ಕೊಡಗು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ

3adarshkdga7
Published on

ಮಡಿಕೇರಿ: ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಹೇಳಿದರು.


ಜಿಲ್ಲಾಡಳಿತ, ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೊಡಗು ಜಿಲ್ಲಾ ಮಟ್ಟದ ೩೦ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.


ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಜತೆಗೆ ಅಧ್ಯಯನ ಮಾಡಬೇಕು. ವಿಜ್ಞಾನ ಸಮಾವೇಶ ಮಕ್ಕಳ ಬೌದ್ಧಿಕ ವಿಕಸನ ಹಾಗೂ ಅನ್ವೇಷಣೆ ನಡೆಸಲು ಸಹಕಾರಿಯಾಗಿದೆ ಎಂದ ಅವರು, ಪ್ರಾಕೃತಿಕ ಸಂಪನ್ಮೂಲ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಪರಿಸರ ಮತ್ತು ವನ್ಯಜೀವಿಗಳ ಪಾತ್ರ ಪ್ರಮುಖವಾದುದು. ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯಜೀವಿಗಳು ಮತ್ತು ಮಾನವ ಸಂಘರ್ಷದ ಬಗ್ಗೆ ವಿದ್ಯಾರ್ಥಿಗಳು ವೈಜ್ಞಾನಿಕ ಅಧ್ಯಯನ ಕೈಗೊಂಡು ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕು. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನೀಡಲು ಪ್ರತಿಯೊಬ್ಬರೂ ಪಣ ತೊಡಬೇಕಿದೆ.ಹಾಗೂ ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಅಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಮತ್ತು ಸಮಾವೇಶದ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ತಮ್ಮ ಸುತ್ತಲಿನ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಸ್ವತಃ ತಾವೇ ಪರಿಹಾರ ಕಂಡುಕೊಳ್ಳುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು.


ಡಿಡಿಪಿಐ ಸಿ.ರಂಗಧಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸೂಕ್ತ ಅವಕಾಶಗಳನ್ನು ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಇಂತಹ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಶಿಕ್ಷಕರು ಪ್ರೇರಿಪಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಜಿ.ಎಚ್.ಮಹಮ್ಮದ್ ಹನೀಫ್ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.


ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ವಿಜ್ಞಾನ ಪದಾಧಿಕಾರಿಗಳಾದ ಎಂ.ಎನ್.ವೆಂಕಟನಾಯಕ್, ಜಿ.ಶ್ರೀನಾಥ್, ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್, ಸ್ಥಂಸ್ಥೆಯ ಸಂಯೋಜಕ ಎಸ್.ಐ.ಮುನೀರ್ ಅಹ್ಮದ್, ಖಜಾಂಚಿ ಫಯಾಜ್ ಅಹ್ಮದ್, ನಿರ್ದೇಶಕ ಲಿಯಾಖತ್ ಆಲಿ, ಪ್ರಿನ್ಸಿಪಾಲ್ ಜಾಯ್ಸ ವಿನಯ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಎಂ.ಎಚ್.ಮುಬೀನಾ ಇತರರು ಇದ್ದರು.

ವೈಜ್ಞಾನಿಕ ಪ್ರಬಂಧ ಮಂಡನೆ: ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ ೩೦ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಗಮನ ಸೆಳೆಯಿತು.
ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ ಎಂಬ ಕೇಂದ್ರ ವಿಷಯದಡಿ ವಿವಿದ ಉಪ ವಿಷಯಗಳ ಕುರಿತು ವಿವಿಧ ಶಾಲೆಗಳಿಂದ ಆಗಮಿಸಿದ್ದ ಕಿರಿಯ ವಿಜ್ಞಾನಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ವಿಜ್ಞಾನಿಗಳ ಮಾದರಿಯಲ್ಲಿ ಮಂಡಿಸಿ ಗಮನ ಸೆಳೆದರು.
ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ೨೪ ಕಿರಿಯ ವಿಜ್ಞಾನಿಗಳು ತಮ್ಮ ಸುತ್ತಲಿನ ಪ್ರದೇಶದ ಸಮಸ್ಯೆಗಳನ್ನು ವಿವಿಧ ಉಪ ವಿಷಯಗಳ ಕುರಿತು ಮಂಡಿಸಿದ ಪ್ರಬಂಧಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net