ಕನ್ನಡದ ಬಗ್ಗೆ ಕನ್ನಡಿಗರಿಗೆ ಕೀಳರಿಮೆ ಬೇಡ

1mdkn4 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕನ್ನಡದ ಬಗ್ಗೆ ಕನ್ನಡಿಗರಿಗೆ ಹಿಂಜರಿಕೆ- ಕೀಳರಿಮೆ ಬೇಡ. ಕನ್ನಡದಲ್ಲಿಯೇ ಮಾತನಾಡುವ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಕರೆ ನೀಡಿದರು.

ಕೊಡಗು ಜಿಲ್ಲಾಡಳಿತದಿಂದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವದಲ್ಲಿ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಗೈರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ನವೆಂಬರ್ ೧ ಕನ್ನಡಿಗರು ಹೆಮ್ಮೆ ಪಡುವ ದಿನ. ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ತಾಯಿ ಭುವನೇಶ್ವರಿ ದೇವಿ ಸಂತಸ ಕರುಣಿಸಲಿ ಎಂದು ಹಾರೈಸಿದರು.

ಸ್ವಾತಂತ್ರೃ ಪೂರ್ವದಲ್ಲಿ ವಿವಿಧ ಕಾರಣಗಳಿಂದ ಹರಿದು ಹಂಚಿ ಹೋಗಿದ್ದ ಪ್ರದೇಶಗಳನ್ನು ಭಾಷಾವಾರು ಪುನರ್ ವಿಂಗಡಣೆ ಆಧಾರದ ಮೇಲೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ೧೯೫೬ನೇ ಇಸವಿ ನವೆಂಬರ್ ೧ ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ವಿವಿಧ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡಿಗರು ಇರುವ ಪ್ರದೇಶ ಒಟ್ಟುಗೂಡಿಸುವಲ್ಲಿ ಇದು ಯಶಸ್ವಿಯೂ ಆಯಿತು.

ಕನ್ನಡ ನಾಡು- ನುಡಿಗೆ ೨ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ೨ ಸಾವಿರ ವರ್ಷಹಿಂದೆಯೇ ಕನ್ನಡ ಮಾತನಾಡುವ ಜನ ಇದ್ದರು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಕ್ರಿ.ಶ. ೪೫೦ ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದ ಗಳಿವೆ. ಕ್ರಿ.ಶ. ೮೫೦ ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ.

೨೧ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ. ಆದ್ದರಿಂದ ಪ್ರಾದೇಶಿಕ ಸಂಸ್ಕೃತಿ ಎತ್ತಿಹಿಡಿಯುವ ಕಾರ್ಯ ನಾವು ಮಾಡ ಬೇಕೆಂದರು.

ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟ ವಿದೆ. ಸಹಸ್ರಾರು ಜನ ಕನ್ನಡಿಡಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಅಂತಹ ಎಲ್ಲಾ ಮಹಾನ್ ಚೇತನರನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುವುದಾಗಿ ಹೇಳಿದರು.

ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯ ವಾಗಿದೆ. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವವಾಗಬೇಕೆಂದರು. ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಮುಂತಾದ ಕವಿಗಳು ಕನ್ನಡ ಭಾಷಾ ದೀವಿಗೆಯನ್ನು ಆಗಸದೆತ್ತರಕ್ಕೆ ಬೆಳೆಗಿಸಿದ್ದಾರೆ. ಪುರಂದರದಾಸ, ಕನ್ನಕದಾಸರ ಭಕ್ತಿಪಂಥ ಮತ್ತು ಕೀರ್ತನೆಗಳ ಮೂಲಕ ಹಾಗೂ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಅದ್ಭುತವಾದ ಸಾಮಾಜಿಕ ಕ್ರಾಂತಿ ಮಾಡಿ ಕನ್ನಡ ನಾಡು- ನುಡಿಯನ್ನು ಶ್ರೀಮಂತ ಗೊಳಿಸಿದ್ದಾರೆ.

ಸಾಹಿತ್ಯ, ಸಂಸ್ಕೃತಿ, ಸಂಗೀತ, ಸದಾಭಿರುಚಿ, ಸಂಪ್ರದಾಯ, ಸಂಸ್ಕಾರ ಯಾವುದೇ ಕ್ಷೇತ್ರದಲ್ಲೂ ಕನ್ನಡಿಗರು ಕಡಿಮೆಯಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ಕನ್ನಡ ನಾಡು- ನುಡಿ, ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯ ಕ್ರಮ ಜಾರಿಗೊಳಿಸಿದೆ. ಕಳೆದ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾತಾಡ್ ಮಾತಾಡು ಕನ್ನಡ, ಈ ವರ್ಷ ಕೋಟಿ ಕಂಠ ಗಾಯನ ಮೂಲಕ ಕನ್ನಡ ನಾಡಿನಾದ್ಯಂತ ಸಹಸ್ರಾರು ಜನರು ಪಾಲ್ಗೊಂಡು ಕನ್ನಡತನ ಮೆರೆದಿದ್ದಾರೆ.

ಯುವಜನರು ಕನ್ನಡ ನಾಡು- ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು.

ವೇದಿಕೆಯಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್ಪಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಸಿಇಒ ಡಾ.ಎಸ್. ಆಕಾಶ್, ಎಡಿಸಿ ಡಾ.ನಂಜುಂಡೇ ಗೌಡ, ಎಸಿ ಯತೀಶ್ ಉಲ್ಲಾಳ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಮತ್ತಿತರರು ಇದ್ದರು. ಶಿಕ್ಷಕರಾದ ಚೋಕೀರ ಅನಿತಾ, ಉ.ರಾ. ನಾಗೇಶ್ ನಿರೂಪಿಸಿದರು. ಲಹರಿ ತಂಡದವರು ನಾಡ ಗೀತೆ, ರೈತ ಗೀತೆ ಹಾಡಿದರು.

ನೃತ್ಯ ಸಂಭ್ರಮ
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಸಂತ ಜೋಸೆಫರ ಪ್ರೌಢಶಾಲೆ, ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆ, ಕ್ರೆಸೆಂಟ್ ಶಾಲೆ, ಸಂತ ಮೈಕಲರ ಶಾಲೆ ವಿದ್ಯಾರ್ಥಿಗಳು ಆಕರ್ಷಕ ಸಮೂಹ ನೃತ್ಯ ಪ್ರದರ್ಶಿಸುವುದರ ಮೂಲಕ ಗಮನ ಸೆಳೆದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ವಿದ್ಯಾರ್ಥಿಗಳು ವಾದ್ಯ ಪ್ರಸ್ತುತಿ ಪಡಿಸಿದರು.

ಪಥಸಂಚಲನ
ಜಿಲ್ಲಾ ಸಶಸ್ತ್ರ ಪಡೆ ಇನ್ಸ್‌ಪೆಕ್ಟರ್ ಚನ್ನನಾಯಕ್ ನೇತೃತ್ವದಲ್ಲಿ ಪೊಲೀಸ್, ಅರಣ್ಯ ಹಾಗೂ ವಿದ್ಯಾರ್ಥಿಗಳ ೧೮ ತಂಡದಿಂದ ಪಥ ಸಂಚಲನ ನಡೆಯಿತು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸೇವಾದಳ ಪ್ರಥಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸೇವಾ ದಳ ದ್ವಿತೀಯ ಹಾಗೂ ಸಂತ ಮೈಕಲರ ಕನ್ನಡ ಮಾಧ್ಯಮ ಪ್ರೌಢಶಾಲೆ ಸೇವಾದಳ ತಂಡ ತೃತೀಯ ಬಹುಮಾನ ಪಡೆಯಿತು.

ಅರಣ್ಯ ಇಲಾಖೆ ಪ್ರಥಮ
೧೨ ಇಲಾಖೆ ಪೈಕಿ ೬ ಇಲಾಖೆಯ ಸ್ತಬ್ದಚಿತ್ರ ಮಾತ್ರ ಪಾಲ್ಗೊಂಡಿತ್ತು. ಅರಣ್ಯ ಇಲಾಖೆ ಪ್ರಥಮ, ಮಡಿಕೇರಿ ನಗರಸಭೆ ದ್ವಿತೀಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತಬ್ದಚಿತ್ರ ತೃತೀಯ ಬಹುಮಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net