

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ನನಗೆ ನೋಟೀಸ್ ನೀಡುವ ಅಧಿಕಾರವೇ ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ಇಲ್ಲ. ನನಗೆ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ನನ್ನ ವಿರುದ್ಧದ ಷಡ್ಯಂತ್ರದ ಭಾಗ ಇದಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ನಾಪಂಡ ಎಂ. ಮುತ್ತಪ್ಪ ಹೇಳಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್ ತೊರೆದು ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಸೇರ್ಪಡೆ ಸಂದರ್ಭ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತ ಪಡಿಸಿದ್ದಾಗ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಮುಂದಿನ ದಿನ ಗಳಲ್ಲಿ ಈ ಕುರಿತು ಚರ್ಚೆ ನಡೆದ ನಂತರ ಕುಮಾರಸ್ವಾಮಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ.
ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗದಿದ್ದರೂ ಮೌಖಿಕವಾಗಿ ಚುನಾವಣೆಗೆ ಸಿದ್ಧರಾಗುವಂತೆ ಸೂಚಿಸಿದ್ದಾರೆ. ತದನಂತರ ನನ್ನ ವ್ಯಕ್ತಿ ಪರಿಚಯದ ಕೊಡಗಿನ ಭರವಸೆಯ ಬೆಳಕು-ನಾಪಂಡ ಮುತ್ತಪ್ಪ ೨೦೨೩ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಮೆಚ್ಚಿದ ಅಭ್ಯರ್ಥಿ ಎನ್ನುವ ಪುಸ್ತಕ ಹೊರತಂದಾಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೇ ಖುದ್ದಾಗಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಜ.೧೩ ರಂದು ಖಾಸಗಿ ವಾಹಿನಿ ನಡೆಸಿದ ಮತ ಸಮೀಕ್ಷೆಯಲ್ಲಿ ನನಗೆ ಕ್ಷೇತ್ರದಾದುಂತ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದನ್ನು ಗಮನಿಸಿ ಮತಿಭ್ರಮಣೆಗೊಳಗಾಗಿರುವ ಕೆಲವರು ಅವ್ಯಾಹತವಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ನೋಟೀಸನ್ನು ಜಾರಿಗೊಳಿಸಿದ್ದಾರೆ. ಅಷ್ಟಕ್ಕೂ ಈ ರೀತಿಯ ನೋಟೀಸನ್ನು ಜಾರಿಗೊಳಿಸುವ ಅಧಿಕಾರ ಜಿಲ್ಲಾಧ್ಯಕ್ಷರ ವ್ಯಾಪ್ತಿ ಮೀರಿದ್ದಾಗಿದೆ. ಅಂತಹ ಅಧಿಕಾರ ರಾಜ್ಯ ಸಮಿತಿಗೆ ಮಾತ್ರವಿದೆ.
ನೋಟೀಸ್ ಜಾರಿಗೊಳಿಸುವ ಮುಖಾಂತರ ಯುದ್ದೋಪಾದಿಯಲ್ಲಿ ನಡೆಯುತ್ತಿರುವ ಪಕ್ಷ ಸಂಘಟನೆಯ ಕೆಲಸಕ್ಕೆ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ವರಿಷ್ಠರಿಗೆ ಸೂಕ್ತ ಸಂದರ್ಭದಲ್ಲಿ ಸಮಜಾಯಿಸಿ ನೀಡಲು ಬದ್ಧವಾಗಿದ್ದೇನೆ. ನಾನೇ ಪಕ್ಷದ ಸೂಕ್ತ ಸಂಭವನೀಯ ಅಭ್ಯರ್ಥಿಯಾಗಿದ್ದು, ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ ಸಾಧಿಸುವುದು ಖಚಿತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.