

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎ. ಮಂಜು ಜಾತ್ಯಾತೀತ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿರುವ ಎ.ಮಂಜು ಅವರ ಪುತ್ರ ಡಾ.ಮಂಥರ್‌ಗೌಡ ತೆಗೆದುಕೊಳ್ಳುವ ರಾಜಕೀಯ ನಿರ್ಧಾರದ ಬಗ್ಗೆ ರಾಜಕೀಯ ವಲಯದಲ್ಲಿ ಸಹಜ
ಕುತೂಹಲ ಮೂಡಿದೆ.
ಜೆಡಿಎಸ್‌ನಿಂದ ಟಿಕೆಟ್ ನೀಡುವ ಇಂಗಿತವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ಮುಖಂಡರಿಗೆ ಎ.ಮಂಜು ಧನ್ಯವಾದ ಕೂಡ ಸಲ್ಲಿಸಿದ್ದಾರೆ. ಜೆಡಿಎಸ್ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮುನ್ನವೇ ಎ.ಮಂಜು ಅವರಿಗೆ ಟಿಕೆಟ್ ಘೋಷಣೆಯಾಗಿರುವುದು ವಿಶೇಷ.
ಅರಕಲಗೂಡು ಕ್ಷೇತ್ರದಲ್ಲಿ ತಂದೆ, ಮಡಿಕೇರಿ ಕ್ಷೇತ್ರದಲ್ಲಿ ಮಗ ಜೆಡಿಎಸ್‌ನಿಂದ ಸ್ಪರ್ಧಿಸುವ ಅವಕಾಶ ಪಡೆಯುತ್ತಾರೆಂಬ ಮಾತು
ವ್ಯಕ್ತವಾಗುತ್ತಿದೆ. ಅಪ್ಪ ಇರುವಲ್ಲಿ ಮಗ ಇದ್ದರೆ ಒಳ್ಳೆಯದೆಂಬ ಅಭಿಪ್ರಾಯವನ್ನು ಮಾಧ್ಯಮಗಳ ಎದುರು ಎ.ಮಂಜು ವ್ಯಕ್ತ ಪಡಿಸಿ ರುವುದು ಮತ್ತಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ಕೊಡಗು ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾ.ಮಂಥರ್ ಗೌಡ ಅನಿರೀಕ್ಷಿತ ಅಭ್ಯರ್ಥಿಯಾಗಿದ್ದರು. ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ಮತ ಪಡೆಯು ವುದರ ಮೂಲಕ ಗಮನ ಸೆಳೆದಿದ್ದರು. ೩೦೦ ಕ್ಕೂ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳ ಮತ ಸೆಳೆಯುವ ಮೂಲಕ ಗಮನ ಸೆಳೆದಿದ್ದರು.
ಎಂಎಲ್ಸಿ ಚುನಾವಣೆಯಲ್ಲಿ ತೋರಿದ ಸಾಧನೆ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಮಂಥರ್ ಗೌಡ ಸ್ಪರ್ಧಿಸಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ತಮ್ಮ ಆತ್ಮೀಯ ರೊಂದಿಗೆ ಹೇಳಿಕೊಂಡಿದ್ದರು.
ಎಂಎಲ್ಸಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಿರಾಸೆಗೊಳ್ಳದ ಡಾ.ಮಂಥರ್‌ಗೌಡ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಯತ್ತ ಹೆಚ್ಚಿನ ನಿಗಾ ವಹಿಸಿದ್ದರು. ಕ್ರೀಡಾ ಚಟುವಟಿಕೆ, ಹಬ್ಬಹರಿದಿನ, ದೇವಾಲಯ ಅಭಿವೃದ್ಧಿ ಸೇರಿದ್ದಂತೆ ವೈಯುಕ್ತಿಕವಾಗಿ ಸಾಕಷ್ಟು ಜನರಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಜನರ ವಿಶ್ವಾಸ ಸಂಪಾದಿಸುವಲ್ಲಿ ಸಫಲರಾಗಿದ್ದಾರೆ.
ಜನರೊಂದಿಗೆ ಬೆರೆಯುವ ರೀತಿ, ನಡೆದುಕೊಳ್ಳುವ ರೀತಿ ನೀತಿಯಿಂದ ಅಲ್ಪಾವಧಿಯಲ್ಲಿ ಡಾ.ಮಂಥರ್‌ಗೌಡ ಜನರ ಪ್ರೀತಿ- ವಿಶ್ವಾಸ ಸಂಪಾದಿಸುವಲ್ಲಿ ಸಫಲರಾಗಿದ್ದಾರೆ. ಚುರುಕತನ, ತಕ್ಷಣ ಸ್ಪಂದಿಸುವ ಮನೋಭಾವ, ನುಡಿದಂತೆ ನಡೆದುಕೊಳ್ಳುವುದು ಹೆಚ್ಚು ಜನರಿಗೆ ಇಷ್ಟವಾಗಿದೆ.
ಮಡಿಕೇರಿ ಕ್ಷೇತ್ರದಿಂದ ಮಾಜಿ ಸಚಿವ ಬಿ.ಎ. ಜೀವಿಜಯ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ೧೩ ಚುನಾವಣೆ ಎದುರಿಸಿರುವ, ವೈಯುಕ್ತಿಕ ರಾಜಕೀಯ ಸಾಮರ್ಥ್ಯ ಹೊಂದಿರುವ ಜೀವಿಜಯ ಪರ ವರಿಷ್ಠರು ಒಲವು ಹೊಂದಿದ್ದಾರೆ. ಎಐಸಿಸಿ, ಕೆಪಿಸಿಸಿ ನಡೆಸಿರುವ ಸಮೀಕ್ಷೆಯಲ್ಲಿಯೂ ಜೀವಿಜಯ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಜೀವಿಜಯ ಕಡೆ ಒಲವು ಹೊಂದಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜೀವಿಜಯ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ಕಲ್ಪಿಸಿದ್ದಲ್ಲಿ ಅನಿವಾರ್ಯವಾಗಿ ಡಾ.ಮಂಥರ್‌ಗೌಡ ಜೆಡಿಎಸ್ ಅಭ್ಯರ್ಥಿಯಾಗಲಿ ದ್ದಾರೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ತೊರೆಯುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ಡಾ.ಮಂಥರ್‌ಗೌಡ ವ್ಯಕ್ತ ಪಡಿಸುತ್ತಿದ್ದಾರೆ.
ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿನಲ್ಲಿಯೇ ಉಳಿದುಕೊಂಡಿದ್ದ ಡಾ.ಮಂಥರ್‌ಗೌಡ ಹಾಸನ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯರಾಗಿದ್ದರು. ಅವಧಿ ಮುಗಿದ ಬಳಿಕ ಬಿಜೆಪಿ ಸೇರ್ಪಡೆಗೊಳ್ಳು ತ್ತಾರೆಂಬ ಚರ್ಚೆ ನಡೆದಿತ್ತು. ಆದರೆ, ಬಿಜೆಪಿ ಸೇರ್ಪಡೆಗೊಳ್ಳದ ಮಂಥರ್ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರು.
ನಾಪಂಡ ಮುತ್ತಪ್ಪ ಸ್ಪರ್ಧೆ
ಜೆಡಿಎಸ್ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಿಂದ ನಾಪಂಡ ಮುತ್ತಪ್ಪ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ಸಂಭವನೀಯ ಅಭ್ಯರ್ಥಿ ಎಂದು ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ನಿರಂತರ ಹಬ್ಬುತ್ತಿರುವುದು ಒಂದಿಷ್ಟು ಗೊಂದಲ ಮೂಡಿಸುವಂತೆ ಮಾಡಿದೆ.
ಪಂಚರತ್ನ ರಥಯಾತ್ರೆ ಮಾದರಿಯಲ್ಲಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ನಾಪಂಡ ಮುತ್ತಪ್ಪ ಯಾತ್ರೆ ನಡೆಸುತ್ತಿದ್ದಾರೆ. ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹೊಳೆನರಸಿಪುರದಲ್ಲಿ ಯಾತ್ರೆಗೆ ಚಾಲನೆ ನೀಡಿದ್ದರು. ಮುಂದಿನ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಶುಭ ಹಾರೈಕೆ ಕೂಡ ಮಾಡಿದ್ದರು.
ರಾಜಕೀಯ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ತೊರೆದು ಬರುವವರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಿದ್ದಲ್ಲಿ ನಾಪಂಡ ಮುತ್ತಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆಯೂ ವಿಶ್ಲೇಷಣೆ ನಡೆಯುತ್ತಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷರ ಎಚ್ಚರಿಕೆ
ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿಲ್ಲ. ಸಂಭವನೀಯ ಅಭ್ಯರ್ಥಿ ಎಂದು ಪ್ರಚಾರ ಮಾಡಬೇಡಿ. ಪ್ರಸ್ತುತ ನಡೆಸುತ್ತಿರುವ ಯಾತ್ರೆ ಹಾಗೂ ಸಂಭವನೀಯ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರುವ ಬಗ್ಗೆ ವಿವರಣೆ ನೀಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೋಟೀಸ್ ಜಾರಿ ಮಾಡಿದ್ದರು. ಇದಕ್ಕೆ ನಾಪಂಡ ಮುತ್ತಪ್ಪ ತಿರುಗೇಟು ನೀಡಿದ್ದರು. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಕ್ಕೆ ಜಿಲ್ಲಾಧ್ಯಕ್ಷರನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು.
**
ನಮ್ಮ ತಂದೆ ನಮ್ಮ ಪಕ್ಷದಲ್ಲಿ ಇಲ್ಲ. ತಂದೆ ಜೆಡಿಎಸ್ ಸೇರ್ಪಡೆಗೊಂಡ ಮಾತ್ರಕ್ಕೆ ನಾನು ಕಾಂಗ್ರೆಸ್ ತೊರೆಯುವುದಿಲ್ಲ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ. ಶುಕ್ರವಾರ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ಡಾ.ಮಂಥರ್‌ಗೌಡ, ಕಾಂಗ್ರೆಸ್ ಯುವ ಮುಖಂಡ.