

ಅಜ್ಜಮಾಡ ರಮೇಶ್ ಕುಟ್ಟಪ್ಪ ತಲಕಾವೇರಿ
ಜೀವನದಿ ಕಾವೇರಿ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ರಾತ್ರಿ ೭.೨೧ ಗಂಟೆಗೆ ಭಕ್ತರ ನಂಬಿಕೆಯ ಪವಿತ್ರ ಕಾವೇರಿ ತೀರ್ಥೋದ್ಭವವಾಯಿತು. ಸಹಸ್ರಾರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜಯಘೋಷ ನಡುವೆ ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿತು.
ಕುಲದೇವಿಯಾಗಿ ಆರಾಂಧಿಸುವ ಕೊಡವ ಭಕ್ತರಿಂದ ಉಕ್ಕಿ ಬಾ ಕಾವೇರಮ್ಮೆ, ಪೊಲಂಜಿ ಬಾ ಕಾವೇರಮ್ಮೆ ಘೋಷಣೆ ಮೊಳಗಿತು.
ತಲಕಾವೇರಿ ಕ್ಷೇತ್ರದ ಅರ್ಚಕರಾದ ಪ್ರಶಾಂತ್ ಆಚಾರ್, ಗುರುರಾಜ್ ಆಚಾರ್ ನೇತೃತ್ವದಲ್ಲಿ ೮ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿ ದರು. ಸಂಜೆ ೫.೩೦ ಗಂಟೆಗೆ ಅರ್ಚಕರ ತಂಡ ಬ್ರಹ್ಮಕುಂಡಿಕೆ ಸನ್ನಿಹ ಆಗಮಿಸಿದರು. ಮಹಾಸಂಕಲ್ಪ ಮಾಡುವುದರ ಮೂಲಕ ಪೂಜಾ ವಿಧಿ ವಿಧಾನ ಪ್ರಾರಂಭಿಸಿದರು.
ಸಹಸ್ರನಾಮ ಅರ್ಚನೆ, ಮಹಾಪೂಜೆ ನೆರವೇರಿದ ಬಳಿಕ ತಾಯಿ ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ತೀರ್ಥೋದ್ಭವ ಆಗುತ್ತಿದ್ದಂತೆ ಭಕ್ತರ ಮೇಲೆ ಅರ್ಚಕರು ತೀರ್ಥಪ್ರೋಕ್ಷಣೆ ಮಾಡಿದರು. ಈ ವೇಳೆ ಕಾವೇರಿಯನ್ನು ಆರಾಧಿಸುವ ಭಕ್ತರು ಪುಳಕಿತಗೊಂಡರು.
ಭಗಂಡೇಶ್ವರ ಕ್ಷೇತ್ರದ ತಕ್ಕಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ ನೇತೃತ್ವದಲ್ಲಿ ಭಾಗಮಂಡಲದಿಂದ ಗುಂಡು ಸರ (ಚಿನ್ನದ ಮಾಲೆ), ಭಂಡಾರ ಪೆಟ್ಟಿಗೆ ವಾಹನದಲ್ಲಿ ತರಲಾಯಿತು. ತೀರ್ಥೋದ್ಭವಕ್ಕೆ ೧೫ ನಿಮಿಷ ಮುಂಚೆ ಗುಂಡು ಸರವನ್ನು ಕಾವೇರಿ ತಾಯಿಗೆ ಧರಿಸಲಾಯಿತು. ಬೆಳ್ಳಿ ಕೊಡದಲ್ಲಿ ಕಾವೇರಿ ತೀರ್ಥ ತೆಗೆದುಕೊಂಡು ಹೋಗಿ ಭಗಂಡೇಶ್ವರನಿಗೆ ಅಭಿಷೇಕ ಮಾಡಲಾಯಿತು.
ಸೋಮವಾರ ಮುಂಜಾನೆ ೬ ಗಂಟೆಯಿಂದಲ್ಲೇ ಕ್ಷೇತ್ರಕ್ಕೆ ಭಕ್ತರು ಬರಲಾರಂಭಿಸಿದರು. ಮಧ್ಯಾಹ್ನ ಹೊತ್ತಿನಲ್ಲಿ ಮಳೆಯೂ ಸುರಿಯಿತು. ಕೋವಿಡ್ ನಿಬರ್ಂಧ ತೆಗೆದು ಹಾಕಿದ ಬಳಿಕ ತೀರ್ಥೋದ್ಭವ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆಂದು ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ ಹೇಳಿದ್ದಾರೆ.
ವಿದ್ಯುತ್ ದೀಪಾಲಂಕಾರ
ತಲಕಾವೇರಿ, ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಭಾಗಮಂಡಲ- ತಲಕಾವೇರಿ ಮಾರ್ಗ ದಲ್ಲಿಯೂ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿತ್ತು. ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ವಿಶೇಷ ರೀತಿ ಮಡಿಕೇರಿಯ ಕುಮಾರ್ ನೇತೃತ್ವ ದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.
೨ ಬೃಹತ್ ಪರದೆ
ಬ್ರಹ್ಮಕುಂಡಿಕೆಯಲ್ಲಿನ ತೀರ್ಥೋದ್ಭವ ಹಾಗೂ ಪೂಜಾ ಕೈಂಕರ್ಯ ವೀಕ್ಷಿಸಲು ತಲಕಾವೇರಿ ಕ್ಷೇತ್ರದಲ್ಲಿ ಎರಡು ಬೃಹತ್ ಎಲ್‌ಇಡಿ ಪರದೆ ಹಾಕಲಾಗಿತ್ತು. ತಲಕಾವೇರಿ ಪ್ರವೇಶ ದ್ವಾರ ಹಾಗೂ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ಮೆಟ್ಟಿಲು ಸಮೀಪ ಹಾಕಲಾಗಿದ್ದ ಪರದೆಯಲ್ಲಿ ಬ್ರಹ್ಮಕುಂಡಿಕೆಯಲ್ಲಿ ನಡೆಯುತ್ತಿದ್ದ ಪೂಜಾ ಪ್ರಕ್ರಿಯೆಯನ್ನು ಭಕ್ತರು ವೀಕ್ಷಿಸಿದರು. ಕೂರ್ಗ್ ಮೌಂಟ್ ಸಿನಿ ಕ್ರಿಯೇಷನ್‌ನ ಚೀಯಂಡಿ ತೇಜಸ್ ಪಾಪಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ ನೇತೃತ್ವದಲ್ಲಿ ಎಲ್‌ಇಡಿ ಪರದೆ ಹಾಕಲಾಗಿತ್ತು.
ಬಿಗಿ ಬಂದೋಬಸ್ತ್
ಸಹಸ್ರಾರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಅಪಾಯವಾಗದ್ದಂತೆ ಮುನ್ನೆಚ್ಚರಿಕೆ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು. ಮೂವರು ಡಿವೈಎಸ್ಪಿ, ಏಳು ಸರ್ಕಲ್ ಇನ್ಸ್‌ಪೆಕ್ಟರ್, ೧೭ ಸಬ್ ಇನ್ಸ್‌ಪೆಕ್ಟರ್, ೩೦೦ ಪೊಲೀಸರು, ೧೦೦ ಮೀಸಲು ಪೊಲೀಸ್ ಸಶಸ್ತ್ರ ಪಡೆಯವರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಿವಿಧೆಡೆಯಲ್ಲಿ ಸಿಸಿ ಕ್ಯಾಮರಾದಲ್ಲಿ ಆಗುತ್ತಿದ್ದ ಚಿತ್ರೀಕರಣ ಕಾಣುವಂತೆ ತಲಕಾವೇರಿ ಯಲ್ಲಿ ಪ್ರದರ್ಶನ ಮಾಡಲಾಗಿತ್ತು.
ಭಕ್ತಿಗೀತೆ, ಜಾನಪದ ಗೀತೆ ಗಾಯನ
ತಲಕಾವೇರಿ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಉಸ್ತುವಾರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ಕಾವೇರಮ್ಮ ಕುರಿತ ಭಕ್ತಿಗೀತೆ ಸೇರಿದ್ದಂತೆ ಕನ್ನಡ ನಾಡುನುಡಿ, ಸಂಸ್ಕೃತಿ ಬಿಂಬಿಸುವ ಕನ್ನಡ ಗೀತೆಗಳ ಗಾಯನ ಹಾಗೂ ಭಕ್ತಿ ಪ್ರದಾನ ಜಾನಪದ ಗೀತೆ ಗಾಯನ ಕೊಡಗಿನ ಉದಯೋನ್ಮುಖ ಕಲಾವಿದರಿಂದ ನಡೆಯಿತು.
ಕುಲದೇವಿ ಕಾವೇರಿ ಮಾತೆ, ಬಾರಿ ನೋಟನ ಮಾಗುರು ಪೊನ್ನಿಗ್ಗುತ್ತಪ್ಪನ, ಕೊಡಗರ್ ಮೈಮೆನ, ಎಲ್ಲಿ ಭೂರಮೆ ಕೊಡವ ಹಾಡುಗಳನ್ನು ಪ್ರಖ್ಯಾತ ಗಾಯಕ ಚೆಕ್ಕೇರ ಪಂಚಮ್ ಬೋಪಣ್ಣ ಹಾಡಿದರು. ಪಚ್ಚೆ ಸೀರೆ ಉಟ್ಟು ನಿತ್ತೋಳೋ, ಮಣ್ಣಿನ ಮಕ್ಕ ನಾವೆಲ್ಲಾ, ಶರಣೆನ್ನುತೆ ಕೈ ಮುಗ್ದನೇ, ತಾಯಿ ಕಾವೇರಮ್ಮ… ಅರೆಭಾಷೆ ಹಾಡುಗಳನ್ನು ತೆಕ್ಕಡೆ ಕೀರ್ತಿ ಚಂದ್ರಶೇಖರ್ ಹಾಡಿದರು.
ಮಹಾಪ್ರಣಾಮ್ ದೀಪಮ್, ಕನ್ನಡ ನಾಡಿನ ಜೀವನದಿ ಕಾವೇರಿ, ಎಲ್ಲೋ ಹುಡುಕಿದೆ ಇಲ್ಲದೆ ದೇವರ, ಎಲ್ಲೆಲ್ಲೂ ಸಂಗೀತವೇ… ಕನ್ನಡ ಹಾಡುಗಳನ್ನು ಗೋಣಿಕೊಪ್ಪದ ಗಾಯಕ ಅನ್ವಿತ್ ಕುಮಾರ್ ಹಾಡಿದರು. ದೀಪವು ನಿನ್ನದೇ, ನೀ ಸಿಗದೇ ಬಾಳೊಂದು, ಜನುಮ ನೀಡು ತ್ತಾಳೆ… ಕನ್ನಡ ಹಾಡುಗಳನ್ನು ನಾಪೋಕ್ಲುವಿನ ರಕ್ಷಾ ಪ್ರಭಾಕರ್ ಹಾಡಿದರು.
ಶ್ರೀಕಂಠ ವಿಷ ಕಂಠ, ಕಲ್ಲಾದರೆ ನಾನು ಕನ್ನಡ ಮಣ್ಣಲಿ, ಕರುನಾಡ ತಾಯಿ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು… ಕನ್ನಡ ಗೀತೆಗಳನ್ನು ವಿರಾಜಪೇಟೆಯ ಗಾಯಕ ಟಿ.ಡಿ. ಮೋಹನ್ ಹಾಡಿದರು. ಆನಂದ ಪರಮಾನಂದ, ಕಾನನವಾಸ, ದಾಸನಾಗು ವಿಶೇಷನಾಗು, ಪವಮಾನ… ಕನ್ನಡ ಗೀತೆಗಳನ್ನು ಅಮೃತ್ ರಾಜ್- ಅನಿತ್ ರಾಜ್ ಸಹೋದರರು ಹಾಡಿದರು.
ದೇವಾ ಮಹಾದೇವ, ಕೇಳಿಸದೆ ಕಲ್ಲು ಕಲ್ಲಿನಲ್ಲಿ, ದೇವರ ಆಟ, ಕನ್ನಡ ಹೊನ್ನುಡಿ ದೇವಿಯನು… ಕನ್ನಡ ಹಾಡುಗಳನ್ನು ಸೆಲೊಮಿ ಶೀಲಾ, ಪ್ರತಿಮಾ ಹರೀಶ್ ರೈ ಹಾಡಿದರು.
ಪಿಂಡ ಪ್ರದಾನ
ಸೋಮವಾರ ಭಾಗಮಂಡಲದಲ್ಲಿ ಭಕ್ತರು ಕೇಶ ಮುಂಡನೆ ಮಾಡಿದ ಬಳಿಕ ತ್ರಿವೇಣಿ ಸಂಗಮ ಬದಿಯಲ್ಲಿ ಪಿಂಡ ಪ್ರದಾನ ನೆರವೇರಿಸಿ ದರು. ಪಿಂಡ ಪ್ರದಾನ ಮಾಡಿದ ಬಳಿಕ ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿ, ಭಗಂಡೇಶ್ವರ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದರು. ತದನಂತರ ಕಾವೇರಿ ತೀರ್ಥೋದ್ಭವ ಕ್ಷಣದಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಇರಲು ತೆರಳಿದರು.
೨೭ನೇ ವರ್ಷದ ಅನ್ನದಾನ
ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದಿಂದ ೨೭ನೇ ವರ್ಷದ ಅನ್ನದಾನ ಏರ್ಪಡಿಸಲಾಗಿದೆ. ಸೋಮವಾರ ಮಧ್ಯಾಹ್ನದಿಂದ ಭಕ್ತ ರಿಗೆ ಅನ್ನದಾನ ಪ್ರಾರಂಭಿಸಿದ್ದು, ನವೆಂಬರ್ ೨೭ ರವರೆಗೆ ಒಂದು ತಿಂಗಳು ಅನ್ನದಾನ ಇರುತ್ತದೆ. ಮಧ್ಯಾಹ್ನ ಅನ್ನ, ಸಾಂಬಾರು, ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ತೀರ್ಥೋದ್ಭವ ಹಿನ್ನೆಲೆಯಲ್ಲಿ ೭ ರಿಂದ ೭.೩೦ ರವರೆಗೆ ವಿರಾಮ ನೀಡಲಾಗಿತ್ತು. ರಾತ್ರಿ ೭.೩೦ ರಿಂದ ಮತ್ತೆ ಅನ್ನದಾನ ಪ್ರಾರಂಭವಾಯಿತು.
ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ, ಮಂಡೇಪಂಡ ಸುಗುಣ ಮುತ್ತಣ್ಣ, ತೇಲಪಂಡ ಪ್ರಮೋದ್ ಸೋಮಯ್ಯ, ಬಿದ್ದಾಟಂಡ ಎಸ್. ತಮ್ಮಯ್ಯ ಮತ್ತಿತರರ ಉಸ್ತುವಾರಿಯಲ್ಲಿ ಭಕ್ತರಿಗೆ ವ್ಯವಸ್ಥಿತವಾಗಿ ಅನ್ನದಾನ ಮಾಡಲಾಯಿತು.