

ಮಡಿಕೇರಿ: ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಹತ್ತು ಕುಟುಂಬ ೧೮ ಗೋತ್ರದ ಕೊಡಗು ಗೌಡ ಜನಾಂಗದ ಗ್ರಾಮ, ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಹಾಗೂ ೦.೨೨ ಮತ್ತು ೧೨ ಬೋರ್ ಬಂದೂಕಿನ ಗುರಿ ಹೊಡೆತ ಪುರುಷರ ಹಾಗೂ ಮಹಿಳೆಯರ ಮುಕ್ತ ಪಂದ್ಯಾವಳಿ ಡಿ.೨೫ ರಿಂದ ಡಿ.೩೧ರ ವರೆಗೆ ನಡೆಯಲಿದೆ ಎಂದು ಗೌಡ ಯುವ ವೇದಿಕೆಯ ನಿರ್ದೇಶಕ ಪುದಿಯನೆರವನ ರಿಷಿತ್ ಮಾದಯ್ಯ ತಿಳಿಸಿದರು.
ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿ. ೨೫ ರಂದು ಬೆಳಗ್ಗೆ ೯ ಗಂಟೆಗೆ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಯುವ ವೇದಿಕೆಯ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಹಾಗೂ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಾಯನ ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ೨೫ ರಂದು ಬೆಳಗ್ಗೆ ೯ ಗಂಟೆಯಿಂದ ೧೦.೩೦ರ ವರೆಗೆ ೦.೨೨ ಮತ್ತು ೧೨ ಬೋರ್ ಬಂದೂಕು ಸ್ಪರ್ಧಿಗಳ ನೋಂದಾಣಿ ಪ್ರಕ್ರಿಯೆ ಮೈದಾನದಲ್ಲಿಯೇ ನಡೆಯಲಿದೆ. ನಂತರ ಬರುವವರಿಗೆ ಅವಕಾಶ ಇರುವುದಿಲ್ಲ. ೦.೨೨ ಬಂದೂಕು ಸ್ಪರ್ಧೆ ೫೦ ಮೀ. ಮತ್ತು ೧೨ ಬೋರ್ ೩೦ ಮೀ. ಗುರಿ ಹೊಂದಿದೆ. ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಕ್ರಿಕೆಟ್ ಟೈಸ್ ಪ್ರಕ್ರಿಯೆ ನಡೆದಿದ್ದು, ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ನಡುವೆ ಕ್ರಿಕೆಟ್ ಪ್ರದರ್ಶನ ಪಂದ್ಯಾವಳಿ ನಡೆಯಲಿದೆ. ಡಿ೨೬ ರಂದು ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ನೋಂದಾಯಿಸಿದ ತಂಡಗಳು ತಮಗೆ ನಿಗಧಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಮನವಿ ಮಾಡಿದ ಅವರು, ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ಪಂದ್ಯ ಶ್ರೇಷ್ಠ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ನೀಡಲಾಗುವುದು ಎಂದು ವಿವರಿಸಿದರು.
ಡಿ.೩೧ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಕೂರನ ಪ್ರವೀಣ್-೮೭೬೨೮೯೭೧೬೭, ಗುಂಡಿನ ಪೈಪೋಟಿಗೆ ಪುದಿಯನೆರವನ ರಿಷಿತ್ ಮಾದಯ್ಯ-೯೯೭೨೩೭೬೧೫೧ ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೌಡ ಸಮಾಜದ ಸದಸ್ಯ ಕೂರನ ಪ್ರವೀಣ್ ಮಾತನಾಡಿ, ದಿನಕ್ಕೆ ಆರು ಪಂದ್ಯಾವಳಿ ನಡೆಯಲಿದ್ದು, ಹಾಜರಾಗುವವರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ತರಬೇಕು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರಲಿದೆ. ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿರುವುದರಿಂದ ಧೂಮಪಾನ, ಮದ್ಯಪಾನ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಹಾಗೂ ಗೌಡ ಸಮಾಜದ ಸದಸ್ಯ ಕಟ್ಟೆಮನೆ ರಾಜೇಶ್ ಉಪಸ್ಥಿತರಿದ್ದರು.