೩೦ ಸಾವಿರ ಕೋಟಿ ರೂಪಾಯಿ ಮೊತ್ತದ ಔಷಧಿ ಗಿಡಮೂಲಿಕೆ ವ್ಯಾಪಾರ

k.n.murthy - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ದೇಶದಲ್ಲಿ ೩೦ ಸಾವಿರ ಕೋಟಿ ರೂಪಾಯಿ ಮೊತ್ತದ ಔಷಧಿ ಸಸ್ಯ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂದು ನಿವೃತ್ತ ಅರಣ್ಯಾಧಿಕಾರಿ ಕೆ.ಎನ್. ಮೂರ್ತಿ ಹೇಳಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಮಡಿಕೇರಿ ಅರಣ್ಯ ವಿಭಾಗ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತ ಪಾಲುದಾರರ ಸಮಾವೇಶದಲ್ಲಿ ಔಷಧಿ ಸಸ್ಯಗಳ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

ಔಷಧಿ ಸಸ್ಯ ವ್ಯಾಪಾರ ವಹಿವಾಟು ಅಸಂಘಟಿತವಾಗಿ ನಡೆಯುತ್ತಿದೆ. ಸಂಘಟಿತ ಮಾರುಕಟ್ಟೆ ವ್ಯವಸ್ಥೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ನಿಖರವಾದ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಗಿಡಮೂಲಿಕೆ ಮಾರುಕಟ್ಟೆ ವ್ಯವಸ್ಥಿತವಾಗಿ ನಡೆಯುವ ಅಗತ್ಯತೆ ಇದೆ ಎಂದರು.

ಗಿಡಮೂಲಿಕೆಯನ್ನು ಔಷಧಿ, ಆಹಾರ ಮತ್ತು ಸೌಂದರ್ಯಕ್ಕೆ ಬಳಸಲಾಗುತ್ತದೆ. ೨೦೧೪-೧೫ನೇ ಸಾಲಿನಲ್ಲಿ ನಡೆದ ಅಧ್ಯಯನದಲ್ಲಿ ೭ ಲಕ್ಷ ಟನ್ ಔಷಧಿ ಸಸ್ಯ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದೆ. ೪೦ ಗಿಡಮೂಲಿಕೆಗಳಿದ್ದು, ೧.೫೦ ಲಕ್ಷ ಟನ್ ರಫ್ತಾಗುತ್ತಿದೆ. ದೇಶದಲ್ಲಿ ಗಿಡಮೂಲಿಕೆ ಬಳಸುವ ೯ ಸಾವಿರ ಕೈಗಾರಿಕೆಗಳು ನೋಂದಾವಣೆ ಆಗಿದೆ ಎಂದು ಹೇಳಿದರು.

೭,೫೦೦ ಪ್ರಬೇಧದ ಔಷಧಿ ಸಸ್ಯ ಗುರುತಿಸಲಾಗಿದೆ. ೧,೨೦೦ ಪ್ರಬೇಧ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. ೩೦ ಪ್ರಬೇಧವನ್ನು ಕೃಷಿಗೆ ತರಲಾಗಿದೆ. ಶೇ.೫೦ ರಷ್ಟು ಗಿಡಮೂಲಿಕೆ ಅರಣ್ಯದಿಂದ ಕದ್ದು ತರಲಾಗುತ್ತಿದೆ. ಇದರಿಂದ ಅತ್ಯಮೂಲ್ಯ ಗಿಡಮೂಲಿಕೆ ಅಳಿವಿನಂಚಿಗೆ ತಲುಪಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಹೇರಳ ಪ್ರಮಾಣದಲ್ಲಿ ಔಷಧಿ ಗಿಡಮೂಲಿಕೆ ಇದೆ. ಇಲ್ಲಿಯ ಔಷಧಿ ಸಸ್ಯಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಉತ್ಪನ್ನವಾಗಿ ಮತ್ತೆ ನಮ್ಮ ರಾಜ್ಯಕ್ಕೆ ಬಂದು ಮಾರಾಟ ಮಾಡಲಾಗುತ್ತಿದೆ. ಇದರ ಬದಲು ರಾಜ್ಯದಲ್ಲಿ ಲಭ್ಯವಿರುವ ಔಷಧಿ ಗಿಡಮೂಲಿಕೆಯನ್ನು ವ್ಯವಸ್ಥಿತವಾಗಿ ಬಳಸುವಂತಾಗಬೇಕೆಂದರು.

ಪಾಳುಬಿದ್ದ ಗದ್ದೆಯಲ್ಲಿ ಔಷಧಿ ಸಸ್ಯ ಬೆಳೆಸಬಹುದು. ಭವಿಷ್ಯದಲ್ಲಿ ಗಿಡಮೂಲಿಕೆ ಉದ್ದಿಮೆ ದೊಡ್ಡ ಉದ್ದಿಮೆ ಆಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ ಹೇಳಿದರು. ಯುವಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಬದಲು ಹುಟ್ಟೂರಿನಲ್ಲಿ ಔಷಧಿ ಗಿಡ ಬೆಳೆದು ಆರ್ಥಿಕವಾಗಿ ಸಬಲರಾಗಬಹುದೆಂದರು.

ಕೊಡಗಿನಲ್ಲಿ ಲಭ್ಯವಿರುವ ಕಾಡು ಹಣ್ಣುಗಳ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಬಿ.ಎನ್. ಸತೀಶ್ ಮಾಹಿತಿ ನೀಡಿದರು. ಆದಿ ಕಾಳುಮೆಣಸು ಮೂಲಕ ಪ್ರಖ್ಯಾತಿ ಹೊಂದಿರುವ ನಾಪಂಡ ಪೂಣಚ್ಚ, ಸಮಗ್ರ ಕೃಷಿ ಮೂಲಕ ಗಮನ ಸೆಳೆದಿ ರುವ ಮಂದ್ರೀರ ತೇಜಸ್ ನಾಣಯ್ಯ ತಮ್ಮ ಯಶೋಗಾಥೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net