

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ದೇಶ ದ್ರೋಹಿಗಳು ಬಾಂಬ್ ತಯಾರಿಸುವ ಕೇಂದ್ರಗಳ ಮೇಲೆ ಗೃಹ ಇಲಾಖೆ ದಾಳಿ ಮಾಡಬೇಕು. ಆ ಮೂಲಕ ದೇಶದ್ರೋಹಿ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ಬಾಂಬ್ ತಯಾರಿಸುವ ಕೇಂದ್ರಗಳ ಮಾಹಿತಿ ಇದ್ದು, ಇದನ್ನು ಬಹಿರಂಗವಾಗಿ ತಿಳಿಸುವುದಿಲ್ಲ. ಇದರ ಬದಲು ಗೃಹ ಇಲಾಖೆಗೆ ನೀಡಲಾಗು ವುದೆಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ನಿಷೇಧ ಮಾಡಿದ ಮಾತ್ರಕ್ಕೆ ಅವರ ಚಟುವಟಿಕೆ ನಿಲ್ಲುವುದಿಲ್ಲ. ದೇಶ ವಿರೋಧಿ ಚಟುವಟಿಕೆ ಮುಂದುವರಿಸುತ್ತಾರೆ. ದೇಶ ವಿರೋಧಿ ಕೃತ್ಯ ನಡೆಸುವ ಕೇಂದ್ರಗಳ ಮೇಲೆ ದಾಳಿ ನಡೆಸಬೇಕೆಂದರು.
ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸುವ ಮೂಲಕ ದೇಶದ ಜನತೆಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ದೇಶದಲ್ಲಿ ಹಿಂಸಚಾರ, ಆಂತರಿಕ ಭದ್ರತೆಗೆ ಧಕ್ಕೆವುಂಟು ಮಾಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ದೇಶದಲ್ಲಿದ್ದುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದರು. ಇವರ ಮೇಲೆ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಂಘಟನೆಗಳ ನಿಷೇಧಕ್ಕೆ ಮಾತ್ರ ಬಿಡಬಾರದು. ದೇಶದ ಭದ್ರತಾ ಕಾಯ್ದೆಯಡಿ ಶಾಶ್ವತವಾಗಿ ಜೈಲಿನಲ್ಲಿರುವಂತೆ ಮಾಡಬೇಕೆಂದರು.
ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಯವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ದೇಶದಲ್ಲಿ ಶಾಂತಿ ನೆಲಸಬೇಕು. ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕೆಂದರು.