ಕೊಡಗಿನ ಅಭಿವೃದ್ಧಿಗೆ ೧,೩೦೦ ಕೋಟಿ ರೂಪಾಯಿ

df9f49d8-09b7-4db9-a26a-65d1f1f4f553
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಾಲ್ಕುವರೆ ವರ್ಷದಲ್ಲಿ ೧,೩೦೦ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

೧೫ ಇಲಾಖೆ ಮೂಲಕ ೮೫೧ ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಪ್ರಕೃತಿ ವಿಕೋಪ ಪರಿಹಾರ, ಬೆಳೆ ಪರಿಹಾರ ಸೇರಿದ್ದಂತೆ ವಿವಿಧ ಇಲಾಖೆಗಳಿಂದ ಒಟ್ಟು ೧,೩೦೦ ಕೋಟಿ ರೂ. ಬಿಡುಗಡೆಯಾಗಿದೆ. ವಿದ್ಯುತ್ ಇಲಾಖೆಗೆ ೨೧ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಜನಪರವಾಗಿದ್ದು, ಕೊಡಗಿನ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಕಾರತ್ಮಕ ಸ್ಪಂದನೆ ಸಿಕ್ಕಿದೆ. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ಅತಿವಷ್ಟ ನಷ್ಟ ಪರಿಹಾರವಾಗಿ ೪೩,೭೭೫ ಅರ್ಜಿದಾರರಿಗೆ ೧೨೬.೮೫ ಕೋಟಿ ರೂ. ಬಿಡುಗಡೆಯಾಗಿದೆ. ದಾಖಲಾತಿ ಸರಿಯಿಲ್ಲದರಿಂದ ೯,೫೯೦ ಅರ್ಜಿ ತಿರಸ್ಕೃತಗೊಂಡಿದೆ. ಇನ್ನೂ ಹಲವು ಅರ್ಜಿದಾರರಿಗೆ ೧೩೭ ಕೋಟಿ ರೂ. ಶೀಘ್ರ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದರು.

ಕೃಷಿ ಜಮೀನು ಕೃಷಿಯೇತರ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದ ೭ ದಿನದೊಳಗೆ ಭೂಪರಿವರ್ತನೆ ಮಾಡಲು ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ರ ಸೆಕ್ಷನ್ ೯೫ ಡಿಗೆ ತಿದ್ದುಪಡಿ ತಂದಿದೆ. ೭ ದಿನದೊಳಗೆ ಡಿಸಿ ಭೂಪರಿವರ್ತನೆ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ ಭೂ ಪರಿವರ್ತನೆ ಆಗಿದೆ ಎಂದು ಪರಿಗಣಿಸಲಾಗುತ್ತದೆ. ಅರ್ಜಿದಾರರು ತಪ್ಪು ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ೧ ಲಕ್ಷ ಹಾಗೂ ಉದ್ದೇಶ ಬದಲಾವಣೆ ಮಾಡಿದ್ದಲ್ಲಿ ೨೫ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಅರ್ಜಿದಾರರು ಎಚ್ಚರ ವಹಿಸಬೇಕೆಂದರು.

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ೨೦೦೫ ಕ್ಕೂ ಮೊದಲು ಸರ್ಕಾರಿ ಜಾಗ (ಪೈಸಾರಿ) ಒತ್ತುವರಿ ಮಾಡಿಕೊಂಡು ತೋಟಗಾರಿಕೆ ಬೆಳೆ (ಕಾಫಿ, ಟೀ. ಕಾಳುಮೆಣಸು, ರಬ್ಬರ್) ತೋಟ ಮಾಡಿರುವವರಿಗೆ ಗೇಣಿ ಆಧಾರದಲ್ಲಿ ಒತ್ತುವರಿದಾರರಿಗೆ ನೀಡಲಾಗುತ್ತದೆ. ಒಂದು ಕುಟುಂಬ (ತಂದೆ, ತಾಯಿ, ಅವಿವಾಹಿತ ಮಕ್ಕಳು) ದ ಗರಿಷ್ಠ ೨೫ ಎಕರೆ ಒತ್ತುವರಿ ಜಾಗ ಗೇಣಿ ಆಧಾರದಲ್ಲಿ ನೀಡಲಾಗುತ್ತದೆ. ಅದಕ್ಕಾಗಿ ಕಂದಾಯ ಕಾಯ್ದೆ ೧೯೬೪ರ ೯೫ ಸಿಗೆ ತಿದ್ದುಪಡಿ ಮಾಡಲಾಗಿದೆ ಎಂದರು.

ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರೂ.ವರೆಗೆ ನೀಡುತ್ತಿದ್ದ ಕೃಷಿ ಸಾಲಕ್ಕೆ ಸಂಬಂಧಿಸಿದ್ದಂತೆ ವಿಧಿಸುತ್ತಿದ್ದ ಸ್ಟಾೃಂಪ್ ಡ್ಯೂಟಿ ಕೈ ಬಿಡುವಂತೆ ಸರ್ಕಾರ ದ ಗಮನ ಸೆಳೆಯಲಾಗಿದೆ. ಇದಕ್ಕಾಗಿ ಕರ್ನಾಟಕ ಕೃಷಿ ಸಾಲ ವ್ಯವಹಾರ ಮತ್ತು ಇತರೆ ಕಾಯ್ಕೆಯಲ್ಲಿ ಕಾಫಿ ಸೇರಿಸಲು ಕಂದಾಯ ಸಚಿವರು ಒಪ್ಪಿದ್ದಾರೆ.

ಕಾಫಿ ಬೆಳೆಗಾರರು ಬಳಸುವ ೧೦ ಎಚ್‌ಪಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕೊಡಗಿನ ಬೆಳೆಗಾರರು ಪಾವತಿಸಲು ಬಾಕಿ ಇರುವ ೪೮ ಕೋಟಿ ರೂ. ಮನ್ನಾ ಮಾಡುವಂತೆ ಸರ್ಕಾರದ ಗಮನ ಸೆಳೆಯಲಾಗಿದ್ದು, ಇಂಧನ ಸಚಿವರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆಂದರು.

ಕೃಷಿಗೆ ಒಳಪಡಿಸದಿದ್ದರೂ ಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಪಡಿಸಲು ಸರ್ಕಾರ ಸಮ್ಮತ್ತಿ ಸೂಚಿಸಿದೆ. ಇದರಿಂದ ಕಂದಾಯ ನಿಗದಿಗೆ ಇದ್ದ ಅಡೆತಡೆ ನಿವಾರಣೆಯಾಗಿದೆ ಎಂದು ಕೆ.ಜಿ. ಬೋಪಯ್ಯ ತಿಳಿಸಿದರು.

ಬಿಜೆಪಿ ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಅಶ್ವಿನ್ ಸತೀಶ್, ಪ್ರಧಾನ ಕಾರ್ಯದರ್ಶಿಗಳಾದ ಮುದ್ದಂಡ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ, ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್ ಘೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net