ಸಂಕಷ್ಟದಲ್ಲಿ ಕೊಡಗಿನ ಜೇನು ಕೃಷಿಕರು

Kodagu honey farmers in trouble
Published on

ಮಡಿಕೇರಿ:

ಹಿಂದೊಂದು ಕಾಲ ಇತ್ತು. ಕೊಡಗು ಎಂದ ಕೂಡಲೇ ರುಚಿಯಾದ ಕಿತ್ತಳೆ, ಘಮ ಘಮಿಸುವ ಏಲಕ್ಕಿ ಹಾಗೂ ಸವಿಯಾದ ಜೇನು ಕಣ್ಣುಮುಂದೆ ಬರುತ್ತಿತ್ತು. ಈಗಿನಂತೆ ಪ್ರವಾಸಿಗರ ದಟ್ಟಣೆ ಇರದಿದ್ದ ಆ ಸಮಯದಲ್ಲಿ ಜಿಲ್ಲೆಗೆ ಬರುತ್ತಿದ್ದ ಸೀಮಿತ ಸಂಖ್ಯೆಯ ಪ್ರವಾಸಿಗರು ಮರಳುವಾಗ ನೆನಪಿಗೆಂದು ಏಲಕ್ಕಿ, ಜೇನು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ದೂರದ ಊರುಗಳ ಬಂಧುಗಳಿಗೆ ಕೊಡಲೆಂದೇ ಸ್ಥಳೀಯರು ವರ್ಷದಲ್ಲಿ ಇಂತಿಷ್ಟು ಎಂದು ಏಲಕ್ಕಿ, ಜೇನು ತೆಗೆದು ಇಡುತ್ತಿದ್ದದ್ದು ಕೂಡ ಇತ್ತು. ಆದರೆ ಇವೆಲ್ಲಾ ಈಗ ಕೇವಲ ನೆನಪು ಮಾತ್ರ.

ಸವಿರುಚಿಯ ಪರಿಶುದ್ಧ ಕೊಡಗು ಜೇನು ತುಪ್ಪಕ್ಕೆ ಅದರದ್ದೇ ಆದ ಹೆಸರಿದೆ. ಔಷಧ, ಆಹಾರ ಸೇರಿದಂತೆ ಹಲವು ಉದ್ದೇಶಗಳಿಗೆ ದೇಶ, ವಿದೇಶದಲ್ಲೂ ಜಿಲ್ಲೆಯ ಜೇನು ತುಪ್ಪ ಬಳಸಲಾಗುತ್ತದೆ. ಅದರಲ್ಲೂ ಡಿಸೆಂಬರ್ ತಿಂಗಳ ಜೇನಿನ ಸವಿ ಒಮ್ಮೆ ಗೊತ್ತಾದರೆ ಮತ್ತದೇ ಜೇನಿಗೆ ಮನಸ್ಸು ಹಾತೊರೆಯುತ್ತದೆ. ಈ ಸಮಯದಲ್ಲಿ ಭತ್ತದ ಹೂವುಗಳಿಂದ ಜೇನು ನೊಣಗಳು ಜೇನು ತಯಾರಿಸುವುದರಿಂದ ಇದ ವಿಶಿಷ್ಟವಾದ ಸ್ವಾಧ ಹೊಂದಿರುತ್ತದೆ.
ಕೊಡಗಿನ ಕಿತ್ತಳೆ ಜಾಗಕ್ಕೆ ಈಗ ಹೊರರಾಜ್ಯದ ಕಿತ್ತಳೆ ಬಂದು ಕುಳಿತಿದೆ. ಏಲಕ್ಕಿ ತೋಟವನ್ನು ಕಾಫಿ, ಶುಂಠಿ ಆಕ್ರಮಿಸಿಕೊಂಡಿದೆ. ನಕಲಿ ಜೇನನ್ನೇ ಸವಿ ಜೇನು ಎಂದು ಮಾರುವ ಸ್ಥಿತಿಗೆ ತಲುಪಲಾಗಿದೆ. ಭಾಗಮಂಡಲದ ಜೇನು ಕೃಷಿಕರ ಸಹಕಾರ ಸಂಘದಿಂದ ಮಾರುಕಟ್ಟೆಗೆ ಬರುತ್ತಿರುವ ’ಕೂರ್ಗ್ ಹನಿ’ ಕೂಡ ಕೊಡಗಿನ ಜೇನು ಅಲ್ಲ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಷಯವೇ ಆಗಿದೆ.

ಕೊಡಗು ಸಿ ರಾಜ್ಯವಾಗಿದ್ದ ಕಾಲದಲ್ಲೇ ಸರ್ಕಾರದಲ್ಲಿ ಜೇನು ಕೃಷಿಗೆ ಪ್ರತ್ಯೇಕ ಇಲಾಖೆ ಇತ್ತು. ನಂತರ ಇದನ್ನು ಕೈಗಾರಿಕಾ ಇಲಾಖೆಯೊಂದಿಗೆ ಸೇರಿಸಲಾಯಿತು. ೨೦೧೧ರಲ್ಲಿ ತೋಟಗಾರಿಕಾ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ. ಅಲ್ಲಿಂದ ಈಚೆಗೆ ಜೇನು ಕೃಷಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸಿಬ್ಬಂದಿ ನೇಮಕ ನಡೆದಿಲ್ಲ. ಹಾಗಾಗಿ ಸರ್ಕಾರದ ಮಟ್ಟದಲ್ಲೂ ಜೇನು ಕೃಷಿಗೆ ಹಿನ್ನಡೆ ಆಗಿದೆ.

೯೦ರ ದಶಕದಲ್ಲಿ ಜೇನುಹುಳುಗಳ ಲಾರ್ವಾಗಳಿಗೆ ತಗುಲಿದ ಥಾಯಿಸಾಕ್ ಬ್ರೂಡ್ ಮಾರಣಾಂತಿಕ ಕಾಯಿಲೆ ಕೊಡಗಿನ ಜೇನು ಕೃಷಿಗೆ ದೊಡ್ಡ ಹೊಡೆತವನ್ನೇ ನೀಡಿತು. ನಂತರ ಕೃಷಿಕರ ಸತತ ಪ್ರಯತ್ನ, ಹೊಸ ಹೊಸ ತಳಿಗಳ ಪ್ರಯೋಗ, ಅಧಿಕಾರಿಗಳು, ತಜ್ಞರ ಮಾರ್ಗದರ್ಶನದಿಂದ ಜೇನು ಕೃಷಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದ್ದರೂ ಬೇಡಿಕೆಗೆ ತಕ್ಕಂತೆ ಜೇನಿನ ಉತ್ಪಾದನೆ ಆಗುತ್ತಿಲ್ಲ.

ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ೧೨,೦೫೦ ಜೇನುಕೃಷಿಕರು ಇದ್ದಾರೆ. ೬೫ ಸಾವಿರ ಜೇನು ಪೆಟ್ಟಿಗೆಗಳು ಇವೆ. ಒಂದು ಪೆಟ್ಟಿಗೆಯಿಂದ ಸರಾಸರಿ ೫ ಕೆ.ಜಿ. ಜೇನು ಸಿಗುತ್ತದೆ. ವಾರ್ಷಿಕವಾಗಿ ಸುಮಾರು ೧೬.೨೫ ಕೋಟಿ ಮೌಲ್ಯದ ೩ ಲಕ್ಷದ ೨೫ ಸಾವಿರ ಕೆ.ಜಿ ಉತ್ಪಾದನೆ ಆಗುತ್ತಿದೆ. ಜಿಲ್ಲೆಯಲ್ಲಿ ಜೇನು ಕೃಷಿಗೆ ಮತ್ತೆ ಪುನಶ್ಚೇತನ ಕೊಡಲು ಏನು ಮಾಡಬಹುದು ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

ಜೇನುಕೃಷಿಯನ್ನು ಪ್ರಕೃತಿಯೇ ರಕ್ಷಣೆ ಮಾಡಬೇಕು. ಪ್ರತಿ ವರ್ಷ ಅಕಾಲಿಕ ಮಳೆಯಿಂದ ಜೇನು ನೊಣಗಳಿಗೆ ಪುಷ್ಪರಸದ ಕೊರತೆಯಾಗುತ್ತಿದೆ. ರೋಗಬಾಧೆಯಿಂದಲೂ ಜೇನು ನೊಣಗಳ ಸಾಯುತ್ತಿವೆ. ರೋಗಬಾಧೆಗೆ ಇದುವರೆಗೆ ಸೂಕ್ತ ಔಷಧಿಯನ್ನು ಕಂಡು ಹಿಡಿದಿಲ್ಲ. ರೋಗಭಾದೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಜೇನು ಕೃಷಿಕರಿಗೆ ಪರಿಹಾರ ಕಲ್ಪಿಸಿದರೆ, ಕೃಷಿ ಮುಂದುವರಿಸಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ.
ಎಸ್.ಟಿ. ಉತ್ತಯ್ಯ, ಜೇನು ಕೃಷಿಕ, ಇನಕನಹಳ್ಳಿ ಗ್ರಾಮ

ಸೋಮವಾರಪೇಟೆ ತಾಲೂಕು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚಿನ ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ರೋಗಬಾಧೆಯಿಂದ ಪೆಟ್ಟಿಗೆಯಿಂದ ಜೇನು ನೊಣ ಖಾಲಿಯಾಗಿದೆ. ಜೇನು ಬೆಕ್ಕು ಕಾಟವಿದೆ. ಸರ್ಕಾರ ಉಚಿತವಾಗಿ ಜೇನುಪೆಟ್ಟಿಗೆ ಮತ್ತು ಜೇನು ನೊಣ ಕುಟುಂಬ ಕೊಡಬೇಕು. ಕೃಷಿಕರಿಗೆ ಬಡ್ಡಿ ರಹಿತ ಸಾಲ ಹಾಗು ಸಹಾಯಧನ ಒದಗಿಸಬೇಕು. ಜೇನು ಲಾಭದಾಯಕವಾದರೆ, ಉತ್ಪಾದನೆ ಹೆಚ್ಚಾಗುತ್ತದೆ.
ಎಂ.ಎಚ್. ಲೀಲಾ, ರೈತ ಮಹಿಳೆ, ಹೆಗ್ಗಡಮನೆ ಗ್ರಾಮ

ಜೇನಿಗೆ ಮುಖ್ಯವಾಗಿ ಬೇಕಿರುವುದು ಹೂವುಗಳು. ಅದರಲ್ಲಿಯೂ ಕಾಡುಮರಗಳ ಹೂವು ಉತ್ತಮ. ಮೊದಲು ಯಥೇಚ್ಛವಾಗಿ ಮರಗಳು ಇದ್ದವು. ಇಂದು ನಾವು ಮರಗಳನ್ನು ಕಡಿಯುತ್ತಿದ್ದೇವೆ. ಇದರಿಂದ ಜೇನಿಗೆ ಮಕರಂದ ಸಿಗುತ್ತಿಲ್ಲ. ಕಾಡು ಮರಗಳನ್ನು ಹೆಚ್ಚಾಗಿ ಬೆಳೆಸಿದರೆ ಜೇನು ಉತ್ಪತಿ ತನ್ನಿಂತಾನೆ ಹೆಚ್ಚಾಗುತ್ತದೆ.
ಚಿರಿಯಪಂಡ ರಾಜಾ ನಂಜಪ್ಪ, ಮಾಜಿ ಅಧ್ಯಕ್ಷ, ಕೊಡಗು ಜೇನು ಮತ್ತು ಮೇಣ ಸಹಕಾರ ಸಂಘ, ವಿರಾಜಪೇಟೆ

ಪರಿಶಿ?್ಟ ಪಂಗಡದ ಅರಣ್ಯದಲ್ಲಿ ವಾಸಿವಿರುವ ಜೇನು ಕುರುಬ ಮತ್ತು ಎರವ ಸಮುದಾಯಗಳಲ್ಲಿ ಜೀವನೋಪಾಯಕ್ಕಾಗಿ ಆರ್ಥಿಕ ಸ್ವಾವಲಂಬನೆಯನ್ನು ಕಟ್ಟಿಕೊಳ್ಳಲು ಜೇನು ಕೃಷಿಯನ್ನು ಕೈಗೊಳ್ಳಲು ಹಾಗೂ ಜೇನುತುಪ್ಪವನ್ನು ಸಂಗ್ರಹಿಸಲು ಪರಿಶಿ?್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ’ವನದನ ವಿಕಾಸ’ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ಸದರಿ ಕೇಂದ್ರಗಳಿಗೆ ಆರ್ಥಿಕ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿರುತ್ತದೆ.
ಎ.ಎಂ. ನವೀನ ಕುಮಾರ್, ಪರಿಶಿ?್ಟ ವರ್ಗಗಳ ಕಲ್ಯಾಣ ಅಧಿಕಾರಿ, ಪೊನ್ನಂಪೇಟೆ

ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಮಾಡಲು ಅನೇಕರಲ್ಲಿ ಆಸಕ್ತಿ ಇದ್ದರು ಸಹ ಹೂ ಎಲ್ಲೂ ಸರಿಯಾಗಿ ಅರಳುತಿಲ್ಲ. ಶುಂಠಿ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಕೀಟನಾಶಕಗಳನ್ನು ಬಳಕೆ ಮಾಡುತ್ತಿರುವುದರಿಂದ ಜೇನುಹುಳುಗಳ ಸಾವನ್ನಪ್ಪುತಿದೆ. ಕೀಟನಾಶಕದ ಬಳಕೆ ಕಡಿಮೆ ಮಾಡಬೇಕು. ಜೇನು ಕೃಷಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸರ್ಕಾರದ ಮಟ್ಟದಲ್ಲಿ ಆಗಬೇಕು.
ಡಿ.ಎಸ್. ಮಧುಕುಮಾರ್, ಶಿಕ್ಷಕ, ಶನಿವಾರಸಂತೆ

ಕೊಡಗಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೆಲವು ಜೇನು ಕುಟುಂಬಗಳು ರೋಗಬಾಧೆಗೆ ಒಳಗಾಗದೆ ಉತ್ತಮ ಸ್ಥಿತಿಯಲ್ಲಿದೆ. ಅಂತಹ ಜೇನು ಕುಟುಂಬಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ, ಸಂರಕ್ಷಿಸಿದರೆ ಜೇನಿನ ಉತ್ಪಾದನೆ ಹೆಚ್ಚಿಸಬಹುದು. ಮಳೆಗಾಲದಲ್ಲಿ ಕೃತಕ ಆಹಾರ ಕೊಡುವಾಗ ನಾಟಿ ಅರಸಿನ ಪುಡಿ ಬೆರೆಸಿ ಕೊಡುವುದರಿಂದ ಥಾಯ್‌ಸಾಕ್ ಬ್ರೂಡ್ ಕಾಯಿಲೆ ನಿಯಂತ್ರಿಸಬಹುದು.
ಎಂ.ಜಿ. ಸುಬ್ರಹ್ಮಣ್ಯ ಭಟ್, ಜೇನು ಕೃಷಿಕ, ದೇವರಕೊಲ್ಲಿ

ಕೃಷಿಯಲ್ಲಿ ಏರುಪೇರು ಇದ್ದಿದ್ದೇ. ಒಂದು ಕಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದ ಜೇನು, ರೋಗಕ್ಕೆ ತುತ್ತಾಗಿ ಇಳುವರಿಯೂ ಕಡಿಮೆ ಆಗಿದೆ. ಸರ್ಕಾರ ಸೂಕ್ತ ಯೋಜನೆಗಳು ಮತ್ತು ಪ್ರೋತ್ಸಾಹ ನೀಡಿದರೆ ಕೊಡಗಿನ ಜೇನು ಮತ್ತೆ ತನ್ನ ರಾಜವೈಭೋಗವನ್ನು ಪಡೆಯುವಲ್ಲಿ ಅನುಮಾನವಿಲ್ಲ.
ಹಾಸ್ಯ ಉಗ್ರಾಣಿ, ಗೋಣಿಕೊಪ್ಪ

ಜೇನು ಕೃಷಿಗೆ ನಮ್ಮ ಇಲಾಖೆಯಿಂದ ಪ್ರೋತ್ಸಾಹ ಕೊಡಲಾಗುತ್ತಿದೆ. ಆಸಕ್ತ ರೈತರಿಗೆ, ಕಾಲೋನಿಗಳ ನಿವಾಸಿಗಳಿಗೆ ಈ ಸಂಬಂಧ ತರಬೇತಿ ಕೊಡಲಾಗಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಯೋಜನೆಗಳ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು ೧,೫೦೦ ಜೇನು ಪೆಟ್ಟಿಗೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಜೇನು ಕೃಷಿಕರಿಗೆ ಅಧ್ಯಯನ ಪ್ರವಾಸವನ್ನೂ ನಡೆಸಲಾಗಿದೆ. ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ತಜ್ಞರ ಜತೆ ಸಂವಾದ ಏರ್ಪಡಿಸಿ ಮಾಹಿತಿ ಕೊಡಿಸಲಾಗಿದೆ. ರಾಜ್ಯ ಸರ್ಕಾರ ಇಲ್ಲಿಉ ಜೇನನ್ನು ಬ್ರ್ಯಾಂಡ್ ಮಾಡಲು ಯೋಜನೆ ರೂಪಿಸಿದ್ದು, ಇದರ ಅಡಿಯಲ್ಲೂ ವಿವಿಧ ಸವಲತ್ತು ಕಲ್ಪಿಸಲಾಗುತ್ತಿದೆ.
ಎಚ್.ಆರ್. ಯೋಗೇಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಕೊಡಗು

ನಮ್ಮ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಜೇನು ಕೃಷಿ ಉಸಿರಾಡುತ್ತಿದೆ. ನಕಲಿ ಜೇನುಗಳ ಹಾವಳಿ ಎದುರು ನಮ್ಮಲ್ಲಿ ಉತ್ಪಾದನೆ ಆಗುವ ಪರಿಶುದ್ಧ ಜೇನು ಪೈಪೋಟಿ ಕೊಡಲು ಕಷ್ಟವಾಗುತ್ತಿದೆ. ಆದಷ್ಟು ಬೇಗ ಕೊಡಗಿನ ಜೇನು ಬ್ರ್ಯಾಂಡಿಂಗ್ ಮಾಡಬೇಕು. ರೋಗನಿರೋಧಕ ಶಕ್ತಿ ಇರುವ ಜೇನು ನೊಣಗಳನ್ನು ಅಭಿವೃದ್ಧಿ ಪಡಿಸಿ ಜೇನು ಕೃಷಿಕರಿಗೆ ಕೊಡಬೇಕು. ನಕಲಿ ಜೇನು ಉತ್ಪಾದಕರು ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೇನು ಕೃಷಿಕರಿಗೆ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಕೊಡಬೇಕು.
ಸಿರಕಜೆ ಲೋಕಪ್ರಕಾಶ್, ಜೇನು ಕೃಷಿಕ ತಲಕಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net