

ಮಡಿಕೇರಿ: ಹಲವು ವರ್ಷಗಳ ಕನಸಾಗಿದ್ದ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಬರಹಗಾರರಿಗೆ ಪ್ರತ್ಯೇಕ ಅಸ್ತಿತ್ವ ಸಿಕ್ಕಂತಾಗಿದೆ ಎಂದು ಕರ್ನಾಟಕ ಮುಕ್ತ ವಿವಿಯ ಪ್ರೋ.ಕವಿತಾ ರೈ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಜಿಲ್ಲೆಗೂ ಲೇಖಕಿಯರ ಸಂಘದ ಅವಶ್ಯಕತೆ ಇದೆ. ಸಂಘಕ್ಕೆ ಕನ್ನಡ ಮಾತ್ರವಲ್ಲದೆ ವಿಸ್ತಾರವಾದ ಆಯಾಮವಿದ್ದು, ಕೊಡವ, ಅರೆಭಾಷೆ, ಬ್ಯಾರಿ, ತುಳು ಎಲ್ಲಾ ಭಾಷೆಯ ಬರಹಗಾರರಿಗೂ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ. ಸಂಸ್ಕೃತಿ ವಿನಿಮಯದಿಂದ ಕಲಿಕೆಗೆ ಅನುಕೂಲವಾಗುತ್ತದೆ ಎಂದರು.
ಸಂಘಟನೆಯೊಂದು ರಾಜಕೀಯ ತಿರುವು ಪಡೆದಾಗ ಆರ್ಥಿಕ ಮುನ್ನಡೆಯಾಗಲಿದ್ದು, ಸದಸ್ಯತ್ವ ಹೆಚ್ಚಳ ಸೇರಿದಂತೆ ಬೇರೆ ಬೇರೆ ಶಕ್ತಿ ಪಡೆದುಕೊಳ್ಳುತ್ತದೆ. ಸಂಘಟನೆಗೂ ವಿರೋಧ ವ್ಯಕ್ತವಾಗಬಹುದು. ನೈಸರ್ಗಿಕ ಅಡೆತಡೆಗಳು ಬರಬಹುದು. ಆದರೆ ಎಲ್ಲರೂ ಒಗ್ಗಟ್ಟಾಗಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ್ ಕಾಮತ್, ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಡಾಟಿ ಪೂವಯ್ಯ, ನಗರಸಭೆ ನಿವೃತ್ತ ಆಯುಕ್ತೆ ಪುಷ್ಪಾವತಿ ಹಾಜರಿದ್ದರು.