

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ. ಮತದಾರರ ಗಮನ ಸೆಳೆಯುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲಾ ಜೆಡಿಎಸ್‌ಗೆ ನೂತನ ಸಾರಥಿ ನೇಮಿಸುವ ಪ್ರಕ್ರಿಯೆ ಉನ್ನತ ಮಟ್ಟದಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿಯಾಗಿರುವ ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್. ಚೇತನ್ ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಪ್ರಯತ್ನ ಜೆಡಿಎಸ್ ಉನ್ನತಮಟ್ಟದಲ್ಲಿ ನಡೆದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಬೆಂಗಳೂರು ಜೆಡಿಎಸ್ ಕಚೇರಿ ಯಲ್ಲಿ ಕೆಲವು ದಿನಗಳ ಹಿಂದೆ ಚೇತನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ೨೦ ವರ್ಷದಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸು ತ್ತಿರುವ ಚೇತನ್ ಶೀಘ್ರ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಶಿಕ್ಷಕ ವೃತ್ತಿಗೆ ರಾಜಕೀನಾಮೆ ಸಲ್ಲಿಸಿ, ಸಕ್ರಿಯ ರಾಜಕೀಯಕ್ಕೆ ಬರುವ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಕರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಂಘ ದ ಪ್ರಮುಖರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗುವ ಅವಕಾಶ ಇದೆ. ಹೀಗಿರುವಾಗ ಏಕೆ ರಾಜಕೀಯಕ್ಕೆ ಹೋಗುತ್ತೀರಾ ಎಂದು ಕೇಳಲಾರಂಭಿಸಿದ್ದಾರೆ. ಇದರಿಂದ ಚೇತನ್ ಒಂದಿಷ್ಟು ಗೊಂದಲಕ್ಕೀಡಾಗಿದ್ದಾರೆ.
ಕರ್ನಾಟಕ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಚೇತನ್ ಸ್ಪರ್ಧಿಸಿ, ಹರಪಳ್ಳಿ ರವೀಂದ್ರ ಎದುರು ಸೋಲು ಅನುಭವಿಸಿ ದ್ದರು. ಒಕ್ಕಲಿಗರ ಸಂಘದ ಚುನಾವಣೆ ಸಂದರ್ಭ ವಿವಿಧ ರಾಜಕೀಯ ಪಕ್ಷದ ನೇತಾರರು ಬೆಂಬಲ ನೀಡಿದ್ದಾರೆ. ಒಂದು ಪಕ್ಷಕ್ಕೆ ಸೇರ್ಪಡೆ ಗೊಂಡ ಬಳಿಕ ಇತರೆ ಪಕ್ಷದಲ್ಲಿರುವ ಸ್ನೇಹಿತರು ಹೇಗೆ ಪ್ರತಿಕ್ರಿಯಿಸುತ್ತಾರೆಂಬ ಜಿಜ್ಞಾಸೆಯೂ ಚೇತನ್ ಅವರನ್ನು ಕಾಡಲಾರಂಭಿಸಿದೆ.
ಸಂಘಟನಾ ಚತುರ ಚೇತನ್ ಒಕ್ಕಲಿಗ ಸಮುದಾಯಕ್ಕೆ ಸೇರಿದ ಉತ್ಸಾಹಿ ವ್ಯಕ್ತಿ. ಮಾಜಿ ಸಚಿವ ಬಿ.ಎ. ಜೀವಿಜಯ ಕಾಂಗ್ರೆಸ್ ಸೇರ್ಪಡೆ ಗೊಂಡಿರುವುದರಿಂದ ಸೋಮವಾರಪೇಟೆ ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತ ಜೆಡಿಎಸ್‌ನಲ್ಲಿ ಉಳಿಸಿಕೊಳ್ಳಲು ಚೇತನ್‌ಗೆ ಸಾರಥ್ಯ ನೀಡಲು ವರಿಷ್ಠರು ಒಲವು ಹೊಂದಿದ್ದಾರೆ.
ಮಡಿಕೇರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೊಡವ ಸಮುದಾಯಕ್ಕೆ ಸೇರಿದ ನಾಪಂಡ ಮುತ್ತಪ್ಪ ಸ್ಪರ್ಧಿಸುವುದು ಬಹುತೇಕ ಖಚಿತ. ಜಿಲ್ಲಾಧ್ಯಕ್ಷ ಸ್ಥಾನ ನೀಡುವುದರ ಹಿಂದೆ ಒಕ್ಕಲಿಗ ಸಮುದಾಯದವರಿಗೆ ನೀಡುವುದರಿಂದ ಮತ ಸಮೀಕರಣದ ಲೆಕ್ಕಚಾರ ಅಡಗಿದೆ. ಇದರೊಂದಿಗೆ ವಿರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಲಿಸುವ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಮುಸ್ಲಿಂ ಮತ ಸೆಳೆಯುವ ಲೆಕ್ಕಚಾರವೂ ನಡೆದಿದೆ.
ಗಣೇಶ್ ರಾಜ್ಯ ಉಪಾಧ್ಯಕ್ಷ
ಮಾಜಿ ಸಚಿವ ಬಿ.ಎ. ಜೀವಿಜಯ ಜೆಡಿಎಸ್ ತೊರೆದ ಬಳಿಕ ಕೊಡಗಿನಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವಂತೆ ಮಾಡುವಲ್ಲಿ ಹಾಲಿ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ನಿರಂತರ ಚಟುವಟಿಕೆ ಮೂಲಕ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ವಿಧಾನಸಭೆ ಚುನಾವಣೆ ಲೆಕ್ಕಚಾರದನ್ವಯ ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ವರಿಷ್ಠರು ಒಲವು ತೋರಿದ್ದಾರೆ. ಪಕ್ಷಕ್ಕಾಗಿ ಗಣೇಶ್ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಮಾಧಾನ ಪಡಿಸುವ ಯೋಚನೆ ವರಿಷ್ಠರಲ್ಲಿದೆ. ಮೂರು ತಿಂಗಳ ಹಿಂದೆಯೇ ಹೊಸ ಅಧ್ಯಕ್ಷರ ನೇಮಕಾತಿ ಮಾಡಲು ವರಿಷ್ಠರಿಗೆ ಹೇಳಿದ್ದೇನೆ. ಜಿಲ್ಲಾಧ್ಯಕ್ಷ ಸೇರಿದ್ದಂತೆ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯೂ ನಾನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಲು ಸಿದ್ಧನಿದ್ದೇನೆಂದು ಕೆ.ಎಂ.ಬಿ. ಗಣೇಶ್ ವಿಜಯವಾಣಿಗೆ ಸ್ಪಷ್ಟ ಪಡಿಸಿದ್ದಾರೆ.
ಹೊಸ ನೇಮಕಾತಿ
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಹೊರತು ಪಡಿಸಿದ್ದಂತೆ ಉಳಿದ ಎಲ್ಲರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿದೆ. ರಾಜ್ಯಾಧ್ಯಕ್ಷ ರಾಗಿ ಸಿ.ಎಂ. ಇಬ್ರಾಹಿಂ ನೇಮಕಗೊಂಡ ಬಳಿಕ ಎಲ್ಲರೂ ತಮ್ಮ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ನೂತನ ಜಿಲ್ಲಾಧ್ಯಕ್ಷರು ಸೇರಿದ್ದಂತೆ ಎಲ್ಲಾ ಹುದ್ದೆಗೆ ಹೊಸ ನೇಮಕಾತಿ ನಡೆಯಬೇಕೆಂದು ಬೆಂಗಳೂರು ಜೆಡಿಎಸ್ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಸಭೆ ಯಲ್ಲಿ ವರಿಷ್ಠರು ತಿಳಿಸಿದ್ದಾರೆ.
ಕೊಡಗು ಬಚಾವೋ
ಕಾಂಗ್ರೆಸ್ಸಿನ ಮಡಿಕೇರಿ ಚಲೋ, ಬಿಜೆಪಿಯ ಜನಜಾಗೃತಿ ಸಮಾವೇಶಕ್ಕೆ ಪರ್ಯಾಂವಾಗಿ ಜೆಡಿಎಸ್ ಕೊಡಗು ಬಚಾವೋ ಆಂದೋಲನ ಹಮ್ಮಿಕೊಳ್ಳಲು ಮುಂದಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕೊಡಗು ಬಚಾವೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ರೂಪುರೇಷೆ ಸಿದ್ಧ ಪಡಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾಹಿತಿ ನೀಡಿದ್ದಾರೆ.
**
ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ್ದಂತೆ ಪಕ್ಷದ ವರಿಷ್ಠರು ಮಾತುಕತೆ ನಡೆಸಿರುವುದು ಸತ್ಯ. ಶಿಕ್ಷಕ ವೃತ್ತಿಯಲ್ಲಿಯೇ ಮುಂದುವರಿ ಯುವಂತೆ ಸ್ನೇಹಿತರು ಒತ್ತಡ ಹೇರುತ್ತಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆಪ್ತರೊಂದಿಗೆ ಸಮಲೋಚನೆ ನಡೆಸಿ ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಎಚ್.ಎಸ್. ಚೇತನ್, ಸಹ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.
**
ಜಿಲ್ಲಾಧ್ಯಕ್ಷರನ್ನಾಗಿ ಹೊಸಬರನ್ನು ನೇಮಕ ಮಾಡಲು ವರಿಷ್ಠರು ನಿರ್ಧರಿಸಿದ್ದಲ್ಲಿ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತೇನೆ. ಎಚ್.ಡಿ. ಕುಮಾರಸ್ವಾಮಿ ನಾಯಕತ್ವದಲ್ಲಿ ವಿಶ್ವಾಸ ಹೊಂದಿದ್ದು, ಯಾವ ನಿರೀಕ್ಷೆಯೂ ಇಲ್ಲದೆ ಪಕ್ಷದ ಕೆಲಸ ಮಾಡುತ್ತೇನೆ. ಕೆ.ಎಂ. ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು.
**
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕೊಡಗಿನ ರಾಜಕೀಯಕ್ಕೆ ಸಂಬಂಧಿಸಿದ್ದಂತೆ ಸುದೀರ್ಘ ಚರ್ಚೆ ನಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹಲವು ಬದಲಾವಣೆಗೆ ವರಿಷ್ಠರು ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ. ನಾಪಂಡ ಮುತ್ತಪ್ಪ, ಜೆಡಿಎಸ್ ಮುಖಂಡ.