

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಹಣ ಬಲದಿಂದಲ್ಲೇ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದವರು ಮಾಜಿ ಸಚಿವ ಟಿ. ಜಾನ್. ‘ಮಾತಾಡಿದರೇ ಹೋಯ್ತಿ, ಮುತ್ತು ಒಡೆದರು ಹೋಯಿತು’ ಎಂಬ ಮಾತು ಜಾನ್ ಮಾತನಾಡಿ ವಿವಾದಕ್ಕೆ ನಾಂದಿ ಹಾಡುವಾಗ ಜನವಲಯದಿಂದ ವ್ಯಕ್ತವಾಗುತ್ತಿತ್ತು. ಮಲೆಯಾಳಂ ಮಾತೃ ಭಾಷೆಯ ಜಾನ್ ಕನ್ನಡ ಮಾತನಾಡಲು ಪರಿತಪಿಸುತ್ತಿದ್ದರು. ಹಲವು ಬಾರಿ ವೇದಿಕೆಯಲ್ಲಿ ಯೇ ಏನೇನೋ ಹೇಳಿ ಅಭಾಸಕ್ಕೆ ಕಾರಣಕರ್ತರಾಗುತ್ತಿದ್ದರು.
ವಿಶಿಷ್ಟ ರೀತಿಯಲ್ಲಿ ಕನ್ನಡ ಮಾತನಾಡುವುದರ ಮೂಲಕ ವಿವಾದ ಹುಟ್ಟು ಹಾಕಿ ಸಚಿವ ಸ್ಥಾನ ಕಳೆದುಕೊಂಡ ಟಿ. ಜಾನ್ ಆ ಮೂಲಕ ದೇಶ ವ್ಯಾಪಿ ಸುದ್ದಿಗೆ ಗ್ರಾಸವಾದರು. ಜಾನ್ ಡಿಸ್ಲರಿ ನಡೆಸುವುದರ ಮೂಲಕ ಹೆಂಡದ ದೊರೆಯಾಗಿ, ಅದಕ್ಕೂ ಮೊದಲು ಮರ ವ್ಯಾಪಾರ ಮಾಡುವುದರೊಂದಿಗೆ ದೊಡ್ಡ ಮರ ವ್ಯಾಪಾರಿಯಾಗಿ, ಪದವಿ- ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಗಳ ಒಡೆಯನಾಗಿ ವಿವಿಧ ಕ್ಷೇತ್ರದಲ್ಲಿ ಯಶೋಗಾಥೆ ಬರೆದಿದ್ದಾರೆ.
ಹಂತ- ಹಂತವಾಗಿ ಸಿರಿವಂತರಾದ ಜಾನ್ ಕೊಡಗಿನಲ್ಲಿ ನೂರಾರು ಎಕರೆ ಜಾಗ ಹೊಂದಿದ್ದಾರೆ. ಕೇರಳದಲ್ಲಿ ಹೆಸರು ವಾಸಿ ರೆಸಾರ್ಟ್ ವೊಂದರ ಒಡೆಯರಾಗಿದ್ದಾರೆ.
ಕೊಡುಗೈ ದಾನಿಯಾಗಿ ಜನಮನ್ನಣೆಗೆ ಭಾಜನರಾಗಿದ್ದಾರೆ. ಕೊಡಗಿನಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಖಜಾನೆಯಾಗಿದ್ದರು. ಪಕ್ಷದ ಪ್ರತಿಯೊಂದು ಚಟುವಟಿಕೆಗೆ ಹೇರಳ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತಾ, ಬೆನ್ನೆಲುಬಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ೧೯೫೨ ರಿಂದ ಕಾಂಗ್ರೆಸ್ಸಿನಲ್ಲಿ ಸಕ್ರಿಯರಾಗಿದ್ದರು. ಏಕಪಕ್ಷ ನಿಷ್ಠೆ ಮೂಲಕ ರಾಜಕೀಯದಲ್ಲಿ ವಿಭಿನ್ನರಾಗಿದ್ದಾರೆ.
ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ನಾಗರೀಕ ವಿಮಾಯನಯಾನ ಮತ್ತು ಮೂಲಭೂತ ಸೌಕರ್ಯ ಸಚಿವರಾಗಿದ್ದರು. ಗುಜರಾತ್ ಭೂಕಂಪ ದೇವರ ಶಾಪದಿಂದಾಗಿ ನಡೆದಿದೆ ಎಂದು ಹೇಳುವುದರ ಮೂಲಕ ಸಚಿವ ಸ್ಥಾನ ಕಳೆದುಕೊಂಡರು. ೧೯೯೪ ರಲ್ಲಿ ಕೊಡಗಿನ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದರು. ಹಣದ ಮೂಲಕ ಜನಪ್ರತಿನಿಧಿಗಳನ್ನು ಖರೀದಿಸಿ ಗೆಲುವಿನ ನಗುಬೀರಿದರು.
೨೦೦೪ ರಲ್ಲಿ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಎಸ್. ಅರುಣ್ ಮಾಚಯ್ಯ ಎದುರು ಸಚಿವರಾಗಿದ್ದ ಜಾನ್ ಸೋಲು ಕಂಡರು. ಅವಧಿಗೆ ಮುಂಚಿತವಾಗಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಜಾನ್ ಆಸಕ್ತಿ ತೋರಲಿಲ್ಲ. ೨೦೧೦ ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಚುನಾಯಿತರಾದರು.
ಮಡಿಕೇರಿ ನಗರಸಭೆ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೆಪಿಸಿಸಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವ ಹಿಸಿದ್ದಾರೆ. ೧೯೯೯ ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವೀಕ್ಷಕರಾಗಿದ್ದರು.
ಐಟಿಐ ಆಯ್ಕೆ ಮಂಡಳಿ ಸದಸ್ಯ, ಕೊಡಗು ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ, ಮರ ವ್ಯಾಪಾರಿಗಳ ಸಂಸ್ಥೆ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಪ್ರಮುಖ ನಾಯಕರಾಗಿ, ಸಮುದಾಯದಲ್ಲಿ ಜನಮನ್ನಣೆಗೆ ಭಾಜನರಾಗಿದ್ದಾರೆ. ಜಾಕೋಬೈಟ್ ಸೈರೈನ್ ಅರ್ಥೋಡೆಕ್ಸ್ ಸೊಸೈಟಿ ಅಧ್ಯಕ್ಷರಾಗಿ, ಭಾರತ್ ಜ್ಯೋತಿ ದಿವಿನ್ ಟ್ರಸ್ಟ್ ಅಂಡ್ ಮಿಷನ್ ಸೆಂಟರ್ ಟ್ರಸ್ಟಿಯಾಗಿದ್ದರು. ಸಮುದಾಯದಲ್ಲಿನ ಸೇವೆಗಾಗಿ ವಿವಿಧ ಪ್ರತಿಷ್ಠಿತ ಗೌರವಗಳಿಗೆ ಭಾಜನ ರಾಗಿದ್ದಾರೆ.
೧೯-೧೦-೧೯೩೧ ರಲ್ಲಿ ಜನಿಸಿದ ಟಿ. ಜಾನ್, ಚಾಚಮ್ಮ ಅವರನ್ನು ವಿವಾಹವಾದರು. ಡಾ.ಥಾಮಸ್, ಪಾಲ್ ಜಾನ್, ಬಿಜು ಜಾನ್ ಮೂವರು ಪುತ್ರರು, ಶೀಲಾ, ಶಿಜಿ ಇಬ್ಬರು ಪುತ್ರಿಯರು ಇದ್ದಾರೆ.
ಅಪರೂಪದ ವ್ಯಕ್ತಿ ಟಿ.ಜಾನ್
ಅಪರೂಪದ ವ್ಯಕ್ತಿ. ಅವರ ಬುದ್ದಿವಂತಿಕೆ ಅವರಿದ್ದ ಪಕ್ಷದವರಿಗೆ ಅರ್ಥ ಆಗಲಿಲ್ಲ. ಜಾನ್ ಅಂದರೆ ಹಣದ ಕಂತೆ ಅಂತ ಎಲ್ಲರೂ ನಂಬಿದ್ದರು. ಇದನ್ನು ಮೀರಿದ ನಾಯಕತ್ವ ಅವರಲ್ಲಿ ಇತ್ತು.ಅದರ ಉಪಯೋಗ ಸರ್ಕಾರವಾಗಲಿ, ಪಕ್ಷವಾಗಲಿ ಪಡೆಯಲೇ ಇಲ್ಲ ಎಂದು ಹಿರಿಯ ಸಾಹಿತಿ ಕಣಿವೆ ಭಾರದ್ವಾಜ್ ಆನಂದತೀರ್ಥ ಹೇಳುತ್ತಾರೆ.
ಇವುಗಳ ಜೊತೆಗೆ ಅವರಲ್ಲಿ ಮಾನವೀಯತೆಯೂ ಇತ್ತು. ಇದರ ಬಗ್ಗೆಯೂ ಯಾರೂ ಮಾತನಾಡಲಿಲ್ಲ. ಒಬ್ಬ ಯುವಕ ತನ್ನ ಯೌವನದ ದಿನಗಳಲ್ಲಿ ಕೊಡಗಿಗೆ ಬಂದು ಗುತ್ತಿಗೆದಾರನಾಗಿ ಜೀವನ ಆರಂಭಿಸಿ, ೩ ಸಾವಿರ ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯ ಕಟ್ಟಿ, ಅದನ್ನು ಉಳಿಸಿಕೊಂಡು, ಬೆಳಸಿಕೊಂಡು ಬಂದಿದ್ದಲ್ಲದೇ ಸರಳವಾಗಿ ಬದುಕಿದ್ದು ವಿಶೇಷ. ಅವಕಾಶ ಸಿಕ್ಕಿದ್ದರೆ ಒಳ್ಳೆಯ ಮಂತ್ರಿ ಯಾಗಿ ತಮ್ಮತನವನ್ನು ಅವರು ತೋರಿಸುವವರಿದ್ದರು. ಸಣ್ಣ ಕಾರಣಕ್ಕೆ ಮಂತ್ರಿ ಪದವಿಯಿಂದ ಅವರು ಹೊರ ಬಂದರು ಎಂದು ವಿಶ್ಲೇಷಿಸಿದ್ದಾರೆ.
ಕನ್ನಡ ಸರಿಯಾಗಿ ಬರದೇ ಇದ್ದದ್ದೇ ಇದಕ್ಕೆ ಕಾರಣ. ಅವರಲ್ಲಿ ಬುದ್ದಿವಂತಿಕೆ, ಮುಂಗಾಣುವಿಕೆ, ನಾಯಕತ್ವ , ಸಜ್ಜನಿಕೆ ಎಲ್ಲವೂ ಇತ್ತು. ಆದರೆ ಅವರನ್ನು ನಾವು ದಾನಿಯಾಗಿ ಮಾತ್ರ ಕಂಡೆವು. ತಮ್ಮ ಎದುರಾಳಿಯನ್ನು ಬಿಟ್ಟು ಉಳಿದಂತೆ ಎಲ್ಲರೂ ಅವರಿಂದ ಸಹಾಯ ಪಡೆದಿದ್ದಾರೆ. ಎಲ್ಲಾ ಪಕ್ಷಗಳ ಜನರಿಗೂ, ಎಲ್ಲಾ ಧರ್ಮದ ಜನರಿಗೂ ಅವರು ಸಹಾಯ ಮಾಡಿದ್ದಾರೆ.
ರಾಜಕಾರಣದಿಂದ ಅವರಿಗೆ ಒಂದು ಯೋಗ್ಯ ಬಿಳ್ಕೋಡಿಗೆ ಅವರಿಗೆ ಸಿಗಬೇಕಾಗಿತ್ತು. ಈ ಕೆಲಸ ಮಾಡುವಲ್ಲಿಯೂ ಕಾಂಗ್ರೆಸ್ ವಿಫಲ ವಾಯಿತು ಅಂತ ವಿಷಾದದಿಂದ ಹೇಳಬೇಕಾಗಿದೆ ಎಂದು ಹೇಳಿದ್ದಾರೆ.