ಡಿಸಿ ಆದೇಶ ಉಲ್ಲಂಘಿಸಿ ವ್ಯಾಪಾರ ವಹಿವಾಟು

10mdks3 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನಧಿಕೃತ ನಿರ್ಮಾಣ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ನೀಡಿರುವ ಆದೇಶ ಉಲ್ಲಂಘಿಸಿ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಮಮತಾ ಕಾಂಪ್ಲೆಕ್ಸ್ ಮುಚ್ಚುವಂತೆ ಆಗಸ್ಟ್ ೧೬ ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದೇಶ ಹೊರ ಬಿದ್ದ ತಕ್ಷಣ ೧ ದಿನ ಮಟ್ಟಿಗೆ ಮಾತ್ರ ವಾಣಿಜ್ಯ ಮಳಿಗೆ ಮುಚ್ಚಿಸಲಾಗಿತ್ತು. ತದನಂತರ ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರಿಸಿದೆ.

ಕಾಲೇಜು ರಸ್ತೆಯಲ್ಲಿ ಬ್ಲಾಕ್ ನಂಬರ್ ೭ ರ ಸರ್ವೇ ನಂಬರ್ ೧೮, ೧೮/೧, ೧೮/೨ ರಲ್ಲಿ ನಿರ್ಮಾಣವಾಗಿರುವ ಪಿ. ಥೀಕಮ್ ಚಂದ್ ಮಾಲೀಕತ್ವದ ವಾಣಿಜ್ಯ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾ ಸಂಯೋಜಕ ತೆನ್ನೀರ ಮೈನ ಡಿಸಿಗೆ ಮಾರ್ಚ್ ೨೯ ರಂದು ದೂರು ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಗಸ್ಟ್ ೧೬ ರಂದು ಸಭೆ ನಡೆದಿತ್ತು. ಅಂದಿನ ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಗರಸಭೆ ಪೌರಾಯುಕ್ತರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಂದಾಯಾಧಿಕಾರಿ, ಕಿರಿಯ ಇಂಜಿನಿಯರ್ ಪಾಲ್ಗೊಂಡಿದ್ದರು.

ಅನುಮೋದಿತ ನೀಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಿಗದಿತ ಸೆಟ್ ಬ್ಯಾಕ್ ಬಿಡದೆ ಶೇ.೧೫೧.೪೭ ರಷ್ಟು ಉಲ್ಲಂಘನೆ ಮಾಡಿರುವುದರಿಂದ ತಕ್ಷಣ ವಾಣಿಜ್ಯ ಮಳಿಗೆ ಮುಚ್ಚುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಲು ಡಿಸಿ ಆದೇಶಿಸಿದ್ದರು. ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು.

ಅನುಮತಿ ಇಲ್ಲ
ಮಮತಾ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಯಾವುದೇ ಉದ್ದಿಮೆ ಪರವಾನಗಿ ನೀಡಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಯನ್ವಯ ತೆನ್ನೀರ ಮೈನ ಕೇಳಿದ ಪ್ರಶ್ನೆಗೆ ಜುಲೈ ೭ ರಂದು ನಗರಸಭೆ ಲಿಖಿತವಾಗಿ ಉತ್ತರಿಸಿದೆ. ಉದ್ದಿಮೆ ಪರವಾನಗಿ ಇಲ್ಲದಿದ್ದರೂ ವ್ಯಾಪಾರ ವಹಿವಾಟು ಮುಂದುವರಿದಿದೆ. ಹೀಗಿದ್ದರೂ, ಕ್ರಮ ತೆಗೆದುಕೊಳ್ಳುವ ಗೋಜಿಗೆ ನಗರಸಭೆ ಹೋಗಿಲ್ಲ.

ಪೌರಾಯುಕ್ತರ ವರದಿ
ನಗರಸಭೆ ದಾಖಲೆ ಪ್ರಕಾರ ಪಿ.ಥೀಕಮ್ ಚಂದ್ ಸರ್ವೇ ನಂಬರ್ ೧೮, ೧೮/೧, ೧೮/೨ ರಲ್ಲಿ ಒಟ್ಟು ೧೮೨.೧೦ ಚದರ ಮೀಟರ್ ಜಾಗ ಹೊಂದಿದ್ದಾರೆ. ಈ ಜಾಗದಲ್ಲಿ ಕಾಲೇಜು ರಸ್ತೆಯಿಂದ ಸಂಪರ್ಕ ಇರುವಂತೆ ನೆಲ ಅಂತಸ್ತಿನಲ್ಲಿ ೬೭.೨೧ ಚ. ಮೀ. ಹಾಗೂ ೧ನೇ ಅಂತಸ್ತಿನಲ್ಲಿ ೬೭.೨೧ ಚ.ಮೀ. (ಒಟ್ಟು ೧೩೪.೪೨ ಚದರ ಮೀಟರ್) ವಿಸ್ತೀರ್ಣದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ಇದೇ ಸರ್ವೇ ನಂಬರ್‌ನಲ್ಲಿ ಹಿಲ್ ರಸ್ತೆಯಿಂದ ಸಂಪರ್ಕ ಇರುವಂತೆ ನೆಲಮಹಡಿಯಲ್ಲಿ ೪೭.೭೩ ಚ.ಮೀ. ಅಳತೆಯಲ್ಲಿ ವಾಹನ ನಿಲುಗಡೆ ಹಾಗೂ ಮೊದಲ ಮಹಡಿ ಯಲ್ಲಿ ೪೭.೭೩ ಚ.ಮೀ. ಅಳತೆಯಲ್ಲಿ ವಸತಿ ಉದ್ದೇಶಕ್ಕೆ ಪರವಾನಗಿ ಪಡೆದುಕೊಂಡಿದ್ದಾರೆ. ಪರವಾನಗಿ ಪಡೆದ ನಂತರ ಷರತ್ತು ಉಲ್ಲಂಘಿಸಿ ಹೆಚ್ಚುವರಿ ಕಟ್ಟಡ ನಿರ್ಮಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

೪೪೦.೬೭ ಚದರ ಮೀಟರ್ ಹೆಚ್ಚುವರಿ
ನಗರಸಭೆ ಪೌರಾಯುಕ್ತರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅನಧಿಕೃತ ನಿರ್ಮಾಣ ಬಗ್ಗೆ ತಮ್ಮ ವರದಿಯಲ್ಲಿ ಉಲ್ಲೇಖಿಸಿ ದ್ದಾರೆ. ಕಾಲೇಜು ರಸ್ತೆ ಹಾಗೂ ಹಿಲ್ ರಸ್ತೆಯಿಂದ ೨೯೦.೯೩ ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ಕಟ್ಟಲು ಅನುಮೋದನೆ ಪಡೆದಿದ್ದು, ೭೩೧.೬೦ ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಅನುಮೋದಿತ ಅಳತೆಗಿಂತ ಹೆಚ್ಚುವರಿಯಾಗಿ ೪೪೦.೬೭ ಚ.ಮೀ. (ಶೇ.೧೫೧.೪೭ ರಷ್ಟು ಹೆಚ್ಚುವರಿ) ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿದ್ದಾರೆ.

ಕಾಲೇಜು ರಸ್ತೆಯಿಂದ ಸಂಪರ್ಕವಿರುವ ವಾಣಿಜ್ಯ ಕಟ್ಟಡವನ್ನು ರಸ್ತೆಯ ಮಧ್ಯಭಾಗದಿಂದ ೮.೫೦ ಮೀಟರ್ ಬಿಟ್ಟು ಕಟ್ಟಬೇಕಾಗಿರುತ್ತದೆ. ಆದರೆ, ೬ ಮೀಟರ್ ಮಾತ್ರ ಬಿಟ್ಟಿದ್ದು, ೨.೫೦ ಮೀಟರ್ ಜಾಗದಲ್ಲಿ ಮೆಟ್ಟಿಲುಗಳನ್ನು ಕಟ್ಟಿದ್ದಾರೆ. ಹಿಲ್ ರಸ್ತೆಯಿಂದ ವಸತಿ ಕಟ್ಟಡಕ್ಕೆ ಪರವಾನಗಿ ಪಡೆದಿದ್ದು, ೨ ಕಡೆ ೧ ಮೀಟರ್ ಸೆಟ್ ಬ್ಯಾಕ್ ಬಿಡಬೇಕಾಗಿತ್ತು. ಆದರೆ, ಇಲ್ಲಿ ಸೆಟ್‌ಬ್ಯಾಕ್ ಬಿಡದೆ ಕಟ್ಟಡ ಕಟ್ಟಿದ್ದಾರೆ.

ಅನುಮೋದಿತ ನೀಲಿ ನಕ್ಷೆ ಪ್ರಕಾರ ಮಾಲೀಕರು ಕಾಲೇಜು ರಸ್ತೆಯಿಂದ ಹಾಗೂ ಹಿಲ್‌ರಸ್ತೆಯಿಂದ ಸಂಪರ್ಕ ಹೊಂದಿರುವಂತೆ ೨ ಮಹಡಿ ಕಟ್ಟಡ ಕಟ್ಟಲು ಪರವಾನಗಿ ಪಡೆದಿದ್ದಾರೆ. ಆದರೆ, ೨ ಕಡೆಯ ಜಾಗವನ್ನು ಒಂದೇ ಬೆಸ್‌ಮೆಂಟಿನ ಮೇಲೆ ನೆಲ ಮಾಳೀಗೆ, ನೆಲ ಅಂತಸ್ತು, ೧ನೇ ಅಂತಸ್ತು, ೨ನೇ ಅಂತಸ್ತು (ವಾಣಿಜ್ಯ) ಹಾಗೂ ೩ನೇ ಅಂತಸ್ತು (ವಸತಿ) ಕಟ್ಟಡ ಕಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಗರಸಭೆ ತೀರ್ಮಾನ
ಮಾರ್ಚ್ ೨೩ ರಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಮಮತಾ ಕಾಂಪ್ಲೆಕ್ಸ್ ಬಗ್ಗೆ ಚರ್ಚೆ ನಡೆದಿತ್ತು. ಅನುಮೋದನೆಗೊಂಡ ನೀಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸಿದ್ದು, ಕಾನೂನು ಬಾಹಿರ ಕಟ್ಟಡ ಎಂದು ಪರಿಗಣಿಸುವಂತೆ ತೀರ್ಮಾನಿಸಲಾಗಿತ್ತು.

ಪೌರಸಭೆಗಳ ಕಾಯ್ದೆ ೧೯೬೪ರ ಸೆಕ್ಷನ್ ೧೦೭ರ ಪ್ರಕಾರ ಸ್ವತ್ತು ತೆರಿಗೆಯ ಶೇ.೨ ರಷ್ಟು ಸಮನಾದ ದಂಡ ವಿಧಿಸಲು ಹಾಗೂ ಕಾನೂನು ಸಲಹೆಗಾರರ ಸಲಹೆಯಂತೆ ಪೌರಸಭೆಗಳ ಅಧಿನಿಯಮ ೧೯೬೪, ಕಾಯ್ದೆ ೧೯೦ ರಂತೆ ಅನುಮೋದಿತ ನೀಲಿ ನಕ್ಷೆಯ ಭಾಗಕ್ಕೆ ಮುಕ್ತಾಯ ಪ್ರಮಾಣ ಪತ್ರ ನೀಡುವಂತೆ ತೀರ್ಮಾನಿಸಲಾಗಿತ್ತೆಂದು ಪೌರಾಯುಕ್ತರು ವರದಿ ಸಲ್ಲಿಸಿದ್ದರು.

**
ಒಂದು ಅಂತಸ್ತು ಹೆಚ್ಚುವರಿ ಕಟ್ಟಿದ್ದೇನೆ. ಕಾಂಗ್ರೆಸ್ ವ್ಯಕ್ತಿಯೊಬ್ಬರು ದೂರು ನೀಡಿದ್ದರಿಂದ ತೊಂದರೆಯಾಗಿದೆ. ಸಾಲ ಮಾಡಿ, ಕಟ್ಟಡ ಕಟ್ಟಿದ್ದು ತೊಂದರೆಯಾಗುತ್ತದೆ ಎಂದು ಅಧಿಕಾರಿ ಗಮನಕ್ಕೆ ತಂದಿದ್ದೇನೆ. ಒಂದು ದಿನ ಮುಚ್ಚಿಸಿದ್ದರು. ಅಲ್ಲಿಂದ ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದೇನೆ. ಅಕ್ಕಪಕ್ಕದ ಕಟ್ಟಡಗಳಲ್ಲಿಯೂ ಅನಧಿಕೃತ ನಿರ್ಮಾಣವಿದೆ. ಪಿ.ಥೀಕಮ್ ಚಂದ್, ಮಾಲೀಕರು, ಮಮತಾ ಕಾಂಪ್ಲೆಕ್ಸ್, ಮಡಿಕೇರಿ.

**
ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು. ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯ ಆಗಬೇಕು. ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಆಡಳಿತ ವೈಫಲ್ಯವೇ ಕಾರಣ. ಇದಕ್ಕೆ ನಗರಸಭೆಯನ್ನು ಹೊಣೆಯನ್ನಾಗಿಸಿ, ಸೂಪರ್‌ಸೀಡ್ ಮಾಡಬೇಕು. ತೆನ್ನೀರ ಮೈನ, ಸಂಯೋಜಕರು, ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ.

**
ಜಿಲ್ಲಾಧಿಕಾರಿ ಆದೇಶದಂತೆ ವಾಣಿಜ್ಯ ಮಳಿಗೆ ಮುಚ್ಚಿಸಲು ಪೌರಾಯುಕ್ತರು ಸೂಚನೆ ನೀಡಿದ್ದರು. ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾರ್ಚ್ ತಿಂಗಳಿನಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ವಾಣಿಜ್ಯ ಮಳಿಗೆ ಬಗ್ಗೆ ಚರ್ಚೆ ನಡೆದಿತ್ತು. ಡಿಸಿಗೆ ದೂರು ಸಲ್ಲಿಸಿದ್ದ ಮೇಲೆ ಏನಾಯಿತ್ತೆಂಬ ವಿಚಾರ ನಮ್ಮ ಗಮನಕ್ಕೆ ಬರಲಿಲ್ಲ. ನೆರವಂಡ ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರಸಭೆ.

**
ಈ ಹಿಂದಿನ ಪೌರಾಯುಕ್ತರು ಹಣ ಪಡೆದುಕೊಂಡು ಕಟ್ಟಡ ಕಟ್ಟಡಲು ಅವಕಾಶ ಮಾಡಿಕೊಟ್ಟಿದ್ದಾರೆಂಬ ಆರೋಪ ವ್ಯಕ್ತವಾಗಿತ್ತು. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ಮೇಲೆ ಕಟ್ಟಡ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಗಮನಕ್ಕೆ ಬಂದ ಮೇಲೆ ನಗರಸಭೆ ಗಮನಕ್ಕೆ ಬಂದಿಲ್ಲ. ಉಮೇಶ್ ಸುಬ್ರಮಣಿ, ಅಧ್ಯಕ್ಷರು, ಸ್ಥಾಯಿ ಸಮಿತಿ, ಮಡಿಕೇರಿ ನಗರಸಭೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net