ತಾರತಮ್ಯ ರಹಿತ ಸಮಾಜವೇ ಸಂವಿಧಾನದ ಆಶಯ

26mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಸಂವಿಧಾನ ಜಾರಿಗೆ ಬರುವುದರೊಂದಿಗೆ ಭಾರತವು ಪ್ರಜಾಸತ್ತಾತ್ಮಕ, ಸಮಾಜವಾದಿ, ಸಾರ್ವಭೌಮ ಗಣರಾಜ್ಯವಾಗಿ ರೂಪು ಗೊಂಡಿತು. ದೇಶದ ಪ್ರತಿಯೊಬ್ಬ ಪ್ರಜೆಯು ಅಭಿವೃದ್ಧಿ ಹೊಂದಬೇಕು. ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ಸಂವಿಧಾನದ ಮೂಲ ಆಶಯ ಎಂದು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಜಿಲ್ಲಾಡಳಿತದಿಂದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಸರ್ವರ ಕಲ್ಯಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿವೆ ಎಂದರು.

ಮಹಾತ್ಮ ಗಾಂಧೀಜಿ, ಜವಹಾರ್‌ಲಾಲ್ ನೆಹರು, ಡಾ.ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಬಾಲ ಗಂಗಾಧರ ತಿಲಕ, ವೀರ ಸಾವರ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಗುಡ್ಡೆಮನೆ ಅಪ್ಪಯ್ಯಗೌಡ ಸೇರಿದಂತೆ ಅನೇಕ ಮಹನೀಯರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವತಂತ್ರ ಭಾರತದ ಬಲಿಷ್ಠ ಸೇನೆಗೆ ದೇಶದ ಪ್ರಥಮ ಸೇನಾ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಕೊಡುಗೆ ಸದಾ ಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಯು ಸ್ವಾವಲಂಬಿ, ಸ್ವಾಭಿಮಾನಿ, ಗೌರವಯುತ ಜೀವನ ನಡೆಸಬೇಕೆಂದು ಅನೇಕ ಮಹನೀಯರು ಕಂಡಿದ್ದ ಕನಸನ್ನು ನನಸು ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷ ವಾಕ್ಯದಂತೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಕ್ರಾಂತಿಕಾರಕ ಬದಲಾವಣೆ ತಂದಿದೆ. ಮುಂದಿನ ೨೫ ವರ್ಷ ಭಾರತಕ್ಕೆ ಅಮೃತ ಕಾಲ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಕಾರ್ಯನಿರ್ವಹಿಸ ಬೇಕೆಂದು ಪ್ರಧಾನಿ ಹೇಳಿದ್ದಾರೆ.

ಕೈಗಾರಿಕೆ, ಕೃಷಿ, ನೀರಾವರಿ, ಉದ್ಯಮ, ಉದ್ಯೋಗ, ಸಂಪರ್ಕ, ಸಾರಿಗೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಗೆ ಒತ್ತು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮಟ್ಟ ಮೇಲಕ್ಕೆತ್ತುವ ಗುರಿ ಹೊಂದಲಾಗಿದೆ. ಅದಕ್ಕಾಗಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಲಿರುವ ಗತಿ ಶಕ್ತಿ ಮೂಲಕ ನವ ಭಾರತ ನಿರ್ಮಾಣದ ಕಡೆ ದಾಪುಗಾಲು ಇಡಲಾಗುತ್ತಿದೆ.

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯಾಗುತ್ತಿದೆ. ರೈಲು ಹಳಿಗಳ ಸಂಪೂರ್ಣ ವಿದ್ಯುದ್ದೀಕರಣ, ಜೋಡಿ ಮಾರ್ಗ, ವಂದೇ ಭಾರತ್ ಎಕ್ಸ್‌ಏಪ್ರೆಸ್, ಮೆಟ್ರೋ, ಬುಲೆಟ್ ರೈಲು, ರೈಲ್ವೆ ಫ್ರೈಟ್ ಕಾರಿಡಾರ್, ನೂತನ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಉನ್ನತೀಕರಣ, ಎಕ್ಸ್-ಪ್ರೆಸ್‌ವೇ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ, ಹೊಸ ಹೆದ್ದಾರಿ ನಿರ್ಮಾಣ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದೆ.

ಗಣಕ ವ್ಯವಸ್ಥೆ ಮೂಲಕ ಬ್ಯಾಂಕಿಂಗ್, ವ್ಯಾಪಾರ, ವಹಿವಾಟು, ಹಣಕಾಸಿನ ವ್ಯವಹಾರಗಳಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಅಗ್ಗದ ದರದ ಇಂಟರ್ನೆಟ್ನಿಂದಾಗಿ ಅನೇಕ ಸೇವೆಗಳು ಡಿಜಿಟಲೀಕರಣಗೊಂಡು ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ.
೪ಜಿ ಸೇವೆಯಿಂದ ಆನ್‌ಲೈನ್ ಕಲಿಕೆ, ಇಂಟರ್ನೆಟ್ನಲ್ಲಿ ಹೆಚ್ಚಿನ ಕಂಟೆಂಟ್ ಲಭ್ಯವಾಗುತ್ತಿವೆ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗ, ಜ್ಞಾನಾರ್ಜನೆಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಿದೆ. ಈಗ ದೇಶದೆಲ್ಲೆಡೆ ವಿಸ್ತಾರಗೊಳ್ಳುತ್ತಿರುವ ೫ಜಿ ಸೇವೆ ಕೂಡ ಮತ್ತೊಂದು ಸುತ್ತಿ
ನ ಕ್ರಾಂತಿ ಮಾಡಲಿದೆ.

ಆಟೋಮೊಬೈಲ್, ಐಟಿ-ಬಿಟಿ, ಫಾರ್ಮಸಿ, ಟೆಕ್ಸ್ಏಟೈಲ್, ಉತ್ಪಾದನಾ ವಲಯ, ಏರೋನಾಟಿಕಲ್, ಏರೋಸ್ಪೇಸ್, ಪ್ರವಾಸೋದ್ಯಮ ಸೇರಿದಂತೆ ಅನೇಕ ವಲಯಗಳಲ್ಲಿ ಬೃಹತ್ ಪ್ರಮಾಣದ ಹೂಡಿಕೆಯಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯಾಗುತ್ತಿವೆ. ಕೃಷಿ ಪ್ರಧಾನ ಭಾರತದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಿಲು ಅನೇಕ ರೈತಸ್ನೇಹಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ನೀರಾವರಿ, ಅಂತರ್ಜಲ ಹೆಚ್ಚಳ, ಕೆರೆ-ಕುಂಟೆ ತುಂಬಿಸುವ ಮೂಲಕ ಜಲಮೂಲ ವೃದ್ಧಿಸುವುದು, ಬೇವು ಲೇಪಿತ ಯುರಿಯೂ, ಮಣ್ಣು ಆರೋಗ್ಯ ಕಾರ್ಡ್, ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಇ-ನಾಮ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಅಭಿವೃದ್ಧಿಯ ಕಡೆ ದಾಪುಗಾಲಿಡುತ್ತಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಅನೇಕ ಜನಪರ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆ, ಉದ್ಯೋಗ ಸೃಷ್ಟಿ, ಹೊಸ ರೈಲುಗಳ ಸಂಚಾರ, ರಸ್ತೆಗಳ ಅಭಿವೃದ್ಧಿ, ನೀರಾವರಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಜಿಎಸ್‌ಏಟಿ ಸಂಗ್ರಹದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ.

ರಾಜ್ಯ ಪ್ರಗತಿ ಹಾದಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಅನೇಕ ಜನಪರ ಯೋಜನೆ ರೂಪಿಸಲಾಗಿದೆ. ರೈತ ವಿದ್ಯಾ ನಿಧಿ ಯೋಜನೆ, ನೇಕಾರರು ಮತ್ತು ಮೀನುಗಾರರ ಸಾಲ ಮನ್ನಾ, ಅಮೃತ ಗ್ರಾಮ ಪಂಚಾಯಿತಿ ಯೋಜನೆ, ಕುಟೀರ ಜ್ಯೋತಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಗ್ರಾಮ ಒನ್ ಕೇಂದ್ರಗಳ ಸ್ಥಾಪನೆ, ಜನಸೇವಕ ಯೋಜನೆ, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲ ಸಮುದಾಯಗಳ ಏಳಿಗೆಗಾಗಿ ಅನೇಕ ಜನಪರ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್. ಆಕಾಶ್, ಹೆಚ್ಚವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net