

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಜೇನು ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಇಂದಿಗೂ ಉತ್ತಮ ಬೇಡಿಕೆ ಇದೆ. ಕೊಡಗಿನ ಜೇನಿನ ಬಗ್ಗೆ ಗ್ರಾಹಕರಲ್ಲಿ ಇರುವ ಸದಾಭಿಪ್ರಾಯ ದುರುಪಯೋಗ ಪಡಿಸಿಕೊಂಡು ಕೂರ್ಗ್ ಹನಿ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸಲಾಗುತ್ತಿದೆ. ೩ ದಶಕದಿಂದ ಕೊಡಗಿನ ಜೇನು ಕಣ್ಮರೆಯಾಗಿದೆ ಎಂಬ ಸತ್ಯವನ್ನು ಗ್ರಾಹಕರಿಂದ ಮರೆಮಾಚಲಾಗಿದೆ.
ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಕೊಡಗಿನ ಜೇನಿನ ಪ್ರಖ್ಯಾತಿ ಕೇಳಿ ತಿಳಿದುಕೊಂಡಿರುವವರು ಕೂರ್ಗ್ ಹನಿ ಖರೀದಿಗೆ ಮುಗಿಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಆದರೆ, ಬಹುತೇಕ ಜನರಿಗೆ ಗೊತ್ತಿಲ್ಲದ ವಿಷಯ ಎಂದರೆ ಕೊಡಗಿನ ಜೇನು ಹೆಸರು ದುರ್ಬಳಕೆ ಮಾಡಿಕೊಂಡು ಹೊರಗಿನ ಜೇನು ಮಾರಾಟ ಮಾಡುತ್ತಿರುವುದು.
೧೯೯೦ ರವರೆಗೂ ಕೊಡಗಿನ ಜೇನು ತುಪ್ಪು ಲಭ್ಯವಾಗುತ್ತಿತ್ತು. ಕೊಡಗಿನ ಜೇನು ಗತವೈಭವ ಕಳೆದುಕೊಂಡಿದ್ದರೂ, ಬ್ರಾೃಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟದ ಹೆಸರಿನಲ್ಲಿ ಕೊಡಗಿನಿಂದ ಜೇನು ಖರೀದಿಸಿ ತಮಗೆ ಗೊತ್ತಿಲ್ಲದೆ ಮೋಸ ಹೋಗುತ್ತಿದ್ದಾರೆ. ೧೯೯೧ ರಲ್ಲಿ ಜೇನಿಗೆ ಕಾಣಿಸಿಕೊಂಡ ವೈರಸ್‌ನಿಂದ ಸಂತತಿ ಬೆಳವಣಿಗೆ ಕುಂಠಿತಗೊಂಡಿತ್ತು. ಜೇನು ನೊಣ ಹಾಕಿದ ಮೊಟ್ಟೆ ಕೊಳತೆ ಹೋಗು ವ ಮಾರಕ ವೈರಸ್‌ಗೆ ಕೊಡಗಿನ ಜೇನು ತುತ್ತಾಗಿದೆ.
೧೯೯೦ ಕ್ಕೂ ಮೊದಲು ಕೊಡಗಿನಲ್ಲಿ ೧೩ ಸಾವಿರಕ್ಕೂ ಹೆಚ್ಚು ಜೇನು ಕೃಷಿಕರು ಇದ್ದಾರೆ. ೬೦ ಸಾವಿರ ಜೇನು ಕುಟುಂಬಗಳಿದ್ದವು. ಪ್ರಸ್ತುತ ಶೇ.೯೫ ರಷ್ಟು ಜೇನು ಕುಟುಂಬಗಳ ನಾಶಗೊಂಡಿವೆ ಎಂದು ನಿವೃತ್ತ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ಬಾರಿಕೆ ವೆಂಕಟರಮಣ್ಣ ಹೇಳುತ್ತಾರೆ.
ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶ, ದಟ್ಟಾರಣ್ಯಗಳು ಕಾಫಿ ತೋಟವಾಗಿ ಮಾರ್ಪಟ್ಟಿತ್ತು. ಇದರೊಂದಿಗೆ ಕಾಣಿಸಿಕೊಂಡ ಮಾರಕ ರೋಗದ ಹಿನ್ನೆಲೆಯಲ್ಲಿ ಜೇನು ಕೃಷಿಯಿಂದ ವಿಮುಖರಾದರು. ಗತಕಾಲದಲ್ಲಿ ಭಾಗಮಂಡಲ, ಶಾಂತಳ್ಳಿ, ಬಿರುನಾಣಿ ಸೇರಿದ್ದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜೇನು ಕೃಷಿಗೆ ಪ್ರಖ್ಯಾತಿ ಹೊಂದಿತ್ತು.
ಉತ್ತರ ಭಾರತದ ಜೇನು
ಜೇನು ಕೃಷಿಕರ ಸಹಕಾರ ಸಂಘ ಹೇರಳ ಪ್ರಮಾಣದಲ್ಲಿ ಬಿಹಾರ, ಜಾರ್ಖಂಡ್, ಹರ್ಯಾಣ ಸೇರಿದ್ದಂತೆ ಉತ್ತರ ಭಾರತದ ರಾಜ್ಯಗಳಿಂದ ಜೇನು ತುಪ್ಪು ಖರೀದಿಸುತ್ತಿದ್ದಾರೆ. ಕೇರಳ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಯಿಂದ ಜೇನು ತುಪ್ಪ ಖರೀದಿಸಲಾಗುತ್ತದೆ. ವಿವಿಧೆಡೆಯಿಂದ ಖರೀದಿಸಿದ ೪ ರೀತಿಯ ಜೇನು ತುಪ್ಪವನ್ನು ಸೇರಿಸಿ ಕೂರ್ಗ್ ಹನಿ ಸಿದ್ಧ ಪಡಿಸಲಾಗುತ್ತಿದೆ.
ಉತ್ತರ ಭಾರತದ ಜೇನಿಗೆ ಕೊಡಗಿನ ಜೇನು ಎಂದು ಮಾರುಕಟ್ಟೆಯಲ್ಲಿ ಬಿಂಬಿಸಿಕೊಂಡು ವ್ಯಾಪಾರ- ವಹಿವಾಟು ನಡೆಸುತ್ತಿದ್ದಾರೆ. ದೊಡ್ಡ ಪ್ರಮಾಣದ್ದಲ್ಲಿ ಉತ್ತರ ಭಾರತದಿಂದ ಜೇನು ತುಪ್ಪು ತುಂಬಿಕೊಂಡು ಬಂದಿದ್ದ ವಾಹನ ಮಡಿಕೇರಿ- ಕುಶಾಲನಗರ ಮಾರ್ಗದ ಬೋಯಿ ಕೇರಿಯಲ್ಲಿ ಇತ್ತೀಚೆಗೆ ಮಗುಚಿಕೊಂಡಿತ್ತು.
೨ ಲಕ್ಷ ಕೆಜಿ ಮಾರಾಟ
ಜೇನು ಕೃಷಿಕರ ಸಹಕಾರ ಸಂಘ ಪ್ರಸ್ತುತ ವಾರ್ಷಿಕವಾಗಿ ಬರೋಬರಿ ೨ ಲಕ್ಷ ಕೆಜಿಯಷ್ಟು ಜೇನು ಕೂರ್ಗ್ ಹನಿ ಬ್ರಾೃಂಡ್‌ನಲ್ಲಿ ಮಾರಾಟ
ಮಾಡುತ್ತಿದೆ. ಕೂರ್ಗ್ ಹನಿಯಲ್ಲಿ ಕೊಡಗಿನ ಜೇನು ಒಂದು ಹನಿ ಕೂಡ ಇಲ್ಲ ಎಂದು ಜೇನು ಕೃಷಿ ಅಧಿಕಾರಿಯಾಗಿ ೩೮ ವರ್ಷ ಸೇವೆ ಸಲ್ಲಿಸಿರುವ ಭಾಗಮಂಡಲದ ಬಾರಿಕೆ ವೆಂಕಟರಮಣ್ಣ ಹೇಳುತ್ತಾರೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಒಂದು ಕಾಲಘಟ್ಟದಲ್ಲಿ ೮೦ ಕುಟುಂಬಗಳು ಜೇನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಸ್ತುತ ಬೆರಳೆಣಿಕೆಯಷ್ಟು ಜನ ಮಾತ್ರ ಜೇನು ಕೃಷಿ ಮಾಡುತ್ತಿದ್ದಾರೆ. ಆ ಪೈಕಿ ಯಾರೊಬ್ಬರು ಜೇನು ಕೃಷಿಕರ ಸಹಕಾರ ಸಂಘಕ್ಕೆ ಜೇನು ಹಾಕುತ್ತಿಲ್ಲ. ಕೊಡಗಿನ ಜೇನು ಇಲ್ಲದಿದ್ದರೂ, ಕೊಡಗಿನ ಜೇನಿನ ಹೆಸರಿನಲ್ಲಿ ಕೂರ್ಗ್ ಹನಿ ಮಾರಾಟ ಮಾಡಲಾಗುತ್ತಿದೆ.
ಜೇನಿನಲ್ಲಿರುವ ೧೦ ಅಂಶಗಳ ಆಧಾರದಲ್ಲಿ ಗುಣಮಟ್ಟ ನಿರ್ಧರಿಸಲಾಗುತ್ತದೆ. ಆದರೆ, ಪ್ರಸ್ತುತ ಗುಣಮಟ್ಟ ಖಾತ್ರಿ ಪಡಿಸುತ್ತಿರುವ ವ್ಯವಸ್ಥೆ ಬಗ್ಗೆ ಅನುಮಾನ ಮೂಡಿಸಿದೆ. ಕೊಡಗಿನಲ್ಲಿ ಜೇನು ಇಲ್ಲ ಎಂಬ ಸತ್ಯವನ್ನು ಮರೆಮಾಚಿ, ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿರು
ವುದು ಅನ್ಯಾಯ ಎಂದು ಹಲವರು ಕೊರಗುತ್ತಿದ್ದಾರೆ.
ಗಲ್ಲಿಗಲ್ಲಿಯಲ್ಲಿ ಜೇನು ಮಾರಾಟ
ಕೊಡಗಿಗೆ ಬರುವ ಪ್ರವಾಸಿಗರು ಕೊಡಗಿನ ಜೇನು ಕೇಳುತ್ತಿರುವುದರಿಂದ ಜಿಲ್ಲೆಯ ವಿವಿಧೆಡೆಯಲ್ಲಿ ಗಲ್ಲಿಗಲ್ಲಿಯಲ್ಲಿ ನಕಲಿ ಜೇನು ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಸಹಕಾರ ಸಂಸ್ಥೆಯಲ್ಲಿ ನೋಂದಾಯಿತ ಸಂಸ್ಥೆಗಳು ಕೂಡ ಕೊಡಗಿನ ಜೇನು ತುಪ್ಪು ಹೆಸರಿನಲ್ಲಿ ಪ್ರವಾಸಿಗರಿಗೆ ವಂಚಿಸುತ್ತಿದೆ.
ಅಂಗಡಿ- ಮುಂಗಟ್ಟುಗಳಲ್ಲಿ ಇಟ್ಟಿರುವ ನಕಲಿ ಜೇನು ತುಪ್ಪವನ್ನು ಗುಣಮಟ್ಟದ ಕೊಡಗಿನ ಜೇನು ಎಂದು ಪ್ರವಾಸಿಗರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದಾರೆ. ೬೦ ರಿಂದ ೧೫೦ ರೂ.ಗೆ ಜೇನು ತುಪ್ಪು ಖರೀದಿಸಿ ೩೦೦ ರಿಂದ ೩೫೦ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆ ದರಕ್ಕೆ ಸಿಗುತ್ತಿದೆ ಎಂದು ಜನ ನಕಲಿ ಜೇನಿಗೆ ಮಾರುಹೋಗುತ್ತಿದ್ದಾರೆ. ಅಷ್ಟಕ್ಕೂ ಪ್ರವಾಸಿಗರಿಗೆ ಕೊಡಗಿನ ಅಸಲಿ ಜೇನು ಸಿಗುತ್ತಿಲ್ಲ.
ಅಸಲಿ ಜೇನು
ಕೊಡಗಿನ ಹಲವು ಪ್ರದೇಶಗಳಲ್ಲಿ ಇಂದಿಗೂ ಅಲ್ಪಪ್ರಮಾಣದಲ್ಲಿ ಅಸಲಿ ಜೇನು ಉತ್ಪಾದಿಸಲಾಗುತ್ತಿದೆ. ಆದರೆ, ಇದು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಕೊಡಗಿನ ಜೇನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜೇನು ಪೆಟ್ಟಿಗೆ ಇಟ್ಟುಕೊಂಡು ಜೇನು ಕೃಷಿ ಮಾಡುತ್ತಿರುವವರು ೮೦೦ ರಿಂದ ೧೦೦೦ ರೂಪಾಯಿಗೆ ಒಂದು ಬಾಟಲಿ ನೀಡುತ್ತಿದ್ದಾರೆ. ಬೆಂಗಳೂರು ಸೇರಿದ್ದಂತೆ ವಿವಿಧೆಡೆಯಲ್ಲಿ ಇದೇ ಬಾಟಲಿಯನ್ನು ೧,೫೦೦ ರಿಂದ ೨ ಸಾವಿರ ರೂಪಾಯಿಗೆ ಮಾರಾಟ ಮಾಡುವವರು ಇದ್ದಾರೆ.
**
ಕೊಡಗಿನ ಜೇನು ತುಪ್ಪ ಎಂದು ನಂಬಿಸಿ ಕೂರ್ಗ್ ಹನಿ ಹೆಸರಿನಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೊರ ಜಿಲ್ಲೆಯಿಂದ ಕಡಿಮೆ ದರಕ್ಕೆ ಜೇನು ಖರೀದಿಸಿ, ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿರುವುದು ಮತ್ತು ಕಮಿಷನ್ ದಂಧೆ ನಡೆಸುತ್ತಿರುವುದು ಮತ್ತೊಂದು ಅನ್ಯಾಯ. ಕೊಡಗಿನ ಜೇನಿನ ಬಗ್ಗೆ ಬಹುತೇಕ ಗ್ರಾಹಕರಿಗೆ ಅರಿವು ಇಲ್ಲ. ಬಾರಿಕೆ ವೆಂಕಟರಮಣ್ಣ, ನಿವೃತ್ತ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ, ಭಾಗಮಂಡಲ.
**
ಕೊಡಗಿನ ಜೇನು ತುಪ್ಪದ ಹೆಸರಿನಲ್ಲಿ ದಂಧೆ ಮಾಡುವುದರ ಮೂಲಕ ಜೀವನದಿ ಕಾವೇರಿ ಹುಟ್ಟಿದ ಪುಣ್ಯಭೂಮಿಯಲ್ಲಿ ಅನ್ಯಾಯ ಮಾಡ ಲಾಗುತ್ತಿದೆ. ಇನ್ನೂ ಇದನ್ನು ಸಹಿಸಿಕೊಂಡು ಇರಲಾಗದು. ಪ್ರಗತಿಪರ ಜೇನು ಕೃಷಿಕರ ಸಂಘದಲ್ಲಿ ಜೇನು ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಸಾರ್ವಜನಿಕವಾಗಿ ಬಯಲು ಮಾಡುವುದರ ಮೂಲಕ ವಿಜಯವಾಣಿ ಜನಮೆಚ್ಚುಗೆಗೆ ಭಾಜನವಾಗಿದೆ. ಇನ್ನೂ ಹಲವು ವಿಚಾರ ಬೆಳಕಿಗೆ ಬರಬೇಕಾಗಿದೆ. ಕೋಡಿ ಪೊನ್ನಪ್ಪ, ಹಿರಿಯ ಬಿಜೆಪಿ ಮುಖಂಡ, ಕರಿಕೆ.
**
ಕೊಡಗಿನ ಜೇನು ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಇರುವಷ್ಟು ಬೇಡಿಕೆಯನ್ನು ಈಡೇರಿಸಲು ಅಷ್ಟೊಂದು ಜೇನು ಉತ್ಪಾದನೆ ಆಗುತ್ತಿಲ್ಲ. ಅನಿವಾರ್ಯವಾಗಿ ಉತ್ತರಭಾರತ ಸೇರಿದ್ದಂತೆ ವಿವಿಧೆಡೆಯಿಂದ ಜೇನು ತುಪ್ಪು ಖರೀದಿಸಲಾಗುತ್ತಿದೆ. ಹೊರಗಿನ ಜೇನು ಪರಿಷ್ಕರಣೆ ಮಾಡಿ, ಕೂರ್ಗ್ ಹನಿ ಬ್ರಾೃಂಡ್ ಸಿದ್ಧ ಪಡಿಸಲಾಗುತ್ತಿದೆ. ಹೊಸೂರು ಸತೀಶ್‌ಕುಮಾರ್, ಅಧ್ಯಕ್ಷರು, ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘ, ಭಾಗಮಂಡಲ.