

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪ್ರಕೃತಿ ವಿಕೋಪ ಸಂತ್ರಸ್ತರ ಒತ್ತಡಕ್ಕೆ ಮಣಿದು ಕೊನೆಗೆ ಕಳಕೇರಿ ನಿಡುಗಣೆ ಗ್ರಾಮದಲ್ಲಿ ನಿರ್ಮಿಸಿರುವ ಮನೆಗಳನ್ನು ಶುಕ್ರವಾರ ಹಸ್ತಾಂತರಿಸ ಲಾಯಿತು. ಮನೆ ಕಾಮಗಾರಿ ಪೂರ್ಣಗೊಂಡು ೭ ತಿಂಗಳು ಕಳೆದಿದ್ದರೂ ಮನೆ ಹಸ್ತಾಂತರ ಮಾಡದ್ದಕ್ಕೆ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು. ಮುಖ್ಯಮಂತ್ರಿ ಮೂಲಕ ಮನೆ ಹಸ್ತಾಂತರಿಸುವ ಉದ್ದೇಶದಿಂದ ವಿಳಂಬವಾಯಿತು.
೨೦೧೮ ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ೭೪ ಸಂತಸ್ತರಿಗೆ ಆರ್‌ಟಿಒ ಕಚೇರಿ ಸಮೀಪ ರಾಜೀವ್ ಗಾಂಧಿ ವಸತಿ ನಿಗಮದಿಂದ ತಲಾ ೯.೮೫ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಮಂಗಳವಾರ ಮಡಿಕೇರಿ ಶಾಸಕರಿಂದ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮುಖ್ಯಮಂತ್ರಿ ನಿರೀಕ್ಷೆಯಲ್ಲಿ ಮನೆ ಹಸ್ತಾಂತರ ವಿಳಂಬವಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ವಸತಿ ಸಚಿವ ವಿ. ಸೋಮಣ್ಣ ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕೂಡ ಕಾರ್ಯಕ್ರಮಕ್ಕೆ ಬರಲಿಲ್ಲ.
ಒಂದು ವಾರದೊಳಗೆ ಮನೆ ನೀಡದಿದ್ದಲ್ಲಿ ಬೀಗ ಒಡೆದು ಮನೆ ಪ್ರವೇಶಿಸುವುದಾಗಿ ಸಂತ್ತಸ್ತರು ಜಿಲ್ಲಾಧಿಕಾರಿಗೆ ನೀಡಿದ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು. ಒಂದು ವಾರದಲ್ಲಿ ಮನೆ ಹಸ್ತಾಂತರ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸ ಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರಿನಲ್ಲಿ ೩೯೦ ಸಂತ್ರಸ್ತರಿಗೆ ಮನೆ ನೀಡಲಾಗಿದೆ. ಅಲ್ಲಿ ಇನ್ನೂ ೨೫೦ ಮನೆ ಹಂಚಿಕೆ ಮಾಡಲು ಬಾಕಿ ಇದೆ. ಗಾಳಿಬೀಡು ಗ್ರಾಪಂ ವ್ಯಾಪ್ತಿಯ ಕೋಳಿಗೂಡಿನಲ್ಲಿ ೧೬೦ ಮನೆ ನಿರ್ಮಾಣಗೊಂಡಿದ್ದು, ಶೀಘ್ರ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುವುದೆಂದು ಮಡಿಕೇರಿ ಶಾಸಕರು ಹೇಳಿದರು.
ಕೆಲವು ಸಂತ್ರಸ್ತರಿಗೆ ಕರುಣೆ, ಕೃತಜ್ಞತೆ ಇಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ, ಟಾಯ್ಲೆಟ್ ಬ್ಲಾಕ್ ಆದರೆ ಶಾಸಕರಿಗೆ ಕರೆ ಮಾಡುತ್ತಾರೆ. ಮೂಲಭೂತ ಸವಲತ್ತು ಒದಗಿಸಿದ ಬಳಿಕ ಮನೆ ಹಸ್ತಾಂತರ ಮಾಡಬೇಕೆಂಬ ಉದ್ದೇಶದಿಂದ ಕೆ.ನಿಡುಗಣೆ ಮನೆ ಹಸ್ತಾಂತರ ವಿಳಂಬ ವಾಗಿದೆ ಎಂದರು.
ಫಲಾನುಭವಿಗಳು ಮನೆ ಚನ್ನಾಗಿಟ್ಟುಕೊಳ್ಳಬೇಕು. ಮನೆ ಹಿಂಭಾಗದಲ್ಲಿರುವ ೭ ಅಡಿ ಜಾಗ ಬಳಸಿಕೊಳ್ಳಬಹುದು. ಮೇಲಂತಸ್ತು ನಿರ್ಮಾಣ ಮಾಡಬಹುದು. ೨ ಮನೆ ಹೊಂದಿದ್ದವರ ಹಕ್ಕುಪತ್ರ ರದ್ದು ಪಡಿಸಲಾಗುವುದು. ಬಾಡಿಗೆಗೆ ನೀಡುವುದು, ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಶಾಸಕರು ಎಚ್ಚರಿಸಿದರು.
ನಿರಾಶ್ರಿತರಿಗೆ ಸಂತಸದ ದಿನ. ೨೦೧೮ರ ಕರಾಳ ದಿನ ನೆನೆಯುವಾಗ ಇಂದಿಗೂ ಭಯವಾಗುತ್ತದೆ. ನಿವೇಶನ, ಮನೆ ಸೇರಿದ್ದಾಗ ಒಬ್ಬರಿಗೆ ೨೫ ಲಕ್ಷ ರೂಪಾಯಿ ಮೊತ್ತದ ಸವಲತ್ತು ಸಿಕ್ಕಂತಾಗುತ್ತದೆ. ಈ ರೀತಿಯ ಮನೆ ಸರ್ಕಾರ ಎಲ್ಲಿಯೂ ನಿರ್ಮಿಸಿಕೊಟ್ಟಿಲ್ಲ. ಮನೆ ಮತ್ತು ಸುತ್ತಮುತ್ತಲಿನ ವಾತಾವರಣ ಚನ್ನಾಗಿಟ್ಟುಕೊಳ್ಳಬೇಕೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.
ನೀರಿನ ಸಮಸ್ಯೆ ಪರಿಹರಿಸಲಾಗುವುದು. ಬೋಗಸ್ ಮಾಹಿತಿ ನೀಡಿ ಮನೆ ಪಡೆದುಕೊಂಡಿರುವುದು ಪತ್ತೆಯಾದ್ದಲ್ಲಿ ಕ್ರಮ ತೆಗೆದುಕೊಳ್ಳ ಲಾಗುವುದೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು. ತಮಗೆ ಸಿಕ್ಕ ಮನೆ ಮಾರಾಟ ಮಾಡಬಾರದು. ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆ ಪರಿಹರಿಸಲು ನಾವಿದ್ದೇವೆ ಎಂದು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದ್ದಂಡ ಡೀನ್ ಬೋಪಣ್ಣ
ಹೇಳಿದರು.
ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉದಿಯಂಡ ರೀಣಾ ಮುತ್ತಣ್ಣ, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಜೀವ್ ಗಾಂಧಿ ವಸತಿ ನಿಗಮದ ಪ್ರತಿನಿಧಿ ಶ್ರೀನಿವಾಸ್ ಮತ್ತಿತರರು ಇದ್ದರು.
೨೦ ಫಲಾನುಭವಿಗಳು ಗೈರು
೭೪ ಸಂತ್ರಸ್ತರಿಗೆ ಮನೆ ಹಸ್ತಾಂತರಿಸಲು ಜಿಲ್ಲಾಡಳಿತ ಪಟ್ಟಿ ಮಾಡಿಕೊಂಡಿದೆ. ಈ ಪೈಕಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೫೪ ಫಲಾನುಭವಿಗಳು ಮಾತ್ರ ಪಾಲ್ಗೊಂಡಿದ್ದರು. ಅನಾರೋಗ್ಯ ಸೇರಿದ್ದಂತೆ ವಿವಿಧ ಕಾರಣ ನೀಡಿ ೨೦ ಫಲಾನುಭವಿಗಳು ಸ್ಥಳಕ್ಕೆ ಬಂದಿರಲಿಲ್ಲ. ಸಭಾ ಕಾರ್ಯಕ್ರಮದಲ್ಲಿ ನಾಲ್ವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು. ೭೫ ಮನೆ ಪೈಕಿ ೧ ಮನೆಯನ್ನು ಅಂಗಡಿಗೆ ಕಾಯ್ದಿರಿಸಲಾಗಿದೆ.
ನೀರಿನ ಸಮಸ್ಯೆ
ಮೂಲಭೂತ ಸವಲತ್ತು ಒದಗಿಸಿದ ಮೇಲೆ ಮನೆ ಹಸ್ತಾಂತರ ಮಾಡಬೇಕೆಂಬ ಕಾರಣಕ್ಕಾಗಿ ವಿಳಂಬವಾಗಿದೆ ಎಂದು ಶಾಸಕರು ತಮ್ಮ ಭಾಷಣದಲ್ಲಿ ಹೇಳಿದರು. ಹೀಗಿದ್ದರೂ, ಹೊಸ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇರುವುದನ್ನು ಸ್ವತಃ ಅವರೇ ಭಾಷಣದಲ್ಲಿ ಉಲ್ಲೇಖಿಸಿ ದರು. ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಶಾಸಕರು ಹಾಗೂ ಜಿಲ್ಲಾಧಿಕಾರಿ ನೀಡಿದರು.
ಸಮಿತಿ ರಚಿಸಿ
ಹೊಸ ಬಡಾವಣೆಯ ನಿರ್ವಹಣೆಗಾಗಿ ಫಲಾನುಭವಿಗಳ ಪೈಕಿ ೧೫ ಜನರನ್ನೊಳಗೊಂಡ ಸಮಿತಿ ರಚಿಸುವಂತೆ ಶಾಸಕರು ಸಲಹೆ ನೀಡಿದರು. ಪ್ರತಿವರ್ಷ ಒಂದು ಮನೆಯಿಂದ ೧ ಸಾವಿರ ರೂಪಾಯಿ ದೇಣಿಗೆ ನೀಡಬೇಕು. ಈ ಹಣವನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಬಡಾವಣೆಯಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆ ಪರಿಹರಿಸಿಕೊಳ್ಳಬಹುದೆಂದರು.
**
ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಿಸಿರುವ ಮನೆ ಸಮೀಪದಲ್ಲಿಯೇ ಇರುವ ಅಬ್ಬಿ ಜಲಪಾತದ ವೀಕ್ಷಣೆಗೆ ದೇಶ- ವಿದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಫಲಾನುಭವಿಗಳು ತಮ್ಮ ಮನೆ ಹಾಗೂ ಬಡಾವಣೆಯನ್ನು ಚನ್ನಾಗಿಟ್ಟುಕೊಳ್ಳಬೇಕು. ಒಂದು ವರ್ಷ ರಾಜೀವ್ ಗಾಂಧಿ ವಸತಿ ನಿಗಮ ನಿರ್ವಹಣೆ ಮಾಡಲಿದ್ದು, ತದನಂತರ ಫಲಾನುಭವಿಗಳು ನಿರ್ವಹಣೆ ಮಾಡಿಕೊಳ್ಳಬೇಕು. ಡಾ.ಬಿ.ಸಿ. ಸತೀಶ, ಜಿಲ್ಲಾಧಿಕಾರಿ. ಕೊಡಗು.
**
ಹೊಸ ಬಡಾವಣೆಯಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಫಲಾನುಭವಿಗಳೊಂದಿಗೆ ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿ ಸದಾ ಇರುತ್ತದೆ. ಸಮಸ್ಯೆ, ಕುಂದುಕೊರತೆ ಶಾಸಕರು, ಜಿಲ್ಲಾಧಿಕಾರಿ ಗಮನಕ್ಕೆ ತಂದು ತಕ್ಷಣ ಪರಿಹರಿಸಲಾಗುತ್ತದೆ. ಫಲಾನುಭವಿಗಳೊಂದಿಗೆ ಗ್ರಾಪಂ ಇರುತ್ತದೆ. ಮುದ್ದಂಡ ಡೀನ್ ಬೋಪಣ್ಣ, ಅಧ್ಯಕ್ಷರು, ಕೆ.ನಿಡುಗಣೆ ಗ್ರಾಮ ಪಂಚಾಯಿತಿ.
**
೨೦೧೮ ರಲ್ಲಿ ಮನೆ ಕಳೆದುಕೊಂಡಿದ್ದು, ೪ ವರ್ಷದಿಂದ ಬಾಡಿಗೆ ಮನೆಯಲ್ಲಿದ್ದೇವೆ. ಕಾರ್ಮಿಕರಾಗಿ ದುಡಿಯುತ್ತಿರುವ ನಮಗೆ ಆರ್ಥಿಕ ಸಮಸ್ಯೆಯಿಂದ ಬಾಡಿಗೆ ಕಟ್ಟಲು ಕಷ್ಟವಾಗುತ್ತಿತ್ತು. ಕೊನೆಗೂ ಮನೆ ಸಿಕ್ಕಿರುವುದು ಸಂತಸ ತಂದಿದ್ದು, ಭಾನುವಾರ ಗೃಹ ಪ್ರವೇಶ ಮಾಡು ತ್ತೇವೆ. ದೇವಕ್ಕಿ ಆನಂದ್, ಫಲಾನುಭವಿ, ಹೆಬ್ಬಟ್ಟಗೇರಿ.