ಮಾಡುತ್ತಿದೆ. ಹಿಂದುತ್ವದ ನೆಲೆಗಟ್ಟಿನಲ್ಲಿ ಮತ ಸಮೀಕರಣಕ್ಕೆ ಪ್ರಯತ್ನಿಸುತ್ತಾರೆ. ಆದರೆ, ಕಾಂಗ್ರೆಸ್ ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಹೊಂದಿದೆ. ಪ್ರತಿಯೊಂದು ಜಾತಿ, ಧರ್ಮದವರು ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕು. ಗೋಡ್ಸೆ ಪೂಜೆ ಮಾಡುವವರಿಂದ ಸಾಮರಸ್ಯ ಕಾಪಾಡಲು ಸಾಧ್ಯವಿಲ್ಲ ಎಂದರು.

ದುರ್ಬಲ ಸಿಎಂ
ರಾಜ್ಯದಲ್ಲಿ ದುರ್ಬಲ ಸಿಎಂ ಆಳ್ವಿಕೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಎಂಬುವುದೇ ಇಲ್ಲ. ಆಡಳಿತ ಸಂಪೂರ್ಣ ಕುಸಿದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದರು.

ಕಾನೂನು ಮತ್ತು ಸಂಸದೀಯ ಸಚಿವರಾಗಿರುವ ಹಿರಿಯ ಮುಖಂಡ ಮಾಧುಸ್ವಾಮಿ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ. ಎಸ್.ಟಿ. ಸೋಮಶೇಖರ್ ಸಚಿವರಾಗಿರುವ ಸಹಕಾರ ಇಲಾಖೆ ಹೇಗೆ ನಡೆಯುತ್ತಿದೆ ಎಂಬುದನ್ನು ಮಾಧುಸ್ವಾಮಿ ಚನ್ನಾಗಿ ಹೇಳಿದ್ದಾರೆಂದರು.

ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದ್ದಂತೆ ಮೀಸಲಾತಿ ನಿಗದಿ ಪಡಿಸಿದ ಬಳಿಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದು ಸೂಕ್ತ ಎಂದು ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net