ಬೆಂಗಳೂರು ಕೃಷಿ ವಿವಿ ಕುಲಪತಿ ಹುದ್ದೆಗೆ ಡಾ.ಸಿ.ಜಿ. ಕುಶಾಲಪ್ಪ

dr.c.g. kushalappa
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಬೆಂಗಳೂರಿನ ಪ್ರತಿಷ್ಠಿತ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯ ಕುಲಪತಿ ಹುದ್ದೆಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿಜ್ಞಾನ ಹಾಗೂ ತೋಟಗಾರಿಕಾ ವಿಶ್ವ ವಿದ್ಯಾಲಯ ವ್ಯಾಪ್ತಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಚೆಪ್ಪುಡೀರ ಜಿ. ಕುಶಾಲಪ್ಪ ಹೆಸರು ಶಿಫಾರಸ್ಸುಗೊಂಡಿದೆ.

ಕುಲಪತಿ ನೇಮಕಾತಿಗೆ ಸಂಬಂಧಿಸಿದ್ದಂತೆ ಬೆಂಗಳೂರು ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಡಾ.ಪಿ.ಜಿ. ಚಂಗಪ್ಪ ನೇತೃತ್ವದ ಪ್ರಮುಖರ ಸಮಿತಿ ಡಾ.ಸಿ.ಜಿ. ಕುಶಾಲಪ್ಪ ಸೇರಿದ್ದಂತೆ ಮೂವರ ಹೆಸರನ್ನು ಶಿಫಾರಸ್ಸು ಮಾಡಿದೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಡೀನ್ ಡಾ.ಎನ್.ಬಿ. ಪ್ರಕಾಶ್, ಡಿಎಸ್‌ಡಬ್ಲೂೃ ಡಾ.ಸುರೇಶ್ ಹೆಸರು ಕೂಡ ಕುಲಪತಿ ಹುದ್ದೆಗೆ ಶಿಫಾರಸ್ಸುಗೊಂಡಿದೆ. ಮೂವರ ಪೈಕಿ ಯಾರಿಗೆ ಸರ್ಕಾರ ಅವಕಾಶ ನೀಡಲಿದೆ ಎಂಬ ಕುತೂಹಲ ಮೂಡಿದೆ.

ಸಚಿವರು, ಶಾಸಕರು ಸೇರಿದ್ದಂತೆ ಪ್ರಭಾವಿಗಳು ತಮಗೆ ಬೇಕಾದವರ ನೇಮಕಾತಿಗೆ ಪ್ರಭಾವ ಬೀರಲಾರಂಭಿಸಿದ್ದಾರೆ. ಅರ್ಹತೆಗಿಂತ ಜಾತಿ, ಪ್ರಭಾವದ ಆಧಾರದಲ್ಲಿ ನೇಮಕಾತಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಾ.ಸಿ.ಜಿ. ಕುಶಾಲಪ್ಪ ಕುಲಪತಿಯಾಗಿ ನೇಮಕಗೊಂಡಲ್ಲಿ ಕೊಡವ ಜನಾಂಗದ ಮೊದಲಿಗ ಹಾಗೂ ಕೊಡಗಿನ ೨ನೇ ವ್ಯಕ್ತಿ ಆಗಲಿದ್ದಾರೆ. ಇದಕ್ಕೂ ಮೊದಲು ಡಾ.ಪಿ.ಜಿ. ಚಂಗಪ್ಪ ಕುಲಪತಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ೬ ವರ್ಷದಿಂದ ಡೀನ್ ಆಗಿ ಸಮರ್ಥ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಒಟ್ಟು ೩೭ ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ೧೯೮೨ ರಲ್ಲಿ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲದಲ್ಲಿ ಬಿಎಸ್ಸಿ (ಕೃಷಿ), ೧೯೮೫ ರಲ್ಲಿ ಎಂಎಸ್ಸಿ (ಕೃಷಿ) ಪದವಿ ಪಡೆದಿದ್ದಾರೆ. ೧೯೯೬-೯೭ನೇ ಸಾಲಿನಲ್ಲಿ ತೋಟಗಾರಿಕೆ ವಿಷಯಕ್ಕೆ ಸಂಬಂಧಿಸಿದ್ದಂತೆ ಪಿಎಚ್‌ಡಿ ಪದವಿ ಪಡೆದಿ ದ್ದಾರೆ.

ದೇವರಕಾಡು ಸಂರಕ್ಷಣೆ
ಕೊಡಗಿನ ಹಿರಿಯರು ಅರಣ್ಯ ಸಂರಕ್ಷಿಸುವ ಉದ್ದೇಶದಿಂದ ರೂಪಿತಗೊಂಡ ದೇವರಕಾಡು ಪರಿಕಲ್ಪನೆಗೆ ಹಲವು ವರ್ಷದಿಂದ ಧಕ್ಕೆವುಂಟಾ ಗಿತ್ತು. ದೇವರಕಾಡು ಸಂರಕ್ಷಿಸಲು ಹಾಗೂ ಒತ್ತುವರಿ ತೆರವುಗೊಳಿಸಲು ಹಲವು ವರ್ಷಗಳಿಂದ ಪರಿಣಾಮಕಾರಿಯಾಗಿ ಪ್ರಯತ್ನಿಸಿದ ಶ್ರೇಯಸ್ಸು ಡಾ.ಸಿ.ಜಿ. ಕುಶಾಲಪ್ಪ ಅವರಿಗೆ ಸಲ್ಲುತ್ತದೆ.

ದೇವರಕಾಡಿನ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದರ ಮೂಲಕ ಪ್ರತಿಯೊಂದು ದೇವರಕಾಡಿನ ಸ್ಥಿತಿಗತಿ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿ ದ್ದಾರೆ. ಒತ್ತುವರಿದಾರರನ್ನು ಮನವೊಲಿಸುವ ಮೂಲಕ ಒತ್ತುವರಿ ತೆರವುಗೊಳಿಸುವುದಕ್ಕೆ ಒತ್ತು ನೀಡಿದ್ದಾರೆ. ಸಂಘರ್ಷ, ಕಾನೂನು ಕ್ರಮ ಕ್ಕಿಂತ ಮಾತುಕತೆ ಮೂಲಕ ದೇವರಕಾಡು ಸಂರಕ್ಷಣೆಗೆ ಮುಂದಾಗಿರುವುದು ವಿಶೇಷ.

ಪ್ರಸ್ತುತ ಇರುವ ದೇವರಕಾಡುಗಳು ಒತ್ತುವರಿಯಾಗದ್ದಂತೆ ಜನಜಾಗೃತಿ ಮೂಡಿಸಲು ಸಫಲರಾಗಿದ್ದಾರೆ. ದೇವರಕಾಡು ಸಂರಕ್ಷಿಸುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಊರಿನ ಹಿರಿಯರು ಹಾಗೂ ಪ್ರಮುಖರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ.

ದೇವಸ್ಥಾನದ ತಕ್ಕಮುಖ್ಯಸ್ಥರು ಸೇರಿದ್ದಂತೆ ಪ್ರಮುಖರನ್ನು ಒಂದೆಡೆ ಸೇರಿಸಿ ದೊಡ್ಡ ಮಟ್ಟದ ಸಮಾವೇಶಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕ ಸಂದೇಶ ರವಾನಿಸಲು ಸಫಲರಾಗಿದ್ದಾರೆ.

೨೨ ಸಂಶೋಧನಾ ಕೃತಿ
ಡಾ.ಸಿ.ಜಿ. ಕುಶಾಲಪ್ಪ ಪಶ್ಚಿಮಘಟ್ಟದ ಜೀವವೈವಿಧ್ಯತೆಯ ಮಹತ್ವ ಹಾಗೂ ಸ್ಥಿತಿಗತಿ ಬಗ್ಗೆ ಸ್ಪಷ್ಟವಾದ ಅರಿವು ಹೊಂದಿದ್ದಾರೆ. ಯುನೆಸ್ಕೋ ಪಟ್ಟಿಗೆ ಸೇರಿರುವ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯ, ಸುಸ್ಥಿರ ನಿರ್ವಹಣೆಗೆ ಸಂಬಂಧಿಸಿದ್ದಂತೆ ೨೨ ಸಂಶೋಧನಾ ಕೃತಿಗಳನ್ನು ರಚಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

೧೫ ರಾಷ್ಟ್ರಗಳಲ್ಲಿ ಆಯೋಜಿಸಲಾಗಿರುವ ೨೦ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದಾರೆ. ೪ ಅಂತಾರಾಷ್ಟ್ರೀಯ, ೫ ರಾಷ್ಟ್ರೀಯ ಸೇರಿದ್ದಂತೆ ೩೪ ಸಮ್ಮೇಳನ ಆಯೋಜಿಸಿದ್ದ ಹೆಗ್ಗಳಿಕೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net