

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೊಡಗಿನ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲು ಸಮಯದಲ್ಲಿ ಮಳೆ ಸುರಿದಿರುವುದ ರಿಂದ ಭತ್ತದ ಕೃಷಿಕರು ಹಾಗೂ ಕಾಫಿ ಬೆಳೆಗಾರರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ವರ್ಷದ ಫಸಲು ಕೈಸೇರುವ ಬದಲು ನೆಲಕಚ್ಚುವಂತಾಗಿ
ರುವುದು ರೈತಾಪಿ ವರ್ಗ ಕಣ್ಣೀರಿನಲ್ಲಿ ದಿನ ಕಳೆಯುವಂತೆ ಮಾಡಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಫಸಲು ಕೊಯ್ಲು ಸಂದರ್ಭದಲ್ಲಿ ಮಳೆ ಸುರಿದು ಹಾನಿವುಂಟು ಮಾಡಿದೆ. ಡಿಸೆಂಬರ್, ಜನವರಿ ತಿಂಗಳಲ್ಲಿ ಭತ್ತದ ಕೊಯ್ಲು ಹಾಗೂ ಅರೆಬಿಕಾ ಕಾಫಿ ಕೊಯ್ಲು ನಡೆಯುತ್ತದೆ. ಈ ವೇಳೆ ಕೃಷಿಕರು ಮಳೆ ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸು ತ್ತಾರೆ.
ಗದ್ದೆಯಲ್ಲಿ ಕೊಯ್ಲು ಮಾಡಿದ್ದ ಭತ್ತ ನೀರಿನಲ್ಲಿ ನೆನೆದು ಹಾಳಾಗಿದೆ. ಹಣ್ಣಾಗಿರುವ ಭತ್ತ ಉದುರು ನೆಲಸೇರುತ್ತಿದೆ. ಭತ್ತ ಲಾಭದಾಯಕ ಕೃಷಿ ಯಲ್ಲ ಎಂಬ ಕಾರಣಕ್ಕಾಗಿ ಸಾಕಷ್ಟು ರೈತರು ಭತ್ತ ಬೆಳೆಯುವುದನ್ನು ಬಿಟ್ಟಿದ್ದಾರೆ. ಭತ್ತದ ಗದ್ದೆ ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಹಠತೊಟ್ಟು ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಅಕಾಲಿಕ ಮಳೆಯ ಹೊಡೆತಕ್ಕೆ ಸಿಲುಕಿದ್ದಾರೆ.
ಹಣ್ಣಾಗಿರುವ ಅರೆಬಿಕಾ, ರೋಬಸ್ಟಾ ಕೊಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಮಳೆಯಾಗಿರುವುದು ಬೆಳೆಗಾರರಿಗೆ ಆರ್ಥಿಕ ಪೆಟ್ಟು ಕೊಟ್ಟಿದೆ. ಮತ್ತೆ ಮಳೆ ಸುರಿದಲ್ಲಿ ಮತ್ತಷ್ಟು ಕಷ್ಟನಷ್ಟಕ್ಕೆ ಸಿಲುಕಿ ಕಾಫಿ ಬೆಳೆಗಾರರು ತತ್ತರಿಸಿ ಹೋಗಲಿದ್ದಾರೆ. ವರ್ಷಪೂರ್ತಿ ಸುರಿಯುವ ಮಳೆ ಯಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಕಾಲಿಕ ಮಳೆಯಿಂದ ಭತ್ತದ ಕೃಷಿಕರು, ಕಾಫಿ ಬೆಳೆಗಾರರು ಎದುರಿಸುತ್ತಿ ರುವ ಸಮಸ್ಯೆ ಕುರಿತು ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ ಮತ್ತೆ ರೈತನ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ವಾರ್ಷಿಕ ಬೆಳೆ ಕಳೆದುಕೊಂಡವರಿಗೆ ಮತ್ತೆ ಪರಿಹಾರ ನೀಡುವುದರಲ್ಲಿ ತಪ್ಪೇನಿಲ್ಲ. ಗರಿಷ್ಠ ೫ ಎಕರೆ ಮಿತಿ ಸಡಿಲಿಸಬೇಕು. ಈಗಾಗಲೇ ಬಂದಿರುವ ಪರಿಹಾರ ಹಣವನ್ನು ಆಡಳಿತ ಪಕ್ಷದ ಹಿಡಿತ ದಲ್ಲಿರುವ ಡಿಸಿಸಿ ಬ್ಯಾಂಕ್‌ನಲ್ಲಿ ತಡೆಹಿಡಿಯಲಾಗಿದೆ. ಇದೆಲ್ಲಾ ರೈತರಿಗೆ ಹೆಚ್ಚು ನೋವು ಕೊಡುತ್ತಿದೆ. ಮುಕ್ಕಾಟೀರ ಪ್ರವೀಣ್ ಭೀಮಯ್ಯ, ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ, ಕೊಡಗು ಜಿಲ್ಲೆ. (ಚಿತ್ರ: ಪ್ರವೀಣ್ ಭೀಮಯ್ಯ)
**
ನೀರು ಹಾಯಿಸಿರುವ ತೋಟಗಳಲ್ಲಿ ಕಾಫಿ ಉದುರಿದೆ. ಒಂದಷ್ಟು ಮೊಗ್ಗುಗಳು ಅರಳುವ ಹಂತಕ್ಕೆ ಬಂದಿದೆ. ಇದೆಲ್ಲವೂ ನಷ್ಟ. ಒಂದು ತಿಂಗಳಲ್ಲಿ ಕಾಫಿ ಕೊಯ್ಲು ಮುಗಿಯಬೇಕು. ಆದರೆ, ಮತ್ತೆ ಮಳೆ ಬಂದರೆ ಎಲ್ಲವೂ ಕಳೆದುಕೊಳ್ಳುತ್ತೇವೆ ಎಂಬ ಭಯವಿದೆ. ಬಾಳೆಯಡ ಶಿವಕುಮಾರ್, ಕೃಷಿಕರು, ನೆಲಜಿ. (ಚಿತ್ರ: ಬಾಳೆಯಡ ಶಿವಕುಮಾರ್)
**
ಒಂದು ವರ್ಷದ ಪೂರ್ಣ ಪ್ರಮಾಣದ ಗೊಬ್ಬರ, ಉತ್ಪಾದನಾ ವೆಚ್ಚ ಎಲ್ಲವೂ ನೆಲ ಕಚ್ಚಿದೆ. ಶೇ.೭೦ ರಷ್ಟು ಕಾಫಿ, ಭತ್ತ ನಷ್ಟವಾಗಿದೆ. ಇದನ್ನು ಜಿಲ್ಲಾಡಳಿತ ಕೃಷಿ, ತೋಟಗಾರಿಕೆ, ಕಂದಾಯ ಇಲಾಕೆ ಮೂಲಕ ಸರ್ವೇ ನಡೆಸಿ, ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈಗಾಗಲೇ ನೀಡಿರುವ ಪರಿಹಾರವನ್ನು ಈಗಿನ ನಷ್ಟಕ್ಕೆ ಸೇರಿಸದಂತೆ ಕ್ರಮ ಕೈಗೊಳ್ಳಬೇಕು. ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ. (ಚಿತ್ರ: ಮನು ಸೋಮಯ್ಯ)
**
ಅಕಾಲಿಕ ಮಳೆಯಿಂದ ಕಾಫಿ ಹಾಗೂ ಭತ್ತದ ಬೆಳೆ ನೆಲಕಚ್ಚಿದೆ. ಈಗಗಾಲೇ ಹದಗೆಟ್ಟಿರುವ ರೈತರ ಜೀವನ ಮತ್ತಷ್ಟು ಹದಗೆಡಲಿದೆ. ಅನೇಕ ರೈತರು ಹಾಗೂ ಕಾಫಿ ಬೆಳೆಗಾರರು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕೃಷಿ ಮಾಡಿದ್ದಾರೆ. ಆದರೆ, ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೀನಾ ಪ್ರಕಾಶ್, ಕಾಫಿ ಬೆಳೆಗಾರರು, ಕ್ಯಾತನಹಳ್ಳಿ. (ಚಿತ್ರ: ರೀನಾ ಪ್ರಕಾಶ್)
**
ಅಕಾಲಿಕ ಮಳೆಯಿಂದ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ ಕೃಷಿ ಫಸಲು ಕೈಸೇರುವ ನಂಬಿಕೆ ಇರುವುದಿಲ್ಲ. ಆದರೂ, ಸಾಲ ಮಾಡಿ ಕೃಷಿ ಮಾಡುತ್ತೇವೆ. ಒಂದು ದಶಕದಿಂದ ಬಹುತೇಕ ಕೃಷಿಕರಿಗೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ರೈತರ ಸಾಲ ಮನ್ನಾ ಮಾಡಲೇಬೇಕು. ಎಂ.ಪಿ. ಮೋಹನ. ಕೃಷಿಕರು, ಮೂದ್ರವಳ್ಳಿ. (ಚಿತ್ರ: ಎಂ.ಪಿ. ಮೋಹನ)
**
ಅಕಾಲಿಕ ಮಳೆಯಿಂದ ಬೆಳೆಗಾರರ ಪಾಡು ನಾಯಿ ಪಾಡಾಗಿದೆ. ಕಟಾವಿಗೆ ಬಂದ ಭತ್ತ, ಕಾಫಿ ನೆಲಕಚ್ಚಿದೆ. ಕೊಯ್ಲು ಮಾಡಿದ ಕಾಫಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಮಳೆ ಹಾಗೂ ಮೋಡದ ವಾತಾವರಣದಿಂದ ಅರೆಬಿಕಾ ಪಾರ್ಚಮೆಂಟ್ ಒಣಗದೆ ಕಂದು ಬಣ್ಣಕ್ಕೆ ತಿರುಗುತ್ತಿದೆ.
ಬೆಳೆಗಾರರನ್ನು ಪ್ರಕೃತಿಯೇ ಕಾಪಾಡಬೇಕು. ಪ್ರತಿವರ್ಷ ಒಂದಲ್ಲ ಒಂದು ಕಾರಣಕ್ಕಾಗಿ ರೈತರು, ಬೆಳೆಗಾರರೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಎಸ್.ಎಂ. ಉಮಾಶಂಕರ್. ಕಾಫಿ ಬೆಳೆಗಾರರು, ಶಿಡುಗಳಲೆ. (ಚಿತ್ರ: ಎಸ್.ಎಂ. ಉಮಾಶಂಕರ್)
**