ಜಿಲ್ಲಾಡಳಿತದಿಂದ ಬಂದೂಕು ವಿನಾಯಿತಿ ಪತ್ರದಾರರಲ್ಲಿ ಗೊಂದಲ

a.s. ponnanna
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ


ಬಂದೂಕು ವಿನಾಯಿತಿ ಪತ್ರಕ್ಕೆ ಸಂಬಂಧಿಸಿದ್ದಂತೆ ಗೊಂದಲ ಮೂಡಲು ಜಿಲ್ಲಾಡಳಿತವೇ ಕಾರಣ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಎ.ಎಸ್. ಪೊನ್ನಣ್ಣ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ವಿನಾಯಿತಿ ಪತ್ರಕ್ಕೆ ಸಂಬಂಧಿಸಿದ್ದಂತೆ ೨೦೧೮ ರಲ್ಲಿ ಜಿಲ್ಲಾಡಳಿತ ಸ್ಪಷ್ಟೀಕರಣ ಕೇಳುವುದರ ಮೂಲಕ ಗೊಂದಲಕ್ಕೆ ನಾಂದಿ ಹಾಡಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅತೃಪ್ತಿ ವ್ಯಕ್ತ ಪಡಿಸಿದರು. ವಿನಾಯಿತಿ ಪತ್ರ ಹಕ್ಕುದಾರರ ಭಾವನೆಗೆ ಧಕ್ಕೆವುಂಟು ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆಯುತ್ತಿದೆ ಎಂದು ಟೀಕಿಸಿದರು.

ಜಮ್ಮಾ ಹಿಡುವಳಿದಾರರು ಹಾಗೂ ಕೂರ್ಗ್ ಬೈ ರೇಸ್‌ನಡಿ ಭಾರತೀಯ ಆಯುಧ ಕಾಯ್ದೆ ಅನ್ವಯ ಬಂದೂಕು ಹೊಂದಲು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರ ವಿನಾಯಿತಿ ಪತ್ರ ಹಕ್ಕನ್ನು ೧೦ ವರ್ಷ (೨೦೨೯) ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸುವ ಮೂಲಕ ತಪ್ಪು ನಿರ್ಧಾರ ತೆಗೆದುಕೊಂಡಿದೆ.

ಭಾರತೀಯ ಆಯುಧ ತಿದ್ದುಪಡಿ ಕಾಯ್ದೆ ೨೦೧೯ ರನ್ವಯ ಪರವಾನಗಿದಾರರು ೨ಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದಲ್ಲಿ ಹೆಚ್ಚುವರಿ ಬಂದೂಕು ಠೇವಣಿ ಇಡುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಆದರೆ, ಕೊಡಗು ಜಿಲ್ಲಾಡಳಿತ ಈ ಆದೇಶವನ್ನು ವಿನಾಯಿತಿ ಪತ್ರ ಹೊಂದಿರುವವರಿಗೂ ಅನ್ವಯವಾಗುವಂತೆ ಮಾಡಿರುವುದು ಸರಿಯಲ್ಲ.

ಕೇಂದ್ರ ಗೃಹ ಸಚಿವಾಲಯದ ಆದೇಶಕ್ಕೆ ಸಂಬಂಧಿಸಿದ್ದಂತೆ ಜಿಲ್ಲಾಧಿಕಾರಿ ಕಾನೂನು ತಜ್ಞರೊಂದಿಗೆ ಚರ್ಚಿಸಬೇಕಾಗಿತ್ತು. ವಿನಾಯಿತಿ ಪತ್ರದಾರರಿಗೂ ಪೊಲೀಸ್ ನೋಟಿಸ್ ಜಾರಿ ಮಾಡುವುದರ ಮೂಲಕ ಗೊಂದಲ ಸೃಷ್ಟಿಸಲಾಗಿದೆ. ನೂರಾರು ಜನ ನನಗೆ ಕರೆ ಮಾಡುತ್ತಿ
ದ್ದಾರೆಂದರು.

ವಿನಾಯಿತಿ ಪತ್ರ ಹೊಂದಿರುವವರಿಗೂ ಕೇಂದ್ರ ಗೃಹ ಸಚಿವಾಲಯದ ಆದೇಶ ಅನ್ವಯ ಆಗುತ್ತಾ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿಕೊಳ್ಳ ಬೇಕಾಗಿತ್ತು. ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುವುದು ಸರಿಯಲ್ಲ. ಭಾವನಾತ್ಮಕ ವಿಚಾರದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕೆಂದರು.

ಪ್ರಸ್ತುತ ಪೊಲೀಸ್ ನೋಟಿಸ್ ಜಾರಿ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಕೋವಿಗೆ ಸಂಬಂಧಿಸಿದ್ದಂತೆ ಎಲ್ಲಾ ದಾಖಲೆ ಪತ್ರ ಸಂಗ್ರಹಿಸುತ್ತಿದ್ದೇನೆ. ಪ್ರತಿಯೊಂದು ವಿಚಾರಕ್ಕೂ ನ್ಯಾಯಾಲಯಕ್ಕೆ ಹೋಗುವಂತೆ ಮಾಡುವುದು ಸರಿಯಲ್ಲ. ಕೋವಿ ವಿಚಾರ ಜನರ ಮುಂದೆ ತೆಗೆದುಕೊಂಡು ಹೋಗುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net