

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗಿನ ರಸ್ತೆ ದುಸ್ಥಿತಿ ನೋಡುವಾಗ ನಾಚಿಕೆಯಾಗುತ್ತದೆ. ಒಂದು ವಾರದೊಳಗೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದೆಂದು ಜೆಡಿ(ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಘೋಷಿಸಿದರು.
ಜಿಲ್ಲೆಯ ರಸ್ತೆ ದುಸ್ಥಿತಿ ಹಾಗೂ ಕೆ.ನಿಡುಗಣೆಯಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರಿಸುವಂತೆ ಒತ್ತಾಯಿಸಿ ಜೆಡಿ ಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವ ರನ್ನುದ್ದೇಶಿಸಿ ಮಾತನಾಡಿದರು.
ಜೆಡಿಎಸ್ ವಿದ್ಯಾರ್ಥಿ ಘಟಕ ರಾಜ್ಯಾಧ್ಯಕ್ಷ ಉಮೇಶ್ ಗೌಡ ಮಾತನಾಡಿ, ಮುಖ್ಯಮಂತ್ರಿಗೆ ತಾಕತ್, ಧಮ್ ಇದ್ದರೆ ಸಂತ್ರಸ್ತರಿಗೆ ನಿರ್ಮಿಸಿ ರುವ ೭೦ ಮನೆ ಹಸ್ತಾಂತರಿಸಿ. ಕೊಡಗಿನ ರಸ್ತೆ ಗುಂಡಿ ಮುಚ್ಚಿ ಎಂದು ಹೇಳಿದರು. ಕೊಡಗಿಗೆ ಅನ್ಯಾಯ ಮಾಡುವುದನ್ನು ಕಾವೇರಿ ಎಂದಿಗೂ ಸಹಿಸು ವುದಿಲ್ಲ. ಅನ್ಯಾಯಕ್ಕೆ ನೀವು ಅಧಿಕಾರಿ ಕಳೆದುಕೊಳ್ಳುತ್ತೀರಾ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ೨೦೧೮ ರಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ೧ ಸಾವಿರ ಜನರಿಗೆ ವಸತಿ ಕಲ್ಪಿಸಿ ಕೊಟ್ಟಿದ್ದಾರೆ. ಆದರೆ, ಹಾಲಿ ಸರ್ಕಾರ ಫಲಾನುಭವಿಗಳಿಗೆ ಮನೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿ ದರು.
ಕೆ.ನಿಡುಗಣೆಯಲ್ಲಿ ೭೦ ಮನೆ ನಿರ್ಮಾಣಗೊಂಡಿದ್ದರು ಸಂತ್ತಸ್ತರಿಗೆ ನೀಡಲು ಹಿಂದೇಟು ಹಾಕುತ್ತಿರುವುದು ಏಕೆ. ಜಿಲ್ಲೆಯ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ೧೫ ದಿನದೊಳಗೆ ರಸ್ತೆ ಸರಿ ಪಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದೆಂದರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ಕೊಡಗು ಬಿಜೆಪಿ ಭದ್ರಕೋಟೆಯಾಗಿದೆ. ಈ ಭದ್ರಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿ ಹೇಗೆ ಆಗಿದೆ ಎಂದು ವ್ಯಂಗ್ಯವಾಡಿದರು. ಧರ್ಮದ ಆಧಾರದಲ್ಲಿ ಬಿಜೆಪಿ ಮತ ಪಡೆದು ಗೆಲುವು ಸಾಧಿಸುತ್ತಿದೆ. ರೈತರು, ಕಾರ್ಮಿಕ ಪರ ಯೋಜನೆ ರೂಪಿಸುತ್ತಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ. ಎಚ್.ಡಿ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಕೊಡಗಿನ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆಂದರು. ಎಚ್.ಡಿ. ಕುಮಾರಸ್ವಾಮಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ೮೫೦ ಮನೆ ಕಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ೨ ತಾಲೂಕು ರಚನೆ ಮಾಡಿ ದ್ದಾರೆಂದರು.
ತಮ್ಮ ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜಂಡೇಗೌಡ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಂಭವನೀಯ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪುಷ್ಪಾವತಿ ರಮೇಶ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಉಪಾಧ್ಯಕ್ಷ ದೇವಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುನಿಲ್, ಖಜಾಂಚಿ ಡೆನ್ನಿ ಬರೋಸ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಯುವ ಜೆಡಿಎಸ್ ಜಿಲ್ಲಾ ವಕ್ತಾರ ರವಿಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.