ಡಿ.೧ ರಂದು ಮಡಿಕೇರಿಯಲ್ಲಿ ಎಚ್‌ಐವಿ ಅರಿವು

Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ


ವಿಶ್ವ ಏಡ್ಸ್ ದಿನ ಪ್ರಯುಕ್ತ ಡಿಸೆಂಬರ್ ೧ ರಂದು ಮಡಿಕೇರಿಯಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಹೇಳಿದ್ದಾರೆ.

ಅಂದು ಬೆಳಗ್ಗೆ ೯ ಗಂಟೆಗೆ ಡಿಎಚ್‌ಒ ಕಚೇರಿ ಮುಂಭಾಗದಲ್ಲಿ ಜಾಗೃತಿ ಜಾಥಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಚಾಲನೆ ನೀಡಲಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾನಗೊಳಿಸು (ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್‌ನ್ನು ಕೊನೆಗಾಣಿಸೋಣ) ಘೋಷ ವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಎಚ್‌ಐವಿ/ ಏಡ್ಸ್ ಸೋಂಕಿರ ಜೀವನದಲ್ಲಿ ಹಾಗೂ ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ತಿಳಿಯುವ ಒಂದು ಅವಕಾಶ ಇದಾಗಿದೆ ಎಂದರು.

ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ, ಸಂಸ್ಕರಿಸದ ಚೂಪು ಸಾಧನಗಳು, ಸೂಜಿ, ಸಿರಿಂಜು, ಶಸ್ತ್ರಕ್ರಿಯಾ ಸಾಧನೆಗಳನ್ನು ಬಳಸುವುದು, ಎಚ್‌ಐವಿ ಸೋಂಕಿರುವ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುತ್ತದೆ. ಲೈಂಗಿಕ ಮುಂಜಾಗೃತ ಕ್ರಮಗಳ ಮೂಲಕ ಶೇ.೯೦ ರಷ್ಟು ಸೋಂಕು ಹರಡುವುದನ್ನು ತಡೆಯಬಹುದೆಂದು ಡಿಎಚ್‌ಒ ಹೇಳಿದರು.

ಜಿಲ್ಲಾಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಪ್ರಸ್ತುತ ೯೪೦ ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ೨೦೦೯ ರಿಂದ ಇದುವರೆಗೆ ೨,೧೨೨ ಎಚ್‌ಐವಿ ಸೋಂಕಿತರು ನೋಂದಾಯಿಸಲ್ಪಟ್ಟಿದ್ದಾರೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ಆನಂದ್ ಮಾಹಿತಿ ನೀಡಿದರು.

೨೦೨೨-೨೩ನೇ ಸಾಲಿನಲ್ಲಿ ೬೨ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಮಡಿಕೇರಿ ತಾಲೂಕು ೧೭, ಸೋಮವಾರಪೇಟೆ ೧೦ ಹಾಗೂ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ೨೫ ಜನರಿಗೆ ಸೋಂಕು ಪತ್ತೆಯಾಗಿದೆ. ಹೊರ ಜಿಲ್ಲೆಯ ೧೦ ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದರು.

ನ.೨೧ ರಿಂದ ಡಿಸೆಂಬರ್ ೪ ರವರೆಗೆ ಪುರುಷರ ಸಂತಾನಹರಣ ಚಿಕಿತ್ಸೆ ಆಯೋಜಿಸಲಾಗಿದೆ. ಯಾವ ತೊಂದರೆಯೂ ಇಲ್ಲದೇ ಪುರುಷರು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಬಹುದೆಂದರು. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನಾ- ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಬಿಪಿಎಲ್ ಕಾರ್ಡ್‌ದಾರರಿಗೆ ೫ ಲಕ್ಷ ಹಾಗೂ ಎಪಿಎಲ್ ಕಾರ್ಡ್‌ದಾರರು ೧.೫೦ ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net