ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಸೆರೆ

28mdkd4 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಕರಡಿಗೋಡು ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ. ಕಳೆದರಡು ದಿನದಿಂದ ನಡೆಯುತ್ತಿದ್ದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಕೆಲ ವರ್ಷಗಳ ಹಿಂದೆ ಕಾಫಿ ಬೆಳೆಗಾರ ಮೋಹನ್ ದಾಸ್ ಅವರನ್ನು ಬಲಿತೆಗೆದುಕೊಂಡಿದ್ದ ಕಾಡಾನೆ, ಕೆಲವು ತಿಂಗಳುಗಳಿಂದ ಮತ್ತೆ ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದರಿಂದ ಕಾರ್ಮಿಕರು ಹಾಗೂ ಬೆಳಗಾರರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕಾಡಾನೆ ಸೆರೆಗೆ ಗ್ರಾಮಸ್ಥರ ಒತ್ತಾಯ ಹೆಚ್ಚಾಗಿತ್ತು.

ಕಾಡಾನೆ ಸೆರೆಗೆ ಸರ್ಕಾರ ಅನುಮತಿ ನೀಡಿದ್ದರಿಂದ ೫ ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಕರಡಿಗೋಡು ಚಿಕ್ಕನಳ್ಳಿ ಕಾಫಿ ತೋಟದಲ್ಲಿ ಸಲಗ ಪತ್ತೆ ಮಾಡಿ, ಅಂದಾಜು ೨೨ ವರ್ಷ ಪ್ರಾಯದ ಗಂಡಾನೆಗೆ ಅರವಳಿಕೆ ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಕಾನೆಗಳ ಸಹಕಾರದೊಂದಿಗೆ ಸೆರೆ ಹಿಡಿದ ಕಾಡಾನೆಯನ್ನು ಲಾರಿಗೆ ಹತ್ತಿಸಲಾಯಿತು. ಈ ಸಂದರ್ಭ ಲಾರಿಯೊಳಗೆ ರಂಪಾಟ ನಡೆಸಿದ ಕಾಡಾನೆ ಲಾರಿಗೆ ಗುದ್ದಾಡಿದ ಪರಿಣಾಮ ಕಾಡಾನೆಯ ಕೊಂಬು ಮುರಿಯಿತು. ಕಾರ್ಯಾಚರಣೆ ವೇಳೆ ಕಾಫಿ ತೋಟದಲ್ಲಿ ಹತ್ತಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿತ್ತು.

ಕರಡಿಗೋಡು ಭಾಗದಲ್ಲಿ ಮನೆಗಳ ಪಕ್ಕದಲ್ಲಿ ನಿರಂತರವಾಗಿ ಉಪಟಳ ನೀಡುತ್ತಿದ್ದ ಹಾಗೂ ಕಾವಲುಗಾರನೊಬ್ಬನ ಮೇಲೆ ದಾಳಿ ಮಾಡಿದ್ದ ಕಾಡಾನೆ ಪತ್ತೆ ಹಚ್ಚಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ. ಕಾಡಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗುವುದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆಳೆಗಾರರೊಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯೆಂದು ಹೇಳಲಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂಕರ‌್ಷಣಾಧಿಕಾರಿಗಳಾದ ಚಕ್ರಪಾಣಿ, ಎ.ಎಸ್. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಳ್ಳೀರ ದೇವಯ್ಯ, ಸಹಾಯಕ ವಲಯ ಅರಣ್ಯ ಸಂಕರ‌್ಷಣಾಧಿಕಾರಿ ಸಂಜೀತ್ ಸೋಮಯ್ಯ, ಪಶುವೈದ್ಯಾಧಿಕಾರಿಗಳಾಧ ಡಾ. ಚಿಟ್ಟಿಯಪ್ಪ, ಡಾ. ರಮೇಶ್ ಪಾಲ್ಗೊಂಡಿದ್ದರು.

ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ, ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮಾ ಮತ್ತು ಆರ್‌ಆರ್‌ಟಿ ತಂಡದ ಜೊತೆಗೆ ೭೦ ಕ್ಕೂ ಹೆಚ್ಚು ಜನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೆಲವು ವರ್ಷಗಳ ಹಿಂದೆ ಬೆಳೆಗಾರರೊಬ್ಬರನ್ನು ಬಲಿ ತೆಗೆದುಕೊಂಡ ಬಳಿಕ ಕರಡಿಗೋಡು ಭಾಗದ ಕಾಫಿ ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ನಾಶ ಮಾಡುವುದರ ಜೊತೆಗೆ ಉಪಟಳ ನೀಡುತ್ತಿದ್ದ ಬೃಹತ್ ಗಾತ್ರದ ಕಾಡಾನೆ ಸೆರೆ ಹಿಡಿಯುವ ಬದಲು ಅರಣ್ಯ ಇಲಾಖೆ ಕುಳ್ಳಾನೆಯೊಂದನ್ನು ಸೆರೆ ಹಿಡಿದಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net