ಹುಲುಸೆ ಗ್ರಾಮ ಸೀಲ್ಡೌನ್

26adarshkdga4
Published on

ವ್ಯಕ್ತಿಗೆ ಕರೊನಾ ಪಾಸಿಟಿವ್ ಹಿನ್ನೆಲೆ

ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸ್ವಾಮಿ ಕಣಿವೆ ಸಮೀಪದ ಹುಲುಸೆ ಗ್ರಾಮದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ಮೇರೆಗೆ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಯನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ ದೆಹಲಿಯಲ್ಲಿ ಸಿಆರ್‌ಪಿಎಫ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. 4 ದಿನಗಳ ಹಿಂದೆ ಹುಲುಸೆ ಗ್ರಾಮದ ತಮ್ಮ ಮನೆಗೆ ಆಗಮಿಸಿದ್ದರು. ತಪಾಸಣೆಗೆ ಒಳಪಟ್ಟು ಗಂಟಲು ದ್ರವವನ್ನು ಪಡೆದು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು.
ವರದಿಗಳು ಬಂದ ನಂತರ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರಪೇಟೆ ತಹಸೀಲ್ದಾರ್ ಗೋವಿಂದರಾಜು ಆದೇಶದಂತೆ ಮಡಿಕೇರಿಗೆ ಕಳುಹಿಸಿದ್ದಾರೆ. ಸೋಂಕಿತನ ಮನೆಯ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯ ಎಲ್ಲವನ್ನು ಸೀಲ್ ಮಾಡಲಾಗಿದೆ.
ಮನೆಯಲ್ಲಿದ್ದ ಅವರ ಪತ್ನಿ ಮತ್ತು ಎರಡು ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಮತ್ತು ಸರ್ಕಾರದ ಆದೇಶದನ್ವಯ ಮನೆಯಿಂದ ಹೊರಬರದಂತೆ ಎಚ್ಚರಿಸಲಾಗಿದೆ. ಹುಲುಸೆ ಗ್ರಾಮದ ಪ್ರತಿ ರಸ್ತೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯವನ್ನು ಮಾಡಲಾಗಿದೆ.
ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಸುನೀಲ್, ತಾಲೂಕು ವೈದ್ಯಾಧಿಕಾರಿ ಸುಪ್ರೀತಾ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭರತ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಅರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net