

ಸುನಿಲ್ ಪೊನ್ನೇಟಿ ಮಡಿಕೇರಿ
೨೦೨೩ ನೆನಪಿನ ಪುಟಗಳಿಗೆ ಸೇರಿ ಹೋಗುತ್ತಿದೆ. ೨೦೨೪ರ ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಸ್ವಾಗತಿಸಲಾಗಿದೆ. ಒಂದಿಷ್ಟು ಸಿಹಿ-ಕಹಿಗಳೊಂದಿಗೆ ಕಳೆದು ಹೋದ ಹಳೆಯ ವರ್ಷ ಅನುಭವಗಳ ಗಂಟು ಕಟ್ಟಿಕೊಟ್ಟು ಹೋಗಿದೆ. ಈ ಅನುಭವಗಳ ಆಧಾರದಲ್ಲೇ ಮುಂದಿನ ಹೆಜ್ಜೆಗಳನ್ನು ಇಡುವ ದೃಢ ಸಂಕಲ್ಪ ತೆಗೆದುಕೊಳ್ಳಲು ಇದು ಸಕಾಲ. ಜತೆಗೆ ಹಲವು ನಿರೀಕ್ಷೆಗಳನ್ನು ಹೊಸ ವರ್ಷ ಮೂಡಿಸಿದೆ.
ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎನ್ನುವುದು ಇಲ್ಲಿಯ ಕ್ರೀಡಾಭಿಮಾನಿಗಳ ಅಭಿಲಾಷೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕ್ರೀಡಾ ವಿವಿ ಸ್ಥಾಪನೆಯ ಪ್ರಸ್ತಾಪ ಆಯಿತಾದರೂ ಸ್ಥಳ ನಿಗದಿಯಾಗದೇ ನೆನೆಗುದಿಗೆ ಬಿದ್ದಂತಿದೆ. ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೂ ಕೊಡಗಿಗೆ ಕ್ರೀಡಾ ವಿವಿ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಿಸಿಕೊಂಡರೂ ದೇಶದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಜಿಲ್ಲೆ ಎನ್ನುವ ಹಣೆಪಟ್ಟಿ ಕೊಡಗಿಗೆ ಇನ್ನೂ ಅಂಟಿಕೊಂಡೇ ಇದೆ. ಇದನ್ನು ಹೋಗಲಾಡಿಸಲು ನಡೆಯುತ್ತಿರುವ ಪ್ರಯತ್ನಗಳು ಈಗಲೂ ಫಲಕೊಟ್ಟಿಲ್ಲ. ಸಂಸದ ಪ್ರತಾಪ್ ಸಿಂಹ ಪ್ರಯತ್ನ ಮುಂದುವರಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಈ ಹೊಸ ವರ್ಷದಲ್ಲಾದರೂ ರೈಲ್ವೆ ಸಂಪರ್ಕ ಕಲ್ಪಿಸುವ ಪ್ರಯತ್ನಕ್ಕೆ ಜಯ ಸಿಗಬಹುದು ಎನ್ನುವ ಆಶಾಭಾವನೆ ಇಟ್ಟುಕೊಳ್ಳಲಾಗಿದೆ.
ಪ್ರವಾಸೋದ್ಯಮದಲ್ಲಿ ಹೆಸರು ಮಾಡಿರುವ ಕೊಡಗಿಗೆ ವಾಯುಯಾನ ಸೌಲಭ್ಯ ಇದ್ದರೆ ಇಲ್ಲಿಗೆ ದೇಶ-ವಿದೇಶದಿಂದ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಇತರ ಉದ್ಯಮಗಳ ಬೆಳವಣಿಗೆಗೂ ಅವಕಾಶ ಸಿಕ್ಕಿ ಉದ್ಯೋಗವಕಾಶ ಹೆಚ್ಚಾಗಲಿದೆ. ಆದರೆ ಮಿನಿ ವಿಮಾನ ನಿಲ್ದಾಣದ ಕನಸು ಟೇಕ್ ಆಫ್ ಆಗುತ್ತಲೇ ಇಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಕೊಡಗಿನಲ್ಲಿ ಏರ್‌ಸ್ಟ್ರಿಪ್ ನಿರ್ಮಾಣದ ಪ್ರಸ್ತಾಪ ಮಾಡಲಾಗಿದೆ. ಇದಕ್ಕಾಗಿ ಕುಶಾಲನಗರ ತಾಲೂಕು ಕೂಡಿಗೆಯಲ್ಲಿ ೧೩೯ ಎಕರೆ ಜಾಗವನ್ನೂ ಮೀಸಲಿರಿಸಲಾಗಿದೆ. ೨೦೨೪ರಲ್ಲಾದರೂ ಈ ವಿಷಯದಲ್ಲಿ ಪ್ರಗತಿ ಸಾಧಿಸಬಹುದು ಎನ್ನುವ ನಿರೀಕ್ಷೆ ಇದೆ.
ಕೊಡಗಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಕಾಲೇಜಿಗೆ ಸಂಬಂಧಿಸಿದಂತೆ ಬೋಧಕ ಆಸ್ಪತ್ರೆ ಇದೆ. ಈಗ ಸುಸಜ್ಜಿತ ಕಟ್ಟಡವೂ ನಿರ್ಮಾಣ ಆಗಿದೆ. ಆದರೆ ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆ ಬೇಕೆಂದರೆ ಹೊರಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳುವುದು ಅನಿವಾರ್ಯ. ಇದರಿಂದಾಗಿ ಸಮಯ ವ್ಯರ್ಥವಾಗುವುದಲ್ಲದೆ ’ಗೋಲ್ಡನ್ ಹವರ್’ನಲ್ಲಿ ಸಿಗಬೇಕಾದ ಚಿಕಿತ್ಸೆ ಸಿಗದೆ ಸಾವು ಕೂಡ ಸಂಭವಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಗೆ ಈ ವರ್ಷವಾದರೂ ಕಾಲ ಕೂಡಿಬರಲಿ ಎನ್ನುವ ಪ್ರಾರ್ಥನೆ ಸ್ಥಳೀಯರದ್ದು.
ಕೊಡವರ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ, ಪದ್ಧತಿ-ಪರಂಪರೆ ಸಂರಕ್ಷಣೆಗೋಸ್ಕರ ನಿರ್ಮಿಸಲಾಗುತಿರುವ ಕೊಡವ ಹೆರಿಟೇಜ್ ಸೆಂಟರ್ ಇನ್ನೂ ನಿರ್ಮಾಣ ಹಂತದಲ್ಲೇ ಇದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳಿಗೋಸ್ಕರ ನಿರ್ಮಾಣ ಮಾಡಲಾಗುತ್ತಿರುವ ಕನ್ನಡ ಸಮುಚ್ಛಯ ಭವನ ಕಾಮಗಾರಿ ಕುಂಟುತ್ತಿದೆ. ಈ ವರ್ಷವಾದರೂ ಈ ಎರಡು ಕಟ್ಟಡಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಶೇ.೩೩ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಸಾಮಾನ್ಯ ಎಂಬಂತಾಗಿದೆ. ಆನೆಗಳು ಮಾತ್ರವಲ್ಲದೆ ಎಲ್ಲಾ ಬಗೆಯ ವನ್ಯ ಜೀವಿಗಳು ವಸತಿ ಪ್ರದೇಶಗಳಿಗೆ ನುಗ್ಗುವುದರಿಂದ ಮನುಷ್ಯನಿಗೆ ಮಾತ್ರ ಸಮಸ್ಯೆ ಆಗುತ್ತಿಲ್ಲ. ಜೀವಜಗತ್ತಿನ ಅಮೂಲ್ಯ ಸಂಪತ್ತಾಗಿರುವ ವನ್ಯಜೀವಿಗಳಿಗೂ ಹಾನಿ ಆಗುತ್ತಿದೆ. ಈ ನಿಟ್ಟಿನಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮುಕ್ತಿ ಹಾಡಲು ಶಾಶ್ವತ ಪರಿಹಾರವೊಂದರ ಅಗತ್ಯವಿದ್ದು, ಹೊಸ ವರ್ಷದಲ್ಲಿ ಸಕರಾತ್ಮಕ ಪ್ರಯತ್ನಗಳು ನಡೆಯಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.
ಸತತವಾಗಿ ಅತಿವೃಷಿಗೆ ಒಳಗಾಗುತ್ತಿದ್ದ ಕೊಡಗು ೨೦೨೩ರಲ್ಲಿ ಮಳೆಯ ಕೊರತೆಗೆ ಸಾಕ್ಷಿ ಆಗಿದೆ. ಬರಗಾಲ ಪೀಡಿತ ಪ್ರದೇಶ ಎಂದು ಅಧಿಕೃತವಾಗಿ ಸರ್ಕಾರದಿಂದ ಘೋಷಣೆ ಆಗಿದೆ. ಬರ ಪರಿಹಾರಕ್ಕೆಂದು ಸದ್ಯಕ್ಕೆ ೭.೫ ಕೋಟಿ ರೂ. ಅನುದಾನ ಕೊಡಗಿಗೆ ಬಂದಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಭತ್ತ, ಕರಿಮೆಣಸು ಮಳೆಯಿಲ್ಲದ ಕಾರಣ ನೆಲಕ್ಕಚ್ಚಿದ್ದು ಸರ್ಕಾರ ಸಂಕಷ್ಟದಲ್ಲಿ ಇರುವ ರೈತರ ನೆರವಿಗೆ ನಿಲ್ಲಬೇಕಿದೆ. ಇದರ ಜತೆಗೆ ಭವಿಷ್ಯದಲ್ಲಿ ಪ್ರವಾಹ, ಭೂಕುಸಿತದಂತಹ ಅನಾಹುತಗಳಿಂದ ಜಿಲ್ಲೆಯ ಜನರನ್ನು ರಕ್ಷಿಸಲು ಶಾಶ್ವತ ಯೋಜನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ೨೦೨೪ರಲ್ಲಿ ನಿರೀಕ್ಷೆ ದೊಡ್ಡದಿದೆ.
ಕಾಫಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ. ಆದರೆ ಅತಿವಷ್ಟಿ, ಅನಾವಷ್ಟಿ, ಅಕಾಲಿಕ ಮಳೆ, ಕೂಲಿಕಾರ್ಮಿಕರ ಕೊರತೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದಿಂದ ಬೆಳೆಗಾರರು ಕಂಗೆಟ್ಟು ಹೋಗಿದ್ದಾರೆ. ಹಾಗಾಗಿ ಕಾಫಿ ಕಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ನೆರವಿಗೆ ನಿಲ್ಲಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರಿದ್ದಾರೆ. ಇತರ ಜಿಲ್ಲೆಗಳಲ್ಲಿ ರೈತರಿಗೆ ಕಷಿ ಉದ್ದೇಶಕ್ಕೆ ಉಚಿತ ವಿದ್ಯುತ್ ಇದೆ. ಆದರೆ ಕೊಡಗಿನ ಕಾಫಿ ಬೆಳೆಗಾರರು ಹಣ ಕೊಟ್ಟು ವಿದ್ಯುತ್ ಬಳಸಬೇಕು. ೧೦ ಹೆಚ್.ಪಿ. ತನಕದ ಮೋಟಾರ್‌ಗಳಿಗೆ ಉಚಿತ ವಿದ್ಯುತ್ ಕೊಡಬೇಕು ಎನ್ನುವ ಬೇಡಿಕೆಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ಕಟ್ಟಿದ ಮೊತ್ತ ಡಿಬಿಟಿ ಮೂಲಕ ಮರುಪಾವತಿಗೆ ಬೆಳೆಗಾರರ ವಿರೋಧ ಇದೆ. ಹಾಗಾಗಿ ಸರ್ಕಾರದ ಪರ್ಯಾಯ ನಿರ್ಧಾರದ ಆಶಾಭಾವನೆಯಲ್ಲಿ ಬೆಳೆಗಾರರು ಇದ್ದಾರೆ.
ಕಾಫಿ ಬೆಳೆ ಕೊಡಗಿನ ಆರ್ಥಿಕತೆಯ ಪ್ರಮುಖ ಮೂಲವಾದರೂ ಜಿಲ್ಲೆ ಈಗ ಪ್ರವಾಸೋದ್ಯಮವನ್ನೇ ಉಸಿರಾಡುತ್ತಿದೆ. ಪ್ರಾಕತಿಕ ವಿಕೋಪ ಸೇರಿದಂತೆ ಹಲವು ಕಾರಣಗಳಿಂದ ಏರಿಳಿತದ ದಾರಿಯಲ್ಲಿದ್ದ ಇಲ್ಲಿಯ ಪ್ರವಾಸೋದ್ಯಮ ಈಗ ಒಂದು ಹಂತಕ್ಕೆ ತಲುಪಿದೆ. ಆದರೂ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳ ಅಗತ್ಯವಿದೆ. ಪ್ರವಾಸಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ತೆರೆ ಮರೆಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದು, ಪ್ರಕೃತಿಗೆ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುವುದು. ಅನಿಯಂತ್ರಿತ ಹೋಮ್‌ಸ್ಟೇಗಳಿಗೆ ಕಡಿವಾಣ ಹಾಕುವುದು ಮತ್ತಿತರ ಕೆಲಸಗಳು ಈ ಹೊಸ ವರ್ಷದಲ್ಲಿ ಆಗಬೇಕಿದೆ.