ಫೆಬ್ರವರಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ

7mdkd1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ಘಟಕದಿಂದ ಫೆಬ್ರವರಿಯಲ್ಲಿ ಮಡಿಕೇರಿಯಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಆಯೋಜಿಸ ಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಹೇಳಿದರು.

ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಜನಪರ ಕಾಳಜಿ ಮತ್ತು ಅಭಿವೃದ್ಧಿ ಕಾರ್ಯ ಮರೆತಿರುವ ರಾಷ್ಟ್ರೀಯ ಪಕ್ಷಗಳು ಆತಂಕ ಮೂಡಿಸಿ ಮತ ಗಳಿಸುವ ತಂತ್ರಗಾರಿಕೆಯಲ್ಲಿ ತೊಡಗಿವೆ ಎಂದು ಟೀಕಿಸಿದರು.

ಬಿಜೆಪಿಯ ಹೆಸರು ಹೇಳಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿ ಮತ ಗಳಿಸುವ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಕೋಮು ದ್ವೇಷ ಹುಟ್ಟು ಹಾಕಿ ಸಮಾಜದಲ್ಲಿ ಒಡಕು ಮೂಡಿಸುವ ಕ್ಷುಲ್ಲಕ ರಾಜಕೀಯವನ್ನು ಬಿಜೆಪಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆತಂಕ, ಅಶಾಂತಿ ಸೃಷ್ಟಿಯಲ್ಲೇ ಕಾಲ ಹರಣ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳು ಜನರ ಬೇಕು ಬೇಡಗಳ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ನೊಂದವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಕೇವಲ ಮತ ಗಳಿಸುವುದಷ್ಟೇ ಇವುಗಳ ಉದ್ದೇಶ. ಆದರೆ, ಜೆಡಿಎಸ್ ನಾಡು ಮತ್ತು ನಾಡಿನ ಜನರ, ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.

ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಎಚ್.ಡಿ. ಕುಮಾರಸ್ವಾಮಿ, ಮದ್ಯ ಮಾರಾಟ ಮತ್ತು ಲಾಟರಿ ನಿಷೇಧದ ಮೂಲಕ ಬಡವರ ಹಾಗೂ ಬಡ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿ ರೈತ ಪರ ನಾಯಕ ಎಂದು ಕೀರ್ತಿ ಗಳಿಸಿ ದ್ದಾರೆ. ಇದೇ ಕಾರಣಕ್ಕೆ ಕುಮಾರಣ್ಣ ಹೋದ ಊರುಗಳಲ್ಲೆಲ್ಲ ಜನಸ್ತೋಮವೇ ಹರಿದು ಬರುತ್ತಿದೆ. ಜನರು ಈ ಬಾರಿ ಜೆಡಿಎಸ್ ಪರ ಇದ್ದು, ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ಅಲ್ಪಸಂಖ್ಯಾತರು ಕೂಡ ನಮಗೆ ಬೆಂಬಲ ಸೂಚಿಸುತ್ತಿದ್ದಾರೆಂದರು. ಅಲ್ಪಸಂಖ್ಯಾತರ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಸಾಕ್ ಖಾನ್, ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಮರೆತು ಜಾತಿ ರಾಜಕರಣ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಕೋಮುವಾದದ ಮೂಲಕ ಅಶಾಂತಿ ಮೂಡಿಸುತ್ತಿವೆ ಎಂದು ಟೀಕಿಸಿದರು.

ಬಡವರ ಮತ್ತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಸುತ್ತಿರುವ ಹಾಗೂ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಜೆಡಿಎಸ್‌ಗೆ ಅಲ್ಪಸಂಖ್ಯಾತರು ಮತ ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತ ಮತದಾರರಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿ
ದೆ ಎಂದು ದೂರಿದರು.

ಕೊಡಗಿನಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕುವುದರಿಂದ ಬಿಜೆಪಿ ಗೆಲುವು ಸಾಧಿಸುತ್ತಿದೆ. ಅಲ್ಪಸಂಖ್ಯಾತರ ಸಂಪೂರ್ಣ ಮತ ಜೆಡಿಎಸ್‌ಗೆ ಸಿಕ್ಕರೆ ಮಾತ್ರ ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದರು.

ಜೆಡಿಎಸ್ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಝಕ್ರಿಯ, ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಬಿ.ಬಿ. ಪುಷ್ಪಾವತಿ, ನಗರಸಭೆ ಸದಸ್ಯ ಮುಸ್ತಫ, ಜಿಲ್ಲಾ ಉಪಾಧ್ಯಕ್ಷ ಕೊಡಂಗೇರಿ ಯುಸೂಫ್ ಕೊಡಂಗೇರಿ ಮತ್ತಿತರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net