ಆಫ್ರಿಕನ್ ಹಂದಿ ಜ್ವರ ತಡೆಗಟ್ಟಲು ಅಗತ್ಯ ಕ್ರಮ

27mdko5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಗಾಳಿಬೀಡು ಗ್ರಾಮದಲ್ಲಿ ಮೊದಲ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಇಲ್ಲಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಸುರೇಶ್ ಭಟ್ ಹೇಳಿದರು.

ಹಂದಿ ಸಾಕಾಣಿಕ ಕೇಂದ್ರದ ೧ ಕಿಲೋಮೀಟರ್ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು ೧೦ ಕಿಲೋಮೀಟರ್ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ಆಫ್ರಿಕನ್ ಹಂದಿ ಜ್ವರದಿಂದ ಮನುಷ್ಯನ ಆರೋಗ್ಯದಲ್ಲಿ ಯಾವುದೇ ರೀತಿ ವ್ಯತ್ಯಾಸ ಉಂಟಾಗುವುದಿಲ್ಲ. ಹಂದಿ ಮಾಂಸ ಸೇವಿಸುವವರು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಹೊರಗಿನ ಹಂದಿ ವ್ಯಾಪಾರಸ್ಥರು ಹಾಗೂ ಅನಧಿಕೃತ ವ್ಯಕ್ತಿಗಳು ಹಂದಿ ಮನೆಗಳಿಗೆ ಪ್ರವೇಶಿಸಿದಂತೆ ನೋಡಿಕೊಳ್ಳ ಬೇಕು. ಹಂದಿ ಮನೆಗಳನ್ನು ಕ್ರಿಮಿನಾಶಕ ಹಾಗೂ ಬಿಸಿ ನೀರಿನಿಂದ ಪ್ರತಿನಿತ್ಯ ತೊಳೆಯಬೇಕೆಂದರು.

ಹಂದಿಗಳ ಮೂಗು ಹಾಗೂ ಕಣ್ಣಿನಲ್ಲಿ ಕೀವು ಬರುವುದು ಕಂಡು ಬಂದರೆ ಅದು ಆಫ್ರಿಕನ್ ಹಂದಿ ಜ್ವರ ಲಕ್ಷಣವಾಗಿದೆ. ಈ ಸಂದರ್ಭ ಹಂದಿ ಗಳು ಒದ್ದಾಡಿ ದಿಢೀರ್ ಸಾಯುತ್ತವೆ. ಕಿವಿ, ಬಾಲ, ಹೊಟ್ಟೆಯ ಕೆಲಭಾಗದಲ್ಲಿ ಕೆಂಪಾಗುವುದು, ಉಸಿರಾಟದ ತೊಂದರೆ, ತೀವ್ರ ಜ್ವರ ಆಫ್ರಿಕನ್ ಹಂದಿ ಜ್ವರದ ಲಕ್ಷಣ ಎಂದು ಮಾಹಿತಿ ನೀಡಿದರು.

ರೋಗ ಪೀಡಿತ ಪ್ರದೇಶಗಳಿಂದ ಹಂದಿ ಮತ್ತು ಹಂದಿ ಉತ್ಪನ್ನಗಳ ಆಮದನ್ನು ನಿಲ್ಲಿಸಬೇಕು. ರೋಗ ಪೀಡಿತ ಪ್ರದೇಶಗಳಿಂದ ವಾಹನ ಸಂಚಾರ ನಿಯಂತ್ರಿಸುವುದು ಮತ್ತು ಸಾಧ್ಯವಾದರೆ ನಿಲ್ಲಿಸುವುದು ಸೂಕ್ತ ಎಂದರು.

ಆಫ್ರಿಕನ್ ಹಂದಿ ಜ್ವರವು ಹಂದಿ ಅಥವಾ ಹಂದಿ ಮಾಂಸದ ಸೇವನೆ ಮೂಲಕ ಮನುಷ್ಯನಿಗೆ ಹರಡುವುದಿಲ್ಲ. ಮಾನವರಲ್ಲಿ ಈ ವೈರಾಣು ಯಾವುದೇ ರೋಗವನ್ನುಂಟು ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಹಂದಿಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿಪಾಲಕರು ಮುಂಜಾಗ್ರತೆಯಾಗಿ ಜೈವಿಕ ಸುರಕ್ಷತೆಯ ಕ್ರಮ ಅನುಸರಿಸಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net