ತೆರಿಗೆ ಪಾವತಿಯಲ್ಲಿ ಕೊಡಗು ಮೊದಲು

12 Kush01
Published on

ಮಡಿಕೇರಿ : ಕೊಡಗು ಜಿಲ್ಲೆ ಕರ್ನಾಟಕದ ಪುಟ್ಟ ಜಿಲ್ಲೆಯಾದರೂ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ ಎನ್ನುವುದು ಹೆಮ್ಮೆ ಪಡುವ ವಿಚಾರ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.


ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಶಾಲನಗರದಲ್ಲಿ 1991 ಚೇಂಬರ್ ಆಫ್ ಕಾಮರ್ಸ್ ಪ್ರಾರಂಭವಾಯಿತು. ಆಗಿನ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ವರ್ತಕರಿಗೆ ಅನವಶ್ಯಕ ಕಿರುಕುಳ ನೀಡಿ ಅಂಗಡಿಗಳಿಗೆ ದಾಳಿ ಮಾಡಿ, ದಂಡ ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಚೇಂಬರ್ ಪದಾಧಿಕಾರಿಗಳು ವರ್ತಕರ ಪರವಾಗಿ ನಿಂತು ತೊಂದರೆ ತಪ್ಪಿಸಿರುವ ಅನೇಕ ಉದಾಹರಣೆ ಇದೆ. ಕೊಡಗು ಕಾಫಿ ಜತೆಗೆ ಪ್ರವಾಸೋದ್ಯಮ ಅವಲಂಬಿತವಾಗಿದೆ. ವರ್ತಕರು ಅದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಕರೆ ನೀಡಿದರು.


ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಎಸ್.ಕೆ.ಸತೀಶ್ ಮಾತನಾಡಿ, ವರ್ತಕರ ದಿನಾಚರಣೆಯನ್ನು ಆಚರಿಸುವಂತಾಗಬೇಕು. ಕುಶಾಲನಗರ ಸ್ಥಾನೀಯ ಸಮಿತಿ ವತಿಯಿಂದ ಉದ್ದೇಶಿಸಿರುವ ವರ್ತಕರ ಭವನಕ್ಕೆ ಸದಸ್ಯರು ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವೀಂದ್ರ.ವಿ.ರೈ ಮಾತನಾಡಿ, ವರ್ತಕರ ಸಹಕಾರದಿಂದ ಸಂಘಟನೆ ಮತ್ತಷ್ಟು ಬಲಪಡಿಸಿತ್ತೇವೆ. ಭವನ ನಿರ್ಮಾಣಕ್ಕೆ ಬಹುತೇಕ ಎಲ್ಲ ತಯಾರಿಗಳು ಆಗಿದೆ. ಸದ್ಯದಲ್ಲೇ ಅದರ ನಿರ್ಮಾಣ ಮಾಡುವ ಸಲುವಾಗಿ ಸರ್ವರು ಸಹಕಾರ ನೀಡುವಂತೆ ಕೋರಿದರು. ಕುಶಾಲನಗರ ಸ್ಥಾನಿಯ ಸಮಿತಿಯ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಬಿ.ಅಮೃತ್‌ರಾಜ್, ಕಾರ್ಯದರ್ಶಿ ಕೆ.ಎಸ್.ನಾಗೇಶ್, ಕಾರ್ಯಕ್ರಮ ನಿರ್ದೇಶಕ ಕೆ.ಎನ್.ದೇವರಾಜ್, ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿರ್ದೇಶಕರಾದ ಎನ್.ವಿ.ಬಾಬು, ಚಿತ್ರ, ರೂಪ, ಚಂದ್ರು, ಎಂ.ಕೆ.ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net