ಕೊಡಗಿನಲ್ಲಿ ನಾಟಕೋತ್ಸವ ಆಯೋಜನೆ

7mdkf1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ನಾಟಕೋತ್ಸವ ಆಯೋಜಿಸುವ ಇಂಗಿತವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ವ್ಯಕ್ತ ಪಡಿಸಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಪರಶುರಾಮ ನಾಟಕವೀಕ್ಷಿಸಿ ಮಾತನಾಡಿದರು.

ಮೈಸೂರು ಮತ್ತಿತರ ಭಾಗಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆ ಇದೆ. ಇತರ ಜಿಲ್ಲೆಗಳಲ್ಲಿ ನವರಾತ್ರಿ ಸಂದರ್ಭ ೯ ದಿನಗಳೂ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತದೆ. ಸಾಧ್ಯವಾದರೆ ಮಡಿಕೇರಿಯಲ್ಲೂ ಮುಂದಿನ ದಿನಗಳಲ್ಲಿ ಇಂತಹ ಪ್ರಯೋಗ ಮಾಡುವ ಪ್ರಯತ್ನ ನಡೆಸಲಾಗುವುದೆಂದರು.

ಪರಶುರಾಮ ನಾಟಕ ಪ್ರದರ್ಶನ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆಯ ಮಾತನಾಡಿದರು. ಪುರಾಣದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇಂತಹ ನಾಟಕಗಳು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನಾಟಕೋತ್ಸವವನ್ನು ಎಲ್ಲರೂ ಸೇರಿ ಆಯೋಜನೆ ಮಾಡಬಹುದು. ವೈಯಕ್ತಿಕ ಮತ್ತು ವೃತ್ತಿ ಕಾರಣದಿಂದ ಒತ್ತಡದಲ್ಲಿ ಇರುವ ಇಂದಿನ ದಿನಗಳಲ್ಲಿ ಎಲ್ಲರೂ ಸೇರುವ ಮತ್ತು ಮನೋರಂಜನೆ ಪಡೆಯುವ ಅವಕಾಶಗಳು ಕಡಿಮೆ ಆಗುತ್ತಿದೆ. ನಾಟಕಗಳ ಮೂಲಕ ಮನೋಲ್ಲಾಸದ ಅವಕಾಶಗಳು ದೊರೆಯುವಂತಾಗಲಿ ಎಂದರು.

ಇದಕ್ಕೂ ಮೊದಲು ನಾಟಕ ಪ್ರದರ್ಶನ ಉದ್ಘಾಟಿಸಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳು ಸೆಪ್ಟೆಂಬರ್ ತನಕವೂ ಮುಂದುವರಿಯಲಿದೆ ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಮಾತನಾಡಿ, ಪರಶುರಾಮ ಕ್ಷೇತ್ರದಿಂದ ಬಂದಿರುವ ಜೀವನ್‌ರಾಂ ಸುಳ್ಯ ಅವರ ನಾಟಕ ಮನೋರಂಜನ ಒದಗಿಸುವುದರೊಂದಿಗೆ ಅರ್ಥ ಗ್ರಹಿಸುವ ಶಕ್ತಿ ಮೂಲಕ ಪುರಾಣ ಲೋಕಕ್ಕೆ ಕರೆದುಕೊಂಡು ಹೋಯಿತು ಎಂದು ಹೇಳಿದರು.

ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ನಾಟಕದ ನಿರ್ದೇಶಕ ಡಾ. ಜೀವನ್‌ರಾಂ ಸುಳ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿದರು. ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಸಂತ ಜೋಸೆಫರ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯರಾದ ರೋಸಿ ಸಿಸ್ಟರ್ ಮತ್ತಿತರರು ಇದ್ದರು.

ಕಲಾ ಶಿಕ್ಷಕ ಉ.ರಾ. ನಾಗೇಶ್, ಲೇಖಕಿ ಕೊಟ್ಟಕೇರಿಯನ ಲೀಲಾ ದಯಾನಂದ, ಪುಟಾಣಿ ತಿಷ್ಯಾ ಪೊನ್ನೇಟಿ ನಾಟಕದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್ ಕುಮಾರ್ ಗುಹ್ಯ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net