

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನರಭಕ್ಷಕ ಹೆಣ್ಣು ಹುಲಿ ಮತ್ತೊಂದು ಹುಲಿಯೊಂದಿನ ಕಾದಾಟದಲ್ಲಿ ಗಂಭೀರ ಸ್ವರೂಪದಲ್ಲಿ ಪೆಟ್ಟುತಿಂದು ಕಾಡು ತೊರೆದಿತ್ತು. ಬಲಭಾಗದ ಭುಜ, ಎಡ ಭಾಗದ ಪಾದ, ಉಗುರಿನ ಭಾಗಕ್ಕೆ ಪೆಟ್ಟಾಗಿದೆ. ಮೇಲ್ಭಾಗದ ಒಂದು ಹಲ್ಲು ಕೂಡ ಮುರಿದಿದೆ. ದೇಹದ ಹಲವು ಭಾಗದಲ್ಲಿ ಗಾಯವಾಗಿದ್ದು, ಕೊಳೆತ್ತಿದೆ. ಗಾಯಗಳಲ್ಲಿ ಸಣ್ಣಸಣ್ಣ ಬಿಳಿ ಬಣ್ಣದ ಹುಳಗಳು ಕಾಣಿಸಿಕೊಂಡಿವೆ.
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕುಟ್ಟ ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಬಳಿಕ ಸೆರೆಸಿಕ್ಕ ಹುಲಿ ತನ್ನ ಆಹಾರಕ್ಕಾಗಿ ಕಾಡುಪ್ರಾಣಿ ಬೇಟೆಯಾಡುವ ಶಕ್ತಿ ಕಳೆದುಕೊಂಡಿತ್ತು. ಆ ಕಾರಣಕ್ಕಾಗಿಯೇ ಜಾನುವಾರು, ಮನುಷ್ಯರ ಮೇಲೆ ದಾಳಿ ಪ್ರಾರಂಭಿಸಿ ತ್ತೆಂದು ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಪಶುವೈದ್ಯ ಡಾ.ಬಲ್ಲಡಿಚಂಡ ಚಿಟ್ಟಿಯಪ್ಪ ಹೇಳುತ್ತಾರೆ.
ಐದು ತಿಂಗಳ ಹಿಂದೆಯೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಈ ಹುಲಿ ಹೊರ ಬಂದು, ಊರು ಸೇರಿಕೊಂಡಿತ್ತು. ಉದ್ಯಾನವನದಿಂದ ಹೊರ ಬಂದಿರುವುದು ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ಇದಕ್ಕೆ ಐಡಿ ಸಂಖ್ಯೆ ಕೂಡ ನೀಡಲಾಗಿತ್ತು. ಅಸಹಾಯಕ ಸ್ಥಿತಿಗೆ ತಲುಪಿದ್ದ ಅಂದಾಜು ೧೨ ವರ್ಷದ ಹುಲಿ ಊರಿನಲ್ಲಿ ಆಹಾರಕ್ಕಾಗಿ ಜಾನುವಾರ ಮೇಲೆ ದಾಳಿ ಮಾಡುತ್ತಿತ್ತು. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಹಲವೆಡೆಯಲ್ಲಿ ಜಾನುವಾರುಗಳನ್ನು ಕೊಂದು ಹಾಕಿತ್ತು.
ಘಾಸಿಗೊಂಡಿರುವ ಈ ಹುಲಿ ದುರ್ಬಲವಾಗಿದ್ದು, ಅಸಹಾಯಕ ಪರಿಸ್ಥಿತಿಗೆ ತಲುಪಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಶುವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮೈಸೂರಿನ ಕೂರ್ಗಳ್ಳಿಗೆ ಕಳುಹಿಸಿಕೊಟ್ಟಿದ್ದಾರೆ. ಕೂರ್ಗಳ್ಳಿಯಲ್ಲಿ ಚಿಕಿತ್ಸೆ ಮುಂದುವರಿಸ ಲಾಗಿದೆ ಎಂದು ಪಶುವೈದ್ಯಾಧಿಕಾರಿ ಡಾ.ರಮೇಶ್ ಹೇಳುತ್ತಾರೆ.
ಗುಂಡಿಕ್ಕಿದ್ದ ಕನ್ನಂಡ ರಂಜನ್
ಕುಶಾಲನಗರ ವಲಯದಲ್ಲಿ ಸಹಾಯಕ ವಲಯ ಅರಣ್ಯಾಧಿಕಾರಿಯಾಗಿ ದುಬಾರೆ ಸಾಕಾನೆ ಶಿಬಿರದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಕನ್ನಂಡ ರಂಜನ್ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ನರಭಕ್ಷಕ ಹುಲಿಗೆ ಅರವಳಿಕೆ ಮದ್ದಿನ ಗುಂಡು ಸಿಡಿಸಿದ್ದರು. ಕೇವಲ ೧೦ ಅಡಿ ದೂರದಿಂದ ಗುಂಡಿಕ್ಕಿ ಧೈರ್ಯ ಮತ್ತು ಸಾಹಸ ಮೆರೆದಿದ್ದಾರೆ.
ಮುಂದುವರಿದ ಕೂಂಬಿಂಗ್
ಕುಟ್ಟ ಬಾಡಗ ಭಾಗದಲ್ಲಿ ಹುಲಿ ಶೋಧಾ ಕಾರ್ಯಾಚರಣೆ ಮುಂದುವರಿದಿದೆ. ಕಾಫಿ ತೋಟದಲ್ಲಿ ಹುಲಿ ಇರುವ ಆತಂಕವನ್ನು ಸ್ಥಳೀಯರು ವ್ಯಕ್ತ ಪಡಿಸುತ್ತಿರುವುದರಿಂದ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಡಾ.ಹರ್ಷ ಹೇಳುತ್ತಾರೆ.
ಐದು ಸಾಕಾನೆಯೊಂದಿಗೆ ೨೦ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹುಲಿ ಪತ್ತೆಯಾದ್ದಲ್ಲಿ ಪೂರ್ಣ ಪ್ರಮಾಣದ ತಂಡ ಸ್ಥಳಕ್ಕೆ ಆಗಮಿಸಲಿದೆ. ಶೇ.೯೯ ರಷ್ಟು ನರಭಕ್ಷಕ ಹುಲಿ ಸೆರೆಹಿಡಿಯಲಾಗಿದೆ. ಹೀಗಿದ್ದರೂ, ಸ್ಥಳೀಯರಲ್ಲಿ ಒಂದಿಷ್ಟು ಸಹಜವಾದ ಅನುಮಾನ ಇದೆ. ಇದರ ನಿವಾರಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಡಾ.ಬಲ್ಲಡಿಚಂಡ ಚಿಟ್ಟಿಯಪ್ಪ ಮಾಹಿತಿ ನೀಡಿದ್ದಾರೆ.
**
ಹುಲಿಯೊಂದಿನ ಕಾದಾಟದಲ್ಲಿ ಘಾಸಿಗೊಂಡು ಅಸಹಾಯಕ ಪರಿಸ್ಥಿತಿಗೆ ತಲುಪಿದೆ. ಕಾಡುಹಂದಿ ಬೇಟೆಯಾಡುವ ವೇಳೆ ಒಂದು ಹಲ್ಲು ಮುರಿದಿರುವ ಸಾಧ್ಯತೆ ಇದೆ. ವಯಸ್ಸಾಗಿದ್ದು (ಅಂದಾಜು ೧೨ ಪ್ರಾಯ), ಬೇಟೆಯಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಿಂದಾಗಿ ಸೊರಗಿದೆ. ಡಾ.ಬಲ್ಲಡಿಚಂಡ ಚಿಟ್ಟಿಯಪ್ಪ, ಹಿರಿಯ ಪಶುವೈದ್ಯರು.