

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹೃದಯಾಘಾತದಿಂದ ಸಾವನ್ನಪ್ಪಿದ ಜಾರ್ಖಂಡ್‌ನ ರಾಂಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರೆಸೇನಾ ಪಡೆ ಯೋಧ ಕೆ.ಕೆ. ಶಿಜು (೪೮) ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಗೌರವದೊಂದಿಗೆ ನೆರವೇರಿತು.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಶಿಜು ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುರುಕರುಹಟ್ಟಿಯಲ್ಲಿ ನಡೆಯಿತು. ಅರೆಸೇನಾ ಪಡೆಯವರು, ಕೊಡಗು ಪೊಲೀಸರು ಅಂತಿಮ ಗೌರವ ಸಲ್ಲಿಸಿದರು.
ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಹೃದಯಾಘಾತ ಸಂಭವಿಸಿದ್ದು, ರಾಂಚಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆ ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮೃತದೇಹ ತಂದು ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ಹುಟ್ಟೂರಿಗೆ ತರಲಾಯಿತು. ಕಡಗದಾಳು ಸರ್ಕಾರಿ ವಿದ್ಯಾಸಂಸ್ಥೆ ಮುಂಭಾಗದಿಂದ ಮೃತದೇಹವನ್ನು ತೆರೆದ ವಾಹನದಲ್ಲಿರಿಸಿ ತುರುಕರುಹಟ್ಟಿಯಲ್ಲಿರುವ ಮನೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.
ಕಡಗದಾಳು ಶಾಲಾ ವಿದ್ಯಾರ್ಥಿಗಳು, ಶಿಕ್ಷರು, ಜನಪ್ರತಿನಿಧಿಗಳು, ಸಂಘ- ಸಂಸ್ಥೆ ಪ್ರಮುಖರು ಸೇರಿದ್ದಂತೆ ಸಾರ್ವಜನಿಕರು ರಸ್ತೆಯ ಎರಡು ಬದಿಯಲ್ಲಿ ಸಾಲಾಗಿ ನಿಂತು ಗೌರವ ಸಲ್ಲಿಸಿದರು. ಪುಷ್ಪಾರ್ಚನೆ ಮಾಡುವುದರೊಂದಿಗೆ ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅಮರ್ ರಹೇ ಶಿಜು ಸರ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುವುದರ ಮೂಲಕ ದೇಶ ಸೇವೆ ಮಾಡಿದ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ತುರುಕರುಹಟ್ಟಿ ಮನೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಐಎಸ್‌ಎಫ್ ಯೋಧರು ಪುಷ್ಪಗುಚ್ಚ ಇಟ್ಟು, ಸಹದ್ಯೋಗಿಗೆ ಗೌರವ ಸಲ್ಲಿಸಿದರು. ಡಿಎಆರ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚೆನ್ನಕೇಶವ ನೇತೃತ್ವದ ಪೊಲೀಸ್ ತಂಡ ಮೂರು ಸುತ್ತು ಗಾಳಿ ಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.
ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕಡಗದಾಳು ಗ್ರಾಪಂ ಅಧ್ಯಕ್ಷ ಜಯಣ್ಣ, ಮಾಜಿ ಅಧ್ಯಕ್ಷ ಎಂ.ಎಸ್. ಶಂಭಯ್ಯ, ಮಾಜಿ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ, ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್, ಮಡಿಕೇರಿ ಮಹಿಳಾ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ವಾಣಿಶ್ರೀ, ಹಿಂದೂ ಮಲಯಾಳಿ ಸಂಘ ಅಧ್ಯಕ್ಷ ಕೆ.ಎಸ್. ರಮೇಶ್ ಮತ್ತಿತರರು ಗೌರವ ಸಲ್ಲಿಸಿದರು.
ಸಾರ್ವಜನಿಕರು, ಕುಟುಂಬಸ್ಥರು ಅಂತಿಮ ದರ್ಶನ ಪಡೆದ ಬಳಿಕ ಕತ್ತಲೆಕಾಡು ಹಿಂದೂ ರುಧ್ರಭೂಮಿಯಲ್ಲಿ ಮಲಯಾಳಿ ವಿಧಿ ವಿಧಾನ ದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಸಹೋದರ ಶೋಜನ್ ಅಗ್ನಿಸ್ಪರ್ಶ ಮಾಡಿದರು. ಮೃತರ ಪತ್ನಿ ಪ್ರಶಿದ, ಪುತ್ರಿಯರಾದ ಶಿವೆಂದು, ಶಿವಾಂಗಿ, ತಾಯಿ ಕೆ.ಕೆ. ರಾಜಮ್ಮ ರಾಷ್ಟಧ್ವಜ ಸ್ವೀಕರಿಸಿದರು.
ಗೌರವ ಸಲ್ಲಿಸಲಿಲ್ಲ
ದೇಶ ಸೇವೆಯಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಕೆ.ಕೆ. ಶಿಜು ಪಾರ್ಥಿವ ಶರೀರ ಕೊಡಗಿಗೆ ಪ್ರವೇಶಿಸುವ ವೇಳೆ ಅಧಿಕಾರಿಗಳು ಗೌರವ ಸಲ್ಲಿಸಲಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗೀಯ ಸಂಚಾಲಕ ಬಿ.ಬಿ. ಮಹೇಶ್ ಅಸಮಾಧಾನ ವ್ಯಕ್ತ ಪಡಿಸಿದರು.
ಕೊಡಗಿನ ಗಡಿ ಕೊಪ್ಪಗೇಟ್‌ನಲ್ಲಿ ಪಾರ್ಥಿವ ಶರೀರ ಆಗಮಿಸುವ ಹೊತ್ತಿಗೆ ಯಾವೊಬ್ಬ ಅಧಿಕಾರಿಯೂ ಇರಲಿಲ್ಲ. ಅಧಿಕಾರಿಗಳಿಗೆ ಮಾಹಿತಿ ಸಿಗಲಿಲ್ಲ ಎಂದು ಹೇಳುತ್ತಿರುವುದು ಯೋಧರಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.