ಕವನ್, ವಿನಯ್ ಗಡಿಪಾರಿಗೆ ಎಸ್ಪಿ ಶಿಫಾರಸ್ಸು

Kavan kaverappa - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಮಡಿಕೇರಿ ನಗರ ಬಿಜೆಪಿ ಉಪಾಧ್ಯಕ್ಷರಾಗಿರುವ ನಗರಸಭೆ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಹಾಗೂ ಭಜರಂಗದಳ ಮುಖಂಡ ವಿನಯ್‌ಕುಮಾರ್ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಈ ಬಗ್ಗೆ ಫೆ.೨ ರಂದು ಎಸಿ ಕೋಟರ್‌ಗೆ ಖುದ್ದು ಆಗಮಿಸಿ ವಿವರಣೆ ನೀಡುವಂತೆ ಉಪವಿಭಾಗಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.

ಮಳೆಯಿಂದ ಹಾನಿಗೀಡಾದ ಸ್ಥಳಗಳ ಪರಿಶೀಲನೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಆಗಮಿಸಿದ್ದ ಸಂದರ್ಭ ಬಿಜೆಪಿ, ಸಂಘ ಪರಿವಾರದ ನೇತೃತ್ವದಲ್ಲಿ ವಿವಿಧೆಡೆಯಲ್ಲಿ ಪ್ರತಿಭಟನೆ ನಡೆದಿತ್ತು. ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಎ.ಎಸ್. ಪ್ರಕಾಶ್ ಆಚಾರ್ಯ ನೀಡಿದ ದೂರಿನನ್ವಯ ಕವನ್ ಕಾವೇರಪ್ಪ ಸೇರಿದ್ದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಕವನ್ ಕಾವೇರಪ್ಪ, ವಿನಯ್‌ಕುಮಾರ್ ಅವರಿಬ್ಬರನ್ನು ಕೊಡಗು ಜಿಲ್ಲೆಯ ಸರಹದ್ದಿನಿಂದ ಗಡಿಪಾರು ಮಾಡಲು ಎಸ್ಪಿ ಶಿಫಾರಸ್ಸು ಮಾಡಿದ್ದಾರೆ.

ನಿಮ್ಮನ್ನು ಜಿಲ್ಲೆಯ ಸರಹದಿಂದ ಏಕೆ ಗಡಿಪಾರು ಮಾಡಬಾರದು ಎಂಬ ಬಗ್ಗೆ ನಿಮ್ಮ ಹೇಳಿಕೆ ಏನಾದರೂ ಇದ್ದಲ್ಲಿ ಫೆ.೨ ರಂದು ಬೆಳಗ್ಗೆ ೧೧ ಗಂಟೆಗೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು. ತಪ್ಪಿದ್ದಲ್ಲಿ ನಿಮ್ಮ ಹೇಳಿಕೆ ಏನು ಇಲ್ಲವೆಂದು ಪರಿಗಣಿಸಿ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ರ ಸೆಕ್ಷನ್ ೫೫ ರಂತೆ ಕ್ರಮ ಜರುಗಿಸಲಾಗು ವುದೆಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್ ೧೬ ರಂದು ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಎಂ.ಎ. ಅಯ್ಯಪ್ಪ ಜಿಲ್ಲಾಧಿಕಾರಿಗೆ ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಿ ದ್ದರು. ಈ ಬಗ್ಗೆ ಕಾನೂನಿನ್ವಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಜನವರಿ ೨೦ ರಂದು ಉಪವಿಭಾಗಾಧಿಕಾರಿ ಗೆ ಲಿಖಿತವಾಗಿ ಸೂಚನೆ ನೀಡಿದ್ದರು. ಜನವರಿ ೨೫ ರಂದು ಉಪವಿಭಾಗಾಧಿಕಾರಿ ವಿವರಣೆ ಕೇಳಿ ನೋಟೀಸ್ ಜಾರಿ ಮಾಡಿದ್ದರು.

ಕವನ್ ಕಾವೇರಪ್ಪ

ಮಡಿಕೇರಿ ನಗರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಈ ಪೈಕಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಈತನ ಹೆಸರಿನಲ್ಲಿ ರೌಡಿ ಹಾಳೆ ತೆರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ನೋಟೀಸ್‌ನಲ್ಲಿ ಉಲ್ಲೇಖಿಸ ಲಾಗಿದೆ.

ಸಣ್ಣ ಪುಟ್ಟ ವಿಚಾರಕ್ಕೆ ಮಡಿಕೇರಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಾ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತಿಯಿಂದ ಇರುವಂತಾಗಿದೆ. ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಈತನ ಚಲನವಲನದ ಮೇಲೆ ನಿಗಾ ಇಡುವ ಸಲುವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೨೦೧೬ನೇ ಸಾಲಿನಲ್ಲಿ ರೌಡಿ ಹಾಳೆ ತೆರೆಯಲಾಗಿದೆ.

ಕವನ್ ಕಾವೇರಪ್ಪ ವಿರುದ್ಧ ಐಪಿಸಿ ಕಲಂ ವಿಧಿ ೫೦೬, ೧೨೦ (ಬಿ), ೩೩೯, ೩೪೧, ೩೪೦, ೧೪೧, ೩೫೫, ೧೪೬, ೧೪೭, ೧೫೧, ೧೪೯ ರಂತೆ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿದೆ. ಈತನು ನಿರಂತರವಾಗಿ ಅಪರಾಧ ಕೃತ್ಯ ಮುಂದುವರೆಸುತ್ತಾ ಸಾರ್ವಜನಿಕ ಶಾಂತಿ ಭಂಗ ವನ್ನುಂಟು ಮಾಡುತ್ತಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಡಕು ಮಾಡುತ್ತಿರುವ ಪ್ರವೃತ್ತಿವುಳ್ಳವನಾಗಿದ್ದಾನೆಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿನಯ್‌ಕುಮಾರ್

ಭಜರಂಗದಳ ಮುಖಂಡ ವಿನಯ್‌ಕುಮಾರ್ ವಿರುದ್ಧ ೫ ಪ್ರಕರಣ ದಾಖಲಾಗಿದ್ದು, ಈ ಪೈಕಿ ೩ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ೨ ಪ್ರಕರಣ ವಿಚಾರಣೆ ಹಂತದಲ್ಲಿದೆ. ಮಡಿಕೇರಿ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂಪರ ಸಂಘಟನೆಯಾದ ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದು, ಮಡಿಕೇರಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಿ, ದೊಡ್ಡ ಗಲಾಟೆಯನ್ನೇ ಸೃಷ್ಟಿಸುತ್ತಿದ್ದಾರೆ. ಹಿಂದೂ ಜನಾಂಗ ದವರಲ್ಲಿ ಮುಸ್ಲಿಂ ಜನಾಂಗದ ಕುರಿತು ದ್ವೇಷ ಭಾವನೆ ಮೂಡುವಂತೆ ಪ್ರಚೋದಿಸುತ್ತಾ ಶಾಂತಿ- ಸುವ್ಯವಸ್ಥೆ ಕದಡುವ ಪ್ರಕೃತ್ತಿಯನಾಗಿ ರುತ್ತಾನೆಂದು ಉಲ್ಲೇಖಿಸಲಾಗಿದೆ.

ಈತನ ವಿರುದ್ಧ ೨೦೧೭ನೇ ಸಾಲಿನಲ್ಲಿ ಕಮ್ಯೂನಲ್ ಗೂಂಡಾ ಹಾಳೆ ತೆರೆಯಲಾಗಿದೆ. ಐಪಿಸಿ ಕಲಂ ೩೪೧, ೧೪೧, ೧೪೩, ರೆ/ವಿ ೧೪೯, ೧೪೯, ೩೪೧, ೩೨೩, ೫೦೬, ೩೫೪ ರಂತೆ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಿಂದ ಗಡಿಪಾರು ಮಾಡಲು ಪೊಲೀಸ್ ವರಿಷ್ಠಾಧಿಕಾರಿ ಶಿಫಾರಸ್ಸು ಮಾಡಿದ್ದಾರೆ.

ಹಿಂದು ಜಾಗರಣ ವೇದಿಕೆ ಅಸಮಾಧಾನ

ಹಿಂದು ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್ಕುಮಾರ್ ಹಾಗೂ ಮಡಿಕೇರಿ ನಗರಸಭೆ ಸದಸ್ಯ ಕವನ್ ಕಾವೇರಪ್ಪ ಅವರನ್ನು ಗಡಿಪಾರಿಗೆ ಶಿಫಾರಸ್ಸು ಮಾಡಿರುವುದಕ್ಕೆ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಅಸಮಾಧಾನ ವ್ಯಕ್ತ ಪಡಿಸಿ ದ್ದಾರೆ.

ಜಿಲ್ಲೆಯಲ್ಲಿ ಹಲವಾರು ಮತಾಂಧರು, ಹಿಂದು ಸಾಮಾಜಿಕ ಸಂಘಟನೆಗಳ ಮುಖಂಡರನ್ನು ಕೊಂದ ಮತ್ತು ಕೊಲೆ ಯತ್ನ ನಡೆಸಿದ, ದೇಶದ್ರೋಹಿ ಕೃತ್ಯ ನಡೆಸಿದ, ಹಿಂದುಗಳ ಮೇಲೆ ಬಾಂಬ್ ಹಾಕಲು ಯತ್ನಿಸಿದವರು, ಗೋಕಳ್ಳರು, ಗೋಮಾಂಸ ಮಾರಾಟಗಾರರು, ಮಾದಕ ವಸ್ತುಗಳ ಸರಬರಾಜು, ಮಾಡುವವರು ಸೇರಿದ್ದಂತೆ ಹತ್ತಾರು ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ನಟೋರಿಯಸ್ ಕ್ರಿಮಿನಲ್ಗಳು ಜಿಲ್ಲೆಯಲ್ಲಿದ್ದಾರೆ. ಅಂತವರನ್ನು ಬಿಟ್ಟು ಹಿಂದು ಸಾಮಾಜಿಕ ಕಾರ್ಯಕರ್ತರನ್ನೇ ಟಾರ್ಗೇಟ್ ಮಾಡಿ ಗಡಿಪಾರು ಹೆಸರಿನಲ್ಲಿ ಬೆದರಿಸುವ, ಮಾನಸಿಕವಾಗಿ ಕುಗ್ಗಿಸುವ, ಕಾನೂನಿನ ದುರ್ಬಳಕೆಯೊಂದಿಗೆ ಹೆಣೆಯಲು ಯತ್ನಿಸುವ ಇಂತಹ ಯಾವುದೇ ಪ್ರಯತ್ನಗಳನ್ನು ಹಿಂದು ಜಾಗರಣ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದುಪರ ಕಾರ್ಯಕರ್ತರುಗಳ ಸುರಕ್ಷತೆಗೆ ಹಿಂದು ಜಾಗರಣ ವೇದಿಕೆ ಕಟಿಬದ್ಧವಾಗಿದೆ. ಸಾಮಾಜಿಕ ಕಾರ್ಯಕರ್ತರನ್ನು ಗಡಿಪಾರು ಮಾಡಲೆತ್ನಿಸುವ ಷಡ್ಯಂತರದ ವಿರುದ್ಧ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ತೀವ್ರ ತರಹದ ಹೋರಾಟ ನಡೆಸಿ, ತೊಂದರೆ ಗೊಳಗಾದ ಹಿಂದು ಸಾಮಾಜಿಕ ಕಾರ್ಯಕರ್ತರಿಗೆ ನ್ಯಾಯ ದೊರಕಿಸುವುದಾಗಿ ಕುಕ್ಕೇರ ಅಜಿತ್ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net