

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ವಿಕೃತ ಮನಸ್ಸಿನ ಜಿಲ್ಲಾಸ್ಪತ್ರೆ ಶವಾಗಾರ ಸಿಬ್ಬಂದಿ ಸೈಯದ್ ಹುಸೇನ್‌ನನ್ನು ವೃದ್ಧೆ ಅತ್ಯಾಚಾರ ಯತ್ನ ಪ್ರಕರಣದಡಿ ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ತಂದ ಪಾರ್ಥಿವ ಶರೀರದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಬಗ್ಗೆ ಹಿಂದೂ ಜಾಗರಣಾ ವೇದಿಕೆಯ ದೂರು ಆಧರಿಸಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ ಈತನ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಲಾಗಿತ್ತು.
ಮೃತದೇಹದ ಫೋಟೋ ತೆಗೆಯುವುದು, ಆಸ್ಪತ್ರೆ ಮಹಿಳಾ ಸಿಬ್ಬಂದಿಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಸೈಯದ್ ಹುಸೇನ್ ವಿರುದ್ಧ ಜನವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತದನಂತರ ನಡೆದ ವಿದ್ಯಮಾನದಲ್ಲಿ ೭೪ ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆತನನ್ನು ಸೋಮವಾರ ಬಂಧಿಸಲಾಗಿದೆ.
ಸೆಪ್ಟೆಂಬರ್ ೨೨ ರಂದು ರಾತ್ರಿ ೧೧ ಗಂಟೆಗೆ ಮನೆ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ವೃದ್ಧೆ ನ.೧೩ ರಂದು ಮಡಿಕೇರಿ ನಗರ ಠಾಣೆ ಗೆ ದೂರು ನೀಡಿದ್ದರು. ವೃದ್ಧಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ತಾಯಿಯಾಗಿದ್ದಾರೆ. ಈ ಮೊದಲು ಪೊಲೀಸ್ ಅಧಿಕಾರಿಯ ಪತ್ನಿ (ಜಿಲ್ಲಾಸ್ಪತ್ರೆ ಸಿಬ್ಬಂದಿ) ಮಡಿಕೇರಿ ನಗರ ಮಹಿಳಾ ಠಾಣೆಗೆ ದೂರು ನೀಡಿದ್ದರು.