

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ್ದಂತೆ ವರಿಷ್ಠರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ತಾಂತ್ರಿಕ ಸಮಸ್ಯೆ, ರಾಜಕೀಯ ಲೆಕ್ಕಾಚಾರ ಹಾಗೂ ಒತ್ತಡ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಬದಲಾಯಿಸಿ ಎಚ್.ಎಸ್. ಚೇತನ್ ಅವರನ್ನು ನೇಮಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರುವ ಹಿರಿಯ ಕಾರ್ಮಿಕ ಮುಖಂಡ ನಾಪಂಡ ಮುದ್ದಪ್ಪ ತನ್ನ ಗೆಲುವಿಗೆ ಸಹಕಾರಿ ಆಗುವ ಲೆಕ್ಕಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಚೇತನ್‌ಗೆ ಜಿಲ್ಲಾಧ್ಯಕ್ಷ ಪಟ್ಟಹಟ್ಟಲು ಹಠ ತೊಟ್ಟಿದ್ದಾರೆ. ಸೆಪ್ಟೆಂಬರ್ ೩೦ ಕ್ಕೆ ಅನ್ವಯ ಆಗುವಂತೆ ಶಿಕ್ಷಕರ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆಯಲು ಚೇತನ್ ಮಾಸ್ಟರ್ ಸಲ್ಲಿಸಿದ್ದ ಅರ್ಜಿ ಇನ್ನೂ ಅಂಗೀಕಾರ ಆಗದಿರುವುದು ತೊಡಕಾಗಿದೆ.
ಹುಣಸೂರಿನಲ್ಲಿ ಆಯೋಜಿಸಲ್ಪಟ್ಟಿದ್ದ ನಾಡಪ್ರಭು ಕೆಂಪೇಗೌಡ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಚೇತನ್ ಅವರನ್ನು ನಮ್ಮ ಪಕ್ಷದ ಕೊಡಗು ಜಿಲ್ಲಾಧ್ಯಕ್ಷರೆಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಾಲಾನಂದ ಸ್ವಾಮೀಜಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರಿಚಯ ಮಾಡಿಕೊಟ್ಟಿದ್ದರು.
ರಾಜಕೀಯ ಪ್ರವೇಶ ಉದ್ದೇಶದಿಂದ ೨೦ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಹುದ್ದೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿರುವ ಚೇತನ್ ಜೂನ್ ತಿಂಗಳಿನಲ್ಲಿ ಸ್ವಯಂ ನಿವೃತ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಲೆಕ್ಕಾಚಾರದಂತೆ ರಾಜೀನಾಮೆ ಅಂಗೀಕಾರ ಆಗದಿರುವುದು ಚಡಪಡಿಕೆಗೆ ಕಾರಣವಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸ್ವಯಂ ನಿವೃತ್ತಿ ನೀಡುವ ಮುನ್ನ ಹಣಕಾಸು ಇಲಾಖೆ ವ್ಯಾಪ್ತಿ ವ್ಯಾಪ್ತಿಯ ಮಹಾಲೆಕ್ಕಪಾಲಕರಿಂದ ಮಾಹಿತಿ ಕೇಳಿದ್ದಾರೆ. ಅಲ್ಲಿಂದ ವರದಿ ಬರುವುದು ತಡವಾಗಿರುವುದರಿಂದ ಸಹಜವಾಗಿ ರಾಜೀನಾಮೆ ಸ್ವೀಕೃತ ಗೊಂಡಿಲ್ಲ. ರಾಜಕೀಯ ನೆಲೆಗಟ್ಟಿನಲ್ಲಿ ಯಾರಾದರೂ ಕೈಯಾಡಿಸಿರುವ ಅನುಮಾನವೂ ವ್ಯಕ್ತವಾಗಿದೆ.
ಏತನ್ಮಧ್ಯೆ, ಚೇತನ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಜೆಡಿ(ಎಸ್) ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ನೇತೃತ್ವದಲ್ಲಿ ಕೊಡಗಿನ ಅಲ್ಪಸಂಖ್ಯಾತ ಜೆಡಿ(ಎಸ್) ಮುಖಂಡರು ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಬೆಂಗಳೂರಿ ನಲ್ಲಿ ಭೇಟಿ ಮಾಡಿ ಕೆ.ಎಂ. ಗಣೇಶ್ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಬೇಕೆಂಬ ಒತ್ತಡ ಹೇರಿದ್ದಾರೆ.
ಶಿಕ್ಷಕರ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸುವ ಅವಕಾಶ ಇರುವುದರಿಂದ ಶಿಕ್ಷಕ ವೃತ್ತಿಯಲ್ಲಿಯೇ ಮುಂದುವರಿಯುವಂತೆ ಅವರ ಆತ್ಮೀಯರು ಒತ್ತಡ ಹೇರುತ್ತಿದ್ದಾರೆ. ಸಕ್ರಿಯ ರಾಜಕೀಯಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಚೇತನ್ ಪುತ್ರಿ, ತಾಯಿ ತೀವ್ರ ವಿರೋಧ ವ್ಯಕ್ತ
ಪಡಿಸುತ್ತಿದ್ದಾರೆ. ಪ್ರಾಥಮಿಕ ಸದಸ್ಯತ್ವ ಪಡೆಯುವ ಮುನ್ನವೇ ಜಿಲ್ಲಾಧ್ಯಕ್ಷ ಸ್ಥಾನ ನೀಡುವುದು ಒಳ್ಳೆಯ ಸಂದೇಶ ನೀಡುವುದಿಲ್ಲ ಎಂಬ ವಿರೋಧವೂ ವ್ಯಕ್ತವಾಗುತ್ತಿದೆ.
ಜೆಡಿ(ಎಸ್) ಸೇರ್ಪಡೆಯಿಂದ ಪ್ರಯೋಜನವಾಗುವುದಿಲ್ಲ. ಬಿಜೆಪಿ ಸೇರ್ಪಡೆಗೊಂಡಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡ ಲಾಗುವುದೆಂಬ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಮುಖಂಡರೊಬ್ಬರು ಯುವ ಬಿಜೆಪಿ ಮುಖಂಡರೊಬ್ಬರ ಮೂಲಕ ಚೇತನ್ ಮಾಸ್ಟರ್‌ಗೆ ತಲುಪಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಾಜಕೀಯ ವಿದ್ಯಮಾನದಿಂದ ಚೇತನ್ ಗೊಂದಲಕ್ಕೆ ಒಳಗಾಗಿದ್ದಾರೆ.
ಮಡಿಕೇರಿ ಅಭ್ಯರ್ಥಿ ಯಾರು?
ಕಳೆದ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂದು ನಾಪಂಡ ಮುತ್ತಪ್ಪ ಪಕ್ಷ ತೊರೆದು ಜೆಡಿ (ಎಸ್) ಸೇರ್ಪಡೆಗೊಂಡಿದ್ದಾರೆ. ತಮಗೆ ಜೆಡಿಎಸ್ ಟಿಕೆಟ್ ಖಚಿತ ಎಂಬ ಅಚಲ ವಿಶ್ವಾಸದಲ್ಲಿ ಮುತ್ತಪ್ಪ ಇದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವ ಡಾ.ಮಂಥರ್ ಗೌಡ, ಜೆಡಿ(ಎಸ್) ಟಿಕೆಟ್ ಕೇಳಿದ್ದಾರೆಂಬ ಸುದ್ದಿ ಹರಿದಾಡಲಾರಂಭಿಸಿದೆ.
ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಕೊಡಗು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವಿನ ಸನಿಹದಲ್ಲಿ ಸೋಲು ಅನುಭವಿಸಿದ್ದ ಡಾ.ಮಂಥರ್ ಗೌಡಗೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸಂಘಟಿತವಾಗಿ ವಿರುದ್ಧವಾಗಿ ನಿಂತಿದ್ದಾರೆ. ಹೊರಗಿನ ವ್ಯಕ್ತಿ ಎಂದು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ, ಇದನ್ನು ಲೆಕ್ಕಿಸದೇ ತಮ್ಮದೇ ಶೈಲಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿ ದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರನ್ನು ಹಾಸನದಲ್ಲಿ ಪ್ರಬಲವಾಗಿ ವಿರೋಧಿಸುತ್ತಿರುವ ಮಾಜಿ
ಸಚಿವ ಎ.ಮಂಜು ಕುಟುಂಬಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶ ವಿರಳ. ಹೀಗಿದ್ದರೂ, ರಾಜಕೀಯದಲ್ಲಿ ಏನ್ ಬೇಕಾದರೂ ನಡೆಯ ಬಹುದೆಂಬ ಚರ್ಚೆಯೂ ನಡೆದಿದೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಸತತ ಪ್ರಯತ್ನಿಸುತ್ತಿರುವ ಸಮಾಜ ಸೇವಕ ಹರಪಳ್ಳಿ ರವೀಂದ್ರ ಮನಸ್ಸು ಮಾಡಿದರೆ ಸುಲಭವಾಗಿ ಜೆಡಿ(ಎಸ್) ಟಿಕೆಟ್ ಪಡೆಯಬಹುದೆಂಬ ಚರ್ಚೆ ನಡೆದಿದೆ. ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಯಲ್ಲಿ ರವೀಂದ್ರ ಸ್ಪರ್ಧಿಸುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
**
ಮಾಜಿ ಸಚಿವ ಬಿ.ಎ. ಜೀವಿಜಯ ಪಕ್ಷ ತೊರೆದ ಬಳಿಕ ಜೆಡಿಎಸ್ ಸಂಘಟನೆ ಮಾಡಲು ಬಂಡೆ ಕಲ್ಲಿನಲ್ಲಿ ನಾಟಿ ಮಾಡಿದ್ದೇವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ಸೇರ್ಪಡೆಗೊಳ್ಳುವವರಿಗಾಗಿ ಕಷ್ಟದಲ್ಲಿ ಪಕ್ಷ ಸಂಘಟನೆ ಮಾಡಿದವರನ್ನು ದೂರ ಮಾಡುವುದು ಸರಿಯಲ್ಲ. ಚುನಾವಣೆ ಕಳೆಯುವರೆಗೂ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವುದಿಲ್ಲ ಎಂದು ರಾಜ್ಯಾಧ್ಯಕ್ಷರು ಸ್ಪಷ್ಟ ಪಡಿಸಿದ್ದಾರೆ. ಇಸಾಕ್ ಖಾನ್, ಜಿಲ್ಲಾಧ್ಯಕ್ಷರು, ಜೆಡಿಎಸ್ ಅಲ್ಪಸಂಖ್ಯಾತ ಘಟಕ.
**
ಶಿಕ್ಷಕ ಎಚ್.ಎಸ್. ಚೇತನ್ ಸ್ವಯಂ ನಿವೃತ್ತಿಗೆ ಸಂಬಂಧಿಸಿದ್ದಂತೆ ಸಲ್ಲಿಸಿರುವ ಅರ್ಜಿ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸ್ವಯಂ ನಿವೃತ್ತಿ ನೀಡುವ ಮುನ್ನ ಮಹಾಲೆಕ್ಕಪರಿಪಾಲಕರಿಂದ ಸೇವಾ ಪುಸ್ತಕದ ಮಾಹಿತಿ ಕೇಳಲಾಗಿದೆ. ಚೇತನ್ ಅವರಿಗೆ ಸ್ವಯಂ ನಿವೃತ್ತಿ ನೀಡಲು ಯಾವ ಕಾನೂನು ತೊಡಕು ಇಲ್ಲ. ಕೆ.ವಿ. ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ.