

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡವರ ಕುಲದೇವಿ ಕಾವೇರಿ ಹಾಗೂ ಕೊಡವತಿಯರ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಿಜೆಪಿ ಮುಖಂಡನ ಪುತ್ರ ಕರಿನೆರವಂಡ ದಿವಿನ್ ದೇವಯ್ಯ (೨೯) ಬಂಧನ ಕೊಡವರು ಹಾಗೂ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದೆ. ಮುಸ್ಲಿಮರು ಅವಹೇಳನ ಮಾಡಿದ್ದಾರೆಂದು ಹಲವು ದಿನಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಸದಸ್ಯ ಕರಿನೆರವಂಡ ರಮೇಶ್ ಪೊನ್ನಣ್ಣ ಅವರ ದ್ವಿತೀಯ ಪುತ್ರ ದಿವಿನ್ ದೇವಯ್ಯ ಬಂಧನ ಆಗುತ್ತಿದ್ದಂತೆ ಕೊಡವರು ತಲೆತಗ್ಗಿಸುವಂತಾಗಿದೆ. ವಿಧಾನ ಪರಿಷತ್ ಬಿಜೆಪಿ ಸದಸ್ಯರೊಬ್ಬರ ಪರಮಾಪ್ತ ಬಳಗದಲ್ಲಿ ಗುರುತಿಸಿ ಕೊಂಡಿರುವ ಮುಖಂಡನ ಪುತ್ರನ ಬಂಧನದಿಂದ ಬಿಜೆಪಿ ಕೂಡ ಕಸಿವಿಸಿ ಅನುಭವಿಸುವಂತಾಗಿದೆ.
ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದಲ್ಲಿ ನೆಲೆಸಿರುವ ಕರಿನೆರವಂಡ ರಮೇಶ್ ಪೊನ್ನಣ್ಣ ಶ್ರೀಮಂತ ಕಾಫಿ ಬೆಳೆಗಾರರಾಗಿದ್ದು, ಎಂಎಲ್ಸಿ ಬೆಂಬಲಿಗರಾಗಿ ಹಲವು ವರ್ಷದಿಂದ ರಾಜಕೀಯದಲ್ಲಿ ಗುರುತಿಸಿಕೊಂಡವರು. ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ ದಿವಿನ್ ದೇವಯ್ಯ ಹಲವು ತಿಂಗಳಿನಿಂದ (ವರ್ಕ್ ಫ್ರಮ್ ಹೋಮ್) ಮನೆಯಿಂದ ಕರ್ತವ್ಯಯಿಂದ ನಿರ್ವಹಿಸುತ್ತಿದ್ದ.
ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆಯಲ್ಲಿ ಕಾವೇರಿ ಮಾತೆ ಹಾಗೂ ಕೊಡವ ಯುವತಿಯರ ಅವಹೇಳನ ಮಾಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿದ್ದಾಪುರದ ಯುವಕನೊಬ್ಬನ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಡಲಾರಂಭಿಸಿತ್ತು. ತಕ್ಷಣ ಯುವಕ ನನ್ನು ಕೊಡಗು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ, ಮೊಬೈಲ್ ವಶ ಪಡಿಸಿಕೊಂಡಿದ್ದರು.
ಕಾವೇರಿ ಮತ್ತು ಕೊಡವತಿಯರ ಅವಹೇಳನ ಮುಸ್ಲಿಂ ಯುವಕ ಮಾಡಿದ್ದಾನೆಂದು ಕೊಡವರು, ಬಿಜೆಪಿ, ಸಂಘ- ಪರಿವಾರದ ಮುಖಂಡ ರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಲಾರಂಭಿಸಿದ್ದರು. ರಾಜಕೀಯವಾಗಿ ಹೊಡೆತ ಆಗಬಹುದೆಂಬ ಕಾರಣಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಸೇರಿದ್ದಂತೆ ನೇತಾರರು ಪ್ರಕರಣ ಖಂಡಿಸಿದ್ದರು.
ಜು.೧೮ ರಂದು ವಿರಾಜಪೇಟೆಯಲ್ಲಿ ಪ್ರತಿಭಟನೆ ಮಾಡುವುದಾಗಿ ವಿಶ್ವ ಹಿಂದು ಪರಿಷತ್, ಭಜರಂಗದಳ ಘೋಷಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಗಡಿಪಾರು ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು. ದಿವಿನ್ ದೇವಯ್ಯ ಬಂಧನ ಆಗುತ್ತಿದ್ದಂತೆ ಪ್ರತಿಭಟನೆ ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಅವಹೇಳನ ಮುಸ್ಲಿಮರು ಮಾಡಿರಬಹುದೆಂದು ಮುಸ್ಲಿಮರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಲಾಗಿತ್ತು. ಕೊಡವ ಯುವಕನ ಬಂಧನ ಆಗುತ್ತಿದ್ದಂತೆ ಮುಸ್ಲಿಮರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಾಳಿ ಪ್ರಾರಂಭಿಸಿದ್ದಾರೆ. ಮುಸ್ಲಿಂ- ಕೊಡವ ಸಂಘರ್ಷ ಉಂಟು ಮಾಡುವ ಪ್ರಯತ್ನವಾಗಿತ್ತೆಂಬ ಅನುಮಾನ ವ್ಯಕ್ತ ಪಡಿಸಲಾರಂಭಿಸಿದ್ದಾರೆ.
ಪೊಲೀಸರ ಬಗ್ಗೆ ಮೆಚ್ಚುಗೆ
ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಯುವಕನನ್ನು ಬಂಧಿಸುತ್ತಿದ್ದಂತೆ ಕೊಡಗು ಪೊಲೀಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅತ್ಯಂತ ತಾಳ್ಮೆಯಿಂದ ತಾಂತ್ರಿಕತೆಯ ಸದುಪಯೋಗ ಪಡಿಸಿಕೊಂಡು ಪ್ರಕರಣದಲ್ಲಿ ಶಾಮೀಲಾದ ವ್ಯಕ್ತಿಯನ್ನು ಪತ್ತೆಹಚ್ಚಲು ಸಫಲರಾಗಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಲಾರಂಭಿಸಿದ್ದಾರೆ.
**