

ಮಡಿಕೇರಿ: ಕೊಡವರು ಡೈನಿಂಗ್ ಟೇಬಲ್ನಲ್ಲಿ ಊಟ ಮಾಡುತ್ತಾರೆಂದು ಅವರನ್ನು ಎಸ್ಟಿ ಟ್ಯಾಗ್ (ಪರಿಶಿಷ್ಟ ಪಂಗಡ ಪಟ್ಟಿ) ನಿಂದ ದೂರ ಮಾಡಲು ಸಾಧ್ಯವಾಗುವುದಿಲ್ಲ. ಅದು ಕೊಡವರ ಶಿಸ್ತು ಮತ್ತು ವ್ಯವಸ್ಥಿತ ಜೀವನ ಶೈಲಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹೇಳಿದ್ದಾರೆ.
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಆಶ್ರಯದಲ್ಲಿ ಭಾನುವಾರ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಆರ್ಥಿಕವಾಗಿ ದುರ್ಬಲವಾಗಿದ್ದ ನನ್ನ ಸ್ನೇಹಿತ ಕೊಡವರೊಬ್ಬರ ಮನೆಗೆ ಭೇಟಿ ನೀಡಿದ್ದ ಸಂದರ್ಭ ಡಬ್ಬಗಳನ್ನು ಡೈನಿಂಗ್ ಟೇಬಲ್ ರೀತಿ ಮಾಡಿದ್ದ. ಅದು ಅವರ ಶಿಸ್ತು ಎಂದು ಬಣ್ಣಿಸಿದರು.
ಆರ್ಥಿಕ ನೆಲೆಗಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ನೀಡಲು ಸಾಧ್ಯವಿಲ್ಲ. ಅದರ ಮಾನದಂಡ ಬೇರೆ ಇದೆ. ಬುಢಕಟ್ಟು ಸಂಶೋಧನಾ ಸಂಸ್ಥೆ ಅಧ್ಯಕ್ಷ ಬಸವೇಗೌಡ ಅವರನ್ನು ಶನಿವಾರ ಮೈಸೂರಿನಲ್ಲಿ ಭೇಟಿ ಮಾಡಿದ್ದು, ಸಕಾರತ್ಮಕ ಕ್ರಮಗಳತ್ತ ಗಮನ ಹರಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಕ್ಯಾ.ಚೇತನ್, ಎ.ಕೆ. ಸುಬ್ಬಯ್ಯ ವಿರೋಧ ವ್ಯಕ್ತ ಪಡಿಸಿರುವುದು, ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ಕೊಡಗಿಗೆ ಖುದ್ದು ಭೇಟಿ ನೀಡಿ ಕೊಡವರೊಂದಿಗೆ ಸಮಲೋಚನೆ ನಡೆಸಲು ಹೇಳಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ಮಾಡುವುದರ ಮೂಲಕ ಎಸ್ಟಿ ಟ್ಯಾಗ್ ಹೋರಾಟದ ಮುಂದಿನ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.
ಕೊಡವ ಬುಡಕಟ್ಟು ಕುಲಕ್ಕೆ ಎಸ್ಟಿ ಪಟ್ಟಿ ಸೇರಿದ್ದಂತೆ 5 ಪ್ರಧಾನ ಹಕ್ಕೋತ್ತಾಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ಹೇಳಿದರು. ಕೊಡವರ ಎಸ್ಟಿ ಟ್ಯಾಗ್ ಬೇಡಿಕೆಗೆ ಬುಡಕಟ್ಟು ಕುರುಬ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಕವಳ್ಳಿ ಮಂಜುನಾಥ್, ವಿರಾಟ್್ ಹಿಂದೂ ಸ್ಥಾನ್್ ಸಂಗಮ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಂಬಲ ವ್ಯಕ್ತ ಪಡಿಸಿದರು.