ನವೆಂಬರ್ ೧ ರಂದು ಪಂಚರತ್ನ ಯಾತ್ರೆಗೆ ಚಾಲನೆ

napanda muthappa
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ನವೆಂಬರ್ ೧ ರಂದು ಕುಶಾಲನಗರದಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುವುದೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಂಭಾವನೀಯ ಜೆಡಿ(ಎಸ್) ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದ್ದಾರೆ.

ಜೆಡಿ(ಎಸ್) ಪಕ್ಷದ ಸಿದ್ಧಾಂತ, ಆದ್ಯತೆ ಮತ್ತು ಮುಂದೆ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಥಯಾತ್ರೆ ಆಯೋಜಿಸಲಾಗಿದೆ. ಪ್ರತಿಯೊಂದು ಗ್ರಾಮಕ್ಕೆ ರಥಯಾತ್ರೆ ಮೂಲಕ ಭೇಟಿ ನೀಡಲಾಗುತ್ತದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಮೈಸೂರಿನ ರೆಸಾರ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಎಂಎಲ್‌ಎ ಚುನಾವಣೆ ಅಭ್ಯರ್ಥಿಗಳ ಸಭೆಯಲ್ಲಿ ಪಕ್ಷದ ಸಂಘಟನೆ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಮುಂದಾಳತ್ವದಲ್ಲಿ ರೂಪಿಸಿರುವ ಯೋಜನೆಯಡಿ ಪಕ್ಷ ಮುನ್ನಡೆದ್ದಲ್ಲಿ ೨೦೨೩ ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಮನೆ- ಮನೆಗೆ ಭೇಟಿ ನೀಡಿ ಪಕ್ಷದ ಉದ್ದೇಶ- ನಿಲುವು ಮನವರಿಕೆ ಮಾಡಿಕೊಡುವ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ.

ಪಂಚರತ್ನ ರಥಯಾತ್ರೆ ಜನವರಿ ತಿಂಗಳವರೆಗೂ ಗ್ರಾಮಗಳಿಗೆ ಭೇಟಿ ನೀಡಲಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಒಂದು ದಿನ ಎಚ್.ಡಿ. ಕುಮಾರಸ್ವಾಮಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ ೧ ರಂದು ಕುಶಾಲನಗರದಲ್ಲಿ ಪ್ರಾರಂಭವಾಗುವ ಪಂಚರತ್ನ ಯಾತ್ರೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಸಂಚರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net